ಮಂಗಳೂರು/ಉಡುಪಿ, ಜೂ 25 (DaijiworldNews/HR): ಅಲ್ಪ ವಿರಾಮದ ಬಳಿಕ ಕರ್ನಾಟಕದ ಕರಾವಳಿ ಪ್ರದೇಶಗಳಲ್ಲಿ ಮುಂಗಾರು ಮತ್ತೆ ಚುರುಕು ಪಡೆದುಕೊಂಡಿದ್ದು, ಶನಿವಾರ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ ದಿನವಿಡೀ ಭಾರಿ ಮಳೆಯಾಗಿದೆ.
ಬೆಳ್ತಗಂಡಿಯಲ್ಲಿ ಮನೆಯೊಂದರ ಮೇಲೆ ಮರ ಬಿದ್ದಿದೆ. ಮಂಗಳೂರಿನಲ್ಲಿ ಮರ ಬಿದ್ದು ಕೋಡಿಕಲ್ ರಸ್ತೆಯಲ್ಲಿ ತಾತ್ಕಾಲಿಕವಾಗಿ ಸಂಚಾರಕ್ಕೆ ಅಡ್ಡಿಯಾಗಿದೆ.
ಇನ್ನು ಎಡಬಿಡದೆ ಸುರಿಯುತ್ತಿರುವ ಮಳೆಯಿಂದಾಗಿ ಕುಕ್ಕೆ, ಸುಬ್ರಹ್ಮಣ್ಯ ಕುಮಾರಧಾರಾ ನದಿಯಲ್ಲಿ ನೀರಿನ ಹರಿವು ಹೆಚ್ಚಾಗಿದೆ. ಜೂನ್ 25 ರವರೆಗೆ ಆರೆಂಜ್ ಅಲರ್ಟ್ ಘೋಷಿಸಲಾಗಿದ್ದು, ಜೂನ್ 25 ರಿಂದ 29 ರವರೆಗೆ ಎಲ್ಲೋ ಅಲರ್ಟ್ ಘೋಷಿಸಲಾಗಿದೆ.
ಸತತ ಮಳೆಯಿಂದಾಗಿ ಎರಡೂ ಜಿಲ್ಲೆಗಳಲ್ಲಿ ಗರಿಷ್ಠ ತಾಪಮಾನದಲ್ಲಿ ಇಳಿಕೆಯಾಗಿದ್ದು, ಶನಿವಾರ ಮಂಗಳೂರಿನಲ್ಲಿ ಗರಿಷ್ಠ ತಾಪಮಾನ 28 ಡಿಗ್ರಿ ಸೆಲ್ಸಿಯಸ್ ಮತ್ತು ಕನಿಷ್ಠ 23.2 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ.
ಉಡುಪಿ ಜಿಲ್ಲೆಯ ವಿವಿಧೆಡೆ ಭಾರೀ ಮಳೆಯಾಗಿದ್ದು, ಹಲವಾರು ಮನೆಗಳಿಗೆ ಹಾನಿಯಾಗಿದೆ. ಸ್ವರ್ಣ ಮತ್ತು ಸೀತಾ ನದಿಗಳಲ್ಲಿ ನೀರಿನ ಮಟ್ಟ ನಿರಂತರವಾಗಿ ಏರುತ್ತಿದೆ.
ಕುಂದಾಪುರ, ಬೈಂದೂರಿನಲ್ಲಿ ಶನಿವಾರವೂ ಭಾರಿ ಮಳೆಯಾಗಿದ್ದು, ಸಮುದ್ರದಲ್ಲಿ ಅಲೆಗಳ ಅಬ್ಬರ ಜೋರಾಗಿದೆ.