ಕುಂದಾಪುರ, ಜೂ 24 (DaijiworldNews/HR): ಸುವರ್ಣ ಸಂಭ್ರಮದಲ್ಲಿರುವ ಕುಂದಾಪುರ ಪುರಸಭಾ ವ್ಯಾಪ್ತಿಯ ಚರ್ಚ್ರೋಡ್ ವಾರ್ಡ್ ರಂಗನಹಿತ್ಲು ಪರಿಸರದ ಬರೆಕಟ್ಟು ರಸ್ತೆಯ ತುದಿ 1.5 ಕಿ.ಮೀ ದೂರ ಇನ್ನೂ ಕೂಡಾ ಅಭಿವೃದ್ದಿಗೊಂಡಿಲ್ಲ. ಬರೆಕಟ್ಟು ರಸ್ತೆಯ ದುರ್ಗಾಪರಮೇಶ್ವರಿ ದೇವಸ್ಥಾನ ಕ್ರಾಸ್ನಿಂದ ಮುಂದುವರಿದ ಪುರಾತನವಾದ ರಸ್ತೆ ಇನ್ನೂ ಕೂಡಾ ಕಚ್ಚಾ ರಸ್ತೆಯಾಗಿಯೇ ಉಳಿದಿದೆ. ಈ ರಸ್ತೆ ಕೊನೆಯ ಭಾಗವನ್ನು ಪುರಸಭೆ ಸಂಪೂರ್ಣವಾಗಿ ನಿರ್ಲಕ್ಷ್ಯ ಮಾಡಿದೆ ಎಂದು ಆ ಭಾಗದ ಸಾರ್ವಜನಿಕರು ಆರೋಪಿಸಿದ್ದಾರೆ.
ಈ ರಸ್ತೆಯನ್ನೇ ಆಶ್ರಯಿಸಿಕೊಂಡು ಸುಮಾರು 30ಕ್ಕೂ ಹೆಚ್ಚು ಮನೆಗಳಿವೆ. ಇನ್ನೂ ಕೂಡಾ ಸಾಕಷ್ಟು ಮನೆಗಳು ನಿರ್ಮಾಣ ಹಂತದಲ್ಲಿದೆ. ವೇಗವಾಗಿ ಈ ಭಾಗ ಕೂಡಾ ಬೆಳೆಯುತ್ತಿದೆ. ಆದರೆ ಮೂಲ ಸೌಕರ್ಯವಾಗಿರುವ ರಸ್ತೆಯ ಅಭಿವೃದ್ದಿ ಮಾತ್ರ ಇನ್ನೂ ಹಾಗೆಯೇ ಇದೆ. ಪುರಸಭೆ ವ್ಯಾಪ್ತಿಯಲ್ಲಿನ ಪ್ರಮುಖವಾದ ರಸ್ತೆಯೇ ಕಾಯಕಲ್ಪವಿಲ್ಲದೇ ಉಳಿದುಕೊಂಡಿರುವುದು ಆಶ್ಚರ್ಯ.
ಮಳೆಗಾಲದಲ್ಲಿ ಈ ಭಾಗದ ಜನರು ಸಂಚರಿಸುವುದೇ ಕಷ್ಟಸಾಧ್ಯ. ನೀರು ತುಂಬುವ ಪ್ರದೇಶ ಇದಾದ್ದರಿಂದ ರಸ್ತೆ ಎಂದರೆ ಕಂಬಳ ಗದ್ದೆಯಂತಾಗುತ್ತದೆ. ಕೆಸರುರಾಶಿಯಲ್ಲಿ ಸರ್ಕಸ್ ಮಾಡುತ್ತ ಮನೆ ತಲುಪಬೇಕಾದ ಸ್ಥಿತಿ ಇರುತ್ತದೆ. ದ್ವಿಚಕ್ರ ವಾಹನ ಸವಾರರ ಪಾಡು ಹೇಳತಿರದು. ಕೆಸರು ಗದ್ದೆಯಂತಾಗುವ ಈ ರಸ್ತೆಯಲ್ಲಿ ನಡೆದುಕೊಂಡು ಹೋಗುವುದೇ ಕಷ್ಟ. ಶಾಲಾ ವಿದ್ಯಾರ್ಥಿಗಳು ಬಲು ಕಷ್ಟದಿಂದಲೇ ಈ ರಸ್ತೆಯಲ್ಲಿ ಸಂಚರಿಸಬೇಕು. ಮಳೆಗಾಲದಲ್ಲಿ ರಿಕ್ಷಾ ಕೂಡಾ ಬರಲು ಕಷ್ಟವಾಗುತ್ತದೆ. ಈ ಸಮಸ್ಯೆಗೆ ತಾತ್ಕಾಲಿಕ ಪರಿಹಾರವಾಗಿ ಸಾರ್ವಜನಿಕರೇ ಹೆಂಚಿನ ತುಂಡು, ತುಂಡು ಕಲ್ಲುಗಳನ್ನು ಹಾಕಿಕೊಳ್ಳುತ್ತಾರೆ. ಅದು ಕೆಲವೇ ದಿನಗಳಿಗೆ ಮಾತ್ರ. ಸಂಬಂಧಪಟ್ಟವರು ಕನಿಷ್ಟ ಪಕ್ಷ ವೆಟ್ಮಿಕ್ಸ್ನ್ನು ಹಾಕಿ ಸಂಚಾರಕ್ಕೆ ಅನುವು ಮಾಡಿಕೊಡುವುದಿಲ್ಲ ಎನ್ನುತ್ತಾರೆ ಸ್ಥಳೀಯ ನಿವಾಸಿಗಳು.
ಚುನಾವಣಾ ಸಂದರ್ಭದಲ್ಲಿ ರಸ್ತೆ ಕಾಂಕ್ರೀಟಿಕರಣದ ಆಶ್ವಾಸನೆ ಕೊಡುವ ರಾಜಕೀಯ ಪಕ್ಷದ ಪ್ರತಿನಿಧಿಗಳು ಚುನಾವಣೆಯ ಬಳಿಕ ನಮ್ಮ ಸಮಸ್ಯೆಯನ್ನು ಆಲಿಸುವುದೇ ಇಲ್ಲ ಎಂದು ಸ್ಥಳೀಯ ಜನರು ದೂರುತ್ತದೆ. ಸಾಕಷ್ಟು ಹಳೆಯದಾದ ರಸ್ತೆ ಇದಾಗಿದ್ದು ಇಷ್ಟರವರೆಗೆ ಈ ರಸ್ತೆಗೆ ಮುಕ್ತಿ ನೀಡುವ ಕೆಲಸವಾಗಿಲ್ಲ. ಸುಂದರ ಕುಂದಾಪುರದ ಕಲ್ಪನೆಯಲ್ಲಿರುವ ಆಡಳಿತ ಪುರಸಭಾ ವ್ಯಾಪ್ತಿಯ ಒಳಗಡೆ ಇರುವ ಪ್ರಮುಖ ರಸ್ತೆಗಳಿಗೆ ಇನ್ನೂ ಕೂಡಾ ಕಾಯಕಲ್ಪ ಕೊಡಲು ಮುಂದಾಗದಿರುವುದು ವಿಪರ್ಯಾಸವೇ ಸರಿ.