ಮಂಗಳೂರು, ಜೂ 24 (DaijiworldNews/HR): ''ಆಗಸ್ಟ್ 15ರೊಳಗೆ ನಗರವನ್ನು ಮಾದಕ ದ್ರವ್ಯಗಳ(ಡ್ರಗ್ಸ್ ) ಮತ್ತು ಅದರ ದಂಧೆಯಿಂದ ಮುಕ್ತಗೊಳಿಸಲು ಪೊಲೀಸ್ ಇಲಾಖೆ ಪ್ರಾಮಾಣಿಕವಾಗಿ ಶ್ರಮಿಸುತ್ತಿದೆ'' ಎಂದು ಉಪ ಪೊಲೀಸ್ ಆಯುಕ್ತ (ಅಪರಾಧ ಮತ್ತು ಸಂಚಾರ) ಬಿ.ಪಿ.ದಿನೇಶ್ ಕುಮಾರ್ ಹೇಳಿದ್ದಾರೆ.
ಮಂಗಳೂರು ನಗರ ಪೊಲೀಸ್ ವತಿಯಿಂದ ಜೂನ್ 24 ರಂದು ಶನಿವಾರ ಆಯೋಜಿಸಿದ್ದ ಸಾರ್ವಜನಿಕ ಕುಂದುಕೊರತೆಗಳ ನಿವಾರಣಾ ಸಭೆಯಲ್ಲಿ ಮಾತನಾಡಿದ ಅವರು, ಡ್ರಗ್ಸ್ ಪ್ರಕರಣಗಳನ್ನು ತಡೆಗಟ್ಟಲು ಸಾರ್ವಜನಿಕರು ಸಹಕರಿಸಬೇಕು. ಕಡಿವಾಣ ಹಾಕದಿದ್ದರೆ ಪ್ರತಿಯೊಂದು ಮನೆಗೂ ಡ್ರಗ್ಸ್ ಸೇರಬಹುದು. ಡ್ರಗ್ಸ್ ಸೇವನೆ ಮಾಡುವವರಿದ್ದರೆ ಅವರ ವಿರುದ್ಧ ಪ್ರಕರಣ ದಾಖಲಿಸುವುದಿಲ್ಲ ಬದಲಾಗಿ ಸೇವನೆ ಮಾಡುವವರಿಗೆ ಕೌನ್ಸಿಲಿಂಗ್ ನಡೆಸಿ, ಡ್ರಗ್ಸ್ ಮುಕ್ತರನ್ನಾಗಿಸುತ್ತೇವೆ. ಡ್ರಗ್ಸ್ ಸೇವನೆ ಮಾಡುವವರು ನಮಗೆ ಬೇಡ, ಪೆಡ್ಲರ್ಸ್ ಬೇಕಾಗಿದ್ದಾರೆ ಎಂದರು.
ಇನ್ನು ನಾವು ಶಾಲಾ-ಕಾಲೇಜಿಗೆ ಹೋಗುವ ಮಕ್ಕಳು ಮತ್ತು ಸಿಬ್ಬಂದಿ ಮತ್ತು ಬೋಧಕೇತರ ಸಿಬ್ಬಂದಿಯನ್ನು ಭೇಟಿ ಮಾಡಿ ಮಾದಕ ವಸ್ತುಗಳ ದುಷ್ಪರಿಣಾಮಗಳ ಬಗ್ಗೆ ಜಾಗೃತಿ ಮೂಡಿಸುತ್ತಿದ್ದೇವೆ. ಪೊಲೀಸ್ ಅಧಿಕಾರಿಗಳ ತಂಡ ಸಕ್ರಿಯವಾಗಿದೆ ಮತ್ತು ಮಾದಕ ವಸ್ತುಗಳ ಬಳಕೆಯನ್ನು ನಿಗ್ರಹಿಸಲು ಕೆಲಸದಲ್ಲಿದೆ ಎಂದಿದ್ದಾರೆ.
ನಗರದಲ್ಲಿ ಸ್ವತಂತ್ರವಾಗಿ ಮನೆ ಮತ್ತು ಫ್ಲಾಟ್ಗಳಲ್ಲಿ ಒಂಟಿಯಾಗಿ ವಾಸಿಸುವ ವೃದ್ಧರಿಗೆ ಪೊಲೀಸ್ ರಕ್ಷಣೆ ನೀಡುವ ಕುರಿತು ಸಾರ್ವಜನಿಕರ ಪ್ರಶ್ನೆಗೆ ಉತ್ತರಿಸಿದ ಡಿಸಿಪಿ, ‘ಈಗಾಗಲೇ ಪೊಲೀಸ್ ಇಲಾಖೆಯು ವಾಸಿಸುತ್ತಿರುವ ವೃದ್ಧರೊಂದಿಗೆ ಸಂಪರ್ಕದಲ್ಲಿದೆ. ಮನೆಯಲ್ಲಿ ಒಬ್ಬರೇ ಇದ್ದು ನಗರದಲ್ಲಿ ವಾಸವಾಗಿರುವ ಇಂತಹವರ ಬಗ್ಗೆ ಮಾಹಿತಿ ಸಂಗ್ರಹಿಸುತ್ತಿದ್ದೇವೆ ಎಂದರು.
ತಹಶೀಲ್ದಾರ ಭಾರತಿ ಮಾತನಾಡಿ, ಬಾಡಿಗೆಗೆ ಆಸ್ತಿ ನೀಡುವ ಮನೆ ಮತ್ತು ಫ್ಲ್ಯಾಟ್ಗಳ ಮಾಲೀಕರು ಎಚ್ಚರಿಕೆ ವಹಿಸಬೇಕು ಮತ್ತು ಅವುಗಳನ್ನು ತೆಗೆದುಕೊಳ್ಳುವ ಮೊದಲು ಹಿನ್ನೆಲೆ ಪರಿಶೀಲನೆ ನಡೆಸಬೇಕು, ಸಾರ್ವಜನಿಕರು ಯಾವುದೇ ಕುಂದುಕೊರತೆಗಳಿದ್ದಲ್ಲಿ ಪೊಲೀಸರಿಗೆ 112 ಗೆ ಕರೆ ಮಾಡಬಹುದು ಎಂದರು.
ಈ ವೇಳೆ ಸಬ್ ಇನ್ಸ್ ಪೆಕ್ಟರ್ ಅಂಕಿತಾ ಹಾಗೂ ಇತರೆ ಸಿಬ್ಬಂದಿ ಉಪಸ್ಥಿತರಿದ್ದರು.