Karavali
ಕುಂದಾಪುರ: ಇನ್ನು ಈಡೇರದ ಮಾವಿನಗುಳಿ ಗ್ರಾಮಸ್ಥರ ಶಾಶ್ವತ ಕಾಲುಸಂಕ ಬೇಡಿಕೆ
- Sat, Jun 24 2023 08:56:43 AM
-
ಕುಂದಾಪುರ, ಜೂ 24 (DaijiworldNews/MS): ಕುಂದಾಪುರ ತಾಲೂಕಿನ ಗುಲ್ವಾಡಿ ಗ್ರಾಮದ ಮಾವಿನಗುಳಿ ಎನ್ನುವ ಗ್ರಾಮೀಣ ಪ್ರದೇಶದ ಬಹುಬೇಡಿಕೆಯ ಕಾಲುಸಂಕದ ಬೇಡಿಕೆ ಇನ್ನೂ ಕೂಡಾ ಜೀವಂತವಾಗಿ ಉಳಿದುಕೊಂಡಿದೆ. ಸರ್ಕಾರಗಳ ಅಭಿವೃದ್ದಿ ಮಂತ್ರ ಕೇವಲ ಪೇಟೆ ಪಟ್ಟಣಗಳಿಗಷ್ಟೇ ಸೀಮಿತವಾಗಿದೆ ಎನ್ನುವುದಕ್ಕೆ ಮಾವಿನಗುಳಿ ಜಡ್ಡು ಪ್ರದೇಶ ಜನರ ಕಾಲುಸಂಕ ದಾಟುವ ಆತಂಕದ ಕಥೆಯೇ ಸಾಕ್ಷಿ.
ಕರ್ಕುಂಜೆ ಗ್ರಾಮ ಪಂಚಾಯತ್ ವಿಭಜನೆ ಆದಾಗ ಮಾವಿನಗುಳಿ ಪ್ರದೇಶ ಗುಲ್ವಾಡಿ ಗ್ರಾಮ ಪಂಚಾಯತ್ಗೆ ಸೇರಿತು. ಆಗ ಕೂಡಾ ಈ ಅವೈಜ್ಞಾನಿಕ ವಿಭಜನೆಯ ಬಗ್ಗೆ ಪ್ರತಿರೋಧ ಕೇಳಿ ಬಂದಿತ್ತು. ಮತ್ತೆ ಅದು ಅಲ್ಲಿಗೆ ಸ್ತಬ್ದವಾಯಿತು.
"ಮಾವಿನಗುಳಿ ಜಡ್ಡು" ಕುಬ್ಜ ನದಿಯ ತಟದಲ್ಲಿದೆ. ಕುಬ್ಜ ನದಿಯ ಇನ್ನೊಂದು ಕಡೆ ಅಂಪಾರಿಗೆ ಹೋಗುತ್ತದೆ. ಇಲ್ಲಿನ ಜನರಿಗೆ ಅಂಪಾರಿಗೆ ಹೋಗುವುದೇ ಅತೀ ಹತ್ತಿರ. ನೇರಳಕಟ್ಟೆಗೆ ಬರಲು 8 ಕಿ.ಮೀ ಆಗುತ್ತದೆ. ಹಾಗಾಗಿ ಇಲ್ಲಿನ ಜನ ಕುಬ್ಜ ನದಿಗೆ ಅಡ್ಡವಾಗಿ ಕಾಲು ಸಂಕ ನಿರ್ಮಾಣ ಮಾಡಿಕೊಂಡು ನದಿ ದಾಟುತ್ತಾರೆ. ಇದು ಇಂದು ನಿನ್ನೆಯ ಕಥೆಯಲ್ಲ. ಈ ಭಾಗದಲ್ಲಿ ಜನವಸತಿ ಎನ್ನುವುದು ಪ್ರಾರಂಭವಾದಂದಿನಿಂದಲೇ ಇದು ಮುಂದುವರಿದುಕೊಂಡು ಬಂದಿದೆ. ಇವತ್ತಿಗೂ ಕೂಡಾ ಯಾವುದೋ ಶತಮಾನದಲ್ಲಿರುವಂತೆ ಮಾನವಶ್ರಮದ ಮೂಲಕವೇ ಸಾಂಪ್ರಾದಾಯಿಕವಾದ ಮರದ ಕಾಲುಸಂಕ ನಿರ್ಮಿಸಿಕೊಂಡು ನದಿ ದಾಟುತ್ತಾರೆ. ಸಂಪರ್ಕದ ಸಮಸ್ಯೆ ಈ ಭಾಗದ ಅಭಿವೃದ್ದಿ, ಶೈಕ್ಷಣಿಕ ಪ್ರಗತಿಗೂ ಧಕ್ಕೆಯಾಗಿದೆ. ಅದರೆ ಇದ್ಯಾವುದೂ ಕೂಡಾ ನಮ್ಮ ಆಳುವ ವರ್ಗಕ್ಕೆ ಅರ್ಥವೇ ಆಗದೇ ಇರುವುದು ಮಾತ್ರ ವಿಪರ್ಯಾಸ.
ಮಾವಿನಗುಳಿ ಜಡ್ಡು ವಿನಲ್ಲಿ ಮೇಲ್ಬಾಗದಿಂದ ಬಹು ರಭಸವಾಗಿ ಹರಿದು ಬರುವ ಕುಬ್ಜ ನದಿ ಸಾಕಷ್ಟು ವಿಸ್ತಾರಾದ ನದಿ ವಲಯ ಸೃಷ್ಟಿಸಿದೆ. ಹಾಗಾಗಿ ಇಲ್ಲಿ ನೂರು ಮೀಟರ್ಗಿಂತ ಉದ್ದವಾದ ಕಾಲುಸಂಕವನ್ನು ನಿರ್ಮಿಸಬೇಕಾಗುತ್ತದೆ. ನೀರಿನ ರಭಸ ಹೆಚ್ಚಿರುವುದರಿಂದ ಕಾಲುಸಂಕದ ಆಧಾರಸ್ತಂಭಗಳು ಕೂಡಾ ಗಟ್ಟಿಯಾಗಿರಬೇಕು. ಅದಕ್ಕೆ ಅಷ್ಟೆ ಬಲವಾದ ಮರವನ್ನು ಬಳಸಬೇಕು. ಸುಮಾರು 20 ಅಡಿಗಳಿಗೊಂದು ಹಂತಗಳನ್ನು ಮಾಡಿ, ಕಾಲುಸಂಕದ ವಿಸ್ತರಣೆ ಮಾಡಬೇಕಾಗುತ್ತದೆ. ಈ ರೀತಿ ಕಾಲು ಸಂಕ ನಿರ್ಮಾಣ ಕೂಡಾ ಸುಲಭದ ಮಾತಲ್ಲ. ನದಿ ದಾಟಬೇಕು ಎನ್ನುವ ಉದ್ದೇಶದಿಂದ ಪ್ರತಿವರ್ಷ ಸುಮಾರು 20 ಸಾವಿರ ರೂಪಾಯಿಗಿಂತಲೂ ಹೆಚ್ಚು ವೆಚ್ಚ ಮಾಡಿ ತಾತ್ಕಾಲಿಕ ಕಾಲು ಸಂಕ ನಿರ್ಮಿಸಿಕೊಳ್ಳುತ್ತಾರೆ. ಸುಮಾರು ಒಂದು ವಾರದ ಶ್ರಮದ ಮೂಲಕ ನಿರ್ಮಾಣವಾಗುವ ಕಾಲುಸಂಕ ಒಂದು ಮಳೆಗಾಲಕ್ಕಷ್ಟೇ ಸೀಮಿತ. ಅದೂ ಕೂಡಾ ಒಯ್ಲು ಜಾಸ್ತಿಯಾಗಿ ಕೆಲವೊಂದು ಸಂದರ್ಭ ಕಾಲುಸಂಕವೇ ಕೊಚ್ಚಿಕೊಂಡು ಹೋಗುವ ಸಂದರ್ಭ ಇರುತ್ತದೆ. ಆಗ ಪರ್ಯಾಯ ಮಾರ್ಗವೇ ಇರುವುದಿಲ್ಲ. ಮಾವಿನಗುಳಿ ಮೂಲಕ ನೇರಳಕಕಟ್ಟೆಗೆ ಬರಬೇಕಾಗುತ್ತದೆ.
ಉದ್ದಕ್ಕೆ ರೈಲ್ವೆ ಹಳಿಯಂತೆ ಕಾಣುವ ಅಸುರಕ್ಷಿತ ಕಾಲುಸಂಕ ನೋಡಿದರೆ ಭಯವಾಗುತ್ತದೆ. ಇದಲ್ಲಿ ನಡೆದುಕೊಂಡು ಹೋಗಲು ಸಾಧ್ಯವೇ ಎನ್ನುವ ದಿಗಿಲಾಗುತ್ತದೆ. ಕೆಳಗಡೆ ಬೋರ್ಗರೆಯುತ ಹರಿಯುವ ನೀರು ಕಂಡಾಗ ಎದೆಯಲ್ಲಿ ಢವಢವ ಪ್ರಾರಂಭವಾಗುತ್ತದೆ. ಈ ಭಯದಿಂದಲೇ ಸುಮಾರು 350 ಅಡಿಗಳಷ್ಟು ದೂರ ಕಾಲುಸಂಕದ ಮೇಲೆ ಸಾಗಬೇಕಾದ ಅನಿವಾರ್ಯತೆ. ಕೈಯ ಹಿಡಗಳಿ ಕೂಡಾ ನಡುಗುತ್ತದೆ. ನೀರಿನ ಹೊಡೆತಕ್ಕೆ ಅಡ್ಡ ಹಾಕಿದ ಮರದ ತುಂಡುಗಳು ನಡುಗುತ್ತದೆ. ಜಟಿಜಟಿ ಮಳೆಗೆ ಕಾಲುಸಂಕ ಜಾರುತ್ತದೆ. ತುಸು ಕಾಲು ಜಾರಿದರೂ ಕೂಡಾ ನೀರಿನ ಒಯ್ಲು ಕೊಚ್ಚಿಕೊಂಡು ಹೋಗುತ್ತದೆ. ಇಲ್ಲಿನ ಹಿರಿಕರಾಗಿರುವ... ಒಮ್ಮೆ ಕಾಲುಜಾರಿ ಬಿದ್ದು ಸಾಕಷ್ಟು ದೂರ ಕೊಚ್ಚಿಕೊಂಡು ಹೋಗಿದ್ದರಂತೆ. ಅದೃಷ್ಟವಶಾತ್ ಈಜು ಬರುವುದರಿಂದ ಜೀವ ಉಳಿಸಿಕೊಂಡೇ ಎನ್ನುತ್ತಾರೆ.
ಇಲ್ಲೊಂದು ಶಾಶ್ವತ ಕಾಲುಸಂಕ ನಿರ್ಮಾಣ ಮಾಡಿಕೊಡಿ ಎಂದು ಇಲ್ಲಿನ ಗ್ರಾಮಸ್ಥರು ಹಲವಾರು ವರ್ಷಗಳಿಂದ ಗ್ರಾಮ ಪಂಚಾಯಿತಿಯಿಂದ ಆರಂಭಿಸಿ ಶಾಸಕರು, ಜಿಲ್ಲಾಡಳಿತ, ಸರ್ಕಾರದ ತನಕ ಮನವಿ ಸಲ್ಲಿಸಿದ್ದಾರೆ. ಆದರೆ ಈ ವರೆಗೂ ಕೂಡಾ ಯಾವುದೇ ಪ್ರಯೋಜನವಾಗಿಲ್ಲ. ಅಧಿಕಾರಿ ವರ್ಗದವರು ನಮ್ಮಲ್ಲಿ ಯಾವುದೇ ಅಪಾಯಕಾರಿ ಕಾಲುಸಂಕ ಇಲ್ಲ ಎನ್ನುವ ವರದಿ ಒಪ್ಪಿಸುತ್ತಾರೆ. ಹಾಗಾದರೆ ಇಂಥಹ ಕಾಲುಸಂಕಗಳು ಎಲ್ಲಿರುವುದು ಎನ್ನುವ ಪ್ರಶ್ನೆ ಕಾಡುತ್ತದೆ.
ವಿಶೇಷವೆಂದರೆ ಇದೇ ಹೊಳೆ ಇಲ್ಲೇ ಸಮೀಪದಲ್ಲಿ ವೆಂಟೆಡ್ ಡ್ಯಾಂ ಆಗಿದೆ. ಮೇಲ್ಬಾಗದಲ್ಲೊಂದು ತಡೆಗೋಡೆ ಆಗಿದೆ. ಅಲ್ಲಿ ನೀರು ಸಂಗ್ರಹವಾಗುವುದು ಅಷ್ಟಕ್ಕಷ್ಟೆ. ಆದರೆ ಇಲ್ಲಿನ ಕಾಲುಸಂಕದ ಬೇಡಿಕೆ ಮಾತ್ರ ಅಧಿಕಾರಿ ವರ್ಗ, ಚುನಾಯಿತ ಪ್ರತಿನಿಧಿಗಳಿಗೆ ಕಾಣಿಸುವುದೇ ಇಲ್ಲ. ಒಂದು ಕಿರು ಸೇತುವೆಯ ಭಾಗ್ಯ ಕೂಡಾ ಭಾಗದ ಜನರಿಗೆ ಲಭಿಸಿಲ್ಲ.
ಮಳೆಗಾಲದಲ್ಲಿ ಶಾಲೆಗೆ ಹೋಗುವ ಸಣ್ಣ ಮಕ್ಕಳು, ಕಾರ್ಖಾನೆ ಕೆಲಸಕ್ಕೆ ಹೋಗುವವರು, ಗೇರುಬೀಜ ಫ್ಯಾಕ್ಟರಿಗೆ ಹೋಗುವವರು, ಅಂಪಾರು ಕಡೆ ಕೆಲಸಕ್ಕೆ ಹೋಗುವವರಿಗೆ ತೀರಾ ಹತ್ತಿರದ ದಾರಿ ಇದೊಂದೇ ಆಗಿರುದರಿಂದ ಇಲ್ಲಿ ಕಾಲುಸಂಕ ನಿರ್ಮಾಣ ಆಗಲೇಬೇಕಾಗಿದೆ ಎನ್ನುತ್ತಾರೆ ಸ್ಥಳೀಯರು.
ನೇರಳಕಟ್ಟೆಯಿಂದ ಮಾವಿನಗುಳಿ ಜಡ್ಡು ಸಂಪರ್ಕಿಸುವುದೇ ಸವಾಲು. ಮಾವಿನಗುಳಿ ಶಾಲೆಯಿಂದ ಅತ್ಯಂತ ಕಡಿದಾದ ರಸ್ತೆಯಲ್ಲಿ ಸಾಗಬೇಕು. ಈಗಂತೂ ಜೆಎಂಜೆ ಕಾಮಗಾರಿಯ ಪೈಪ್ಲೈನ್ಗೆ ರಸ್ತೆಯನ್ನು ಯದ್ವಾತದ್ವಾ ಅಗೆದು ಹಾಕಲಾಗಿದ್ದು ಕೆಸರುಮಯವಾಗಿದೆ. ಮಾವಿನಗುಳಿ ಜಡ್ಡು ತನಕ ಕಾಂಕ್ರೀಟ್ ರಸ್ತೆ ಆಗಬೇಕು ಎನ್ನುವ ಬೇಡಿಕೆ ಇದ್ದರೂ ಕೂಡಾ ಇನ್ನೂ ಈಡೇರಿಲ್ಲ. ಇಲ್ಲಿನ ನಿವಾಸಿಗಳು ನೇರಳಕಟ್ಟೆಗೆ ಬರುವುದಕ್ಕಿಂತ ಅಂಪಾರು ಮುಖ್ಯ ರಸ್ತೆಗೆ ಹೋಗುವುದೇ ಅತ್ಯಂತ ಹತ್ತಿರವಾದ್ದರಿಂದ ಇಲ್ಲಿ ಕಾಲುಸಂಕವಾದರೆ ಎಲ್ಲದ್ದಕ್ಕೂ ಅನುಕೂಲವಾಗುತ್ತದೆ ಎನ್ನುತ್ತಾರೆ.“ಮಾವಿನಗುಳಿ ಜಡ್ಡುವಿಗೆ ಕಿರು ಸೇತುವೆಯನ್ನಾದರೂ ನಿರ್ಮಿಸಿ ಕೊಡುವಂತೆ ಮನವಿ ನೀಡುತ್ತಲೇ ಇದ್ದೇವೆ. ಆದರೆ ಇನ್ನೂ ಕೂಡಾ ಯಾವುದೇ ಪ್ರಯೋಜನವಾಗಿಲ್ಲ. ಇಲ್ಲಿಂದ ನೇರಳಕಟ್ಟೆಗೆ ಹೋಗಲು 8 ಕಿ.ಮೀ ಆಗುತ್ತದೆ. ರಸ್ತೆ ಸರಿಯಾಗಿಲ್ಲದಿರುವುದರಿಂದ ಬಾಡಿಗೆ ವಾಹನದವರು ಬರಲು ಒಪ್ಪುತ್ತಿಲ್ಲ. ಗರ್ಬಿಣಿಯರಿಗೆ ಏನಾದರೂ ಆರೋಗ್ಯ ಸಮಸ್ಯೆಯಾದರೆ ಆಸ್ಪತ್ರೆಗೆ ಹೋಗುವುದು ಕಷ್ಟ. ಈ ಕಾಲುಸಂಕದ ಮೇಲೆಯೇ ಆಚೆ ಹೋಗಬೇಕು. ಈ ಭಾಗದ ಜನರ ಗೋಳನ್ನು ಆಳುವ ವರ್ಗ ಗಂಭೀರವಾಗಿ ಪರಿಗಣಿಸಬೇಕು”-ದೀಪಾ(ಸ್ಥಳೀಯ ನಿವಾಸಿ)
ಗುಲ್ವಾಡಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಮಾವಿನಗುಳಿ ಜಡ್ಡುವಿಗೆ ಕಿರು ಸೇತುವೆಯನ್ನಾದರೂ ನಿರ್ಮಿಸಿಕೊಡುವಂತೆ ಮನವಿ ಸಲ್ಲಿಸುತ್ತಲೇ ಇದ್ದೇವೆ. ಯಾರೂ ಕೂಡಾ ನಮ್ಮ ಮನವಿಗೆ ಸ್ಪಂದಿಸುತ್ತಿಲ್ಲ. ಇಲ್ಲಿನ ಜನರು ನದಿ ದಾಟಲು ಪಡುವ ಕಷ್ಟ ಯಾರಿಗೂ ಅರ್ಥವಾಗುತ್ತಿಲ್ಲ. ನಮಗೆ ಈ ಕಾಲುಸಂಕದ ಮೂಲಕ ಅಂಪಾರಿಗೆ ಹೋಗುವುದು ಹತ್ತಿರ. ಈ ಕಾಲುಸಂಕ ನಿರ್ಮಾಣ ಮಾಡಲು 20 ಸಾವಿರ ಹಣ ಬೇಕಾಗುತ್ತದೆ. ಸಾಕಷ್ಟು ಕೆಲಸವಾಗುತ್ತದೆ. ಇಷ್ಟು ಮಾಡಿಯೂ ಕೆಲವೊಮ್ಮೆ ನಿರಂತರ ಮಳೆಯಾದರೆ ಕಾಲುಸಂಕ ಕೊಚ್ಚಿಕೊಡು ಹೋಗುವ ಸಂದರ್ಭವೂ ಇರುತ್ತದೆ”
-ಮಹಾಬಲ (ಸ್ಥಳೀಯ ನಿವಾಸಿ)