ಕುಂದಾಪುರ, ಜೂ 24 (DaijiworldNews/MS): ಹೊಸ ಸರ್ಕಾರ ಬಂದ ಮೇಲೆ ರಾಜ್ಯದ ಟ್ರೆಝರಿನೇ ಲಾಕ್ ಆಗಿದೆ. ಯಾವುದೇ ಅಧಿಕಾರಿಗಳಿಗೆ ಕೇಳಿದ್ರೂ ಮುಂದಿನ ತಿಂಗಳಲ್ಲಿ ನಡೆಯುವ ಸಪ್ಲಿಮೆಂಟರಿ ಬಜೆಟ್ ಮಂಡನೆಯಾದ ಬಳಿಕವಷ್ಟೇ ಟೆಂಡರ್ ಆದ ಅನುದಾಗಳನ್ಬು ಬಿಡುಗಡೆ ಮಾಡಲು ಸಾಧ್ಯ ಎಂದು ತಮ್ಮ ಅಸಹಾಯಕತೆಯನ್ನು ತೋಡಿಕೊಳ್ಳುತ್ತಿದ್ದಾರೆ ಎಂದು ಶಿವಮೊಗ್ಗ - ಬೈಂದೂರು ಲೋಕಸಭಾ ಸದಸ್ಯ ಬಿ.ವೈ.ರಾಘವೇಂದ್ರ ಆರೋಪಿಸಿದ್ದಾರೆ.
ಇಂದು ಶುಕ್ರವಾರ ಸಂಜೆ ಹೆಮ್ಮಾಡಿಯಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಈಗಾಗಲೇ ಕಾಮಗಾರಿ ನಡೆಸಿರುವ ಗುತ್ತಿಗೆದಾರರು ತಮ್ಮ ಕೆಲಸದ ಬಿಲ್ ಪಾವತಿಯಾಗುತ್ತೋ ಇಲ್ವೋ ಎನ್ನುವ ಗಾಬರಿಯಲ್ಲಿದ್ದಾರೆ. ಸರ್ಕಾರ ಈ ನಿಟ್ಟಿನಲ್ಲಿ ಕ್ರಮ ವಹಿಸಬೇಕು ಎಂದರು.
ಪ್ರತೀ ವರ್ಷ ಪ್ರವಾಹ ಬಂದಾಗ ಮರವಂತೆ ಅತೀ ಹೆಚ್ಚು ಹಾನಿಗೊಳಗಾಗುತ್ತದೆ. ಇದನ್ನು ಗಮನಿಸಿದ್ದ ಅಂದಿನ ಮುಖ್ಯಮಂತ್ರಿ ಯಡಿಯೂರಪ್ಪ 82 ಕೋಟಿ ಅನುದಾನವನ್ನು ತಡೆಗೋಡೆ ನಿರ್ಮಾಣಕ್ಕೆ ಮೀಸಲಿಟ್ಟಿದ್ದರು. ಅದರಂತೆ ಈಗಾಗಲೇ ಟೆಂಡರ್ ಪ್ರೋಸೆಸ್ ಆಗಿದೆ.ಆದರೆ ಸಿಆರ್ ಝೆಡ್ ಝೋನ್ ಅಂತಿಮಗೊಳಿಸುವ ಹಿನ್ನೆಲೆಯಲ್ಲಿ ತಡವಾಗಿದೆ ಎಂದ ಅವರು, ಈ ಬಗ್ಗೆ ಸರ್ಕಾರ ಹಾಗೂ ಸಚಿವರ ಜೊತೆ ಚರ್ಚಿಸಿ ಪರಿಹಾರಕ್ಕೆ ಕ್ರಮ ಕೈಗೊಳ್ಳುತ್ತೇನೆ ಎಂದರು.
ಗಂಗೊಳ್ಳಿ ಬಂದರು ಜೆಟ್ಟಿ ಸಮಸ್ಯೆಗೆ ಸಂಬಂಧಿಸಿ ನಾಲ್ಕು ಕೋಟಿ ವೆಚ್ಚದಲ್ಲಿ ತಾತ್ಕಾಲಿಕ ಪತಿಹಾರಕ್ಕೆ ಪ್ರಯತಗನಿಸುವುದಾಗಿ ಹೇಳಿದ ಬಿ.ವೈ.ಆರ್, ಈ ಬಗ್ಗೆ ಶಾಸಕರು ಹಾಗೂ ನಾನು ವೈಯುಕ್ತಿಕವಾಗಿ ಉಸ್ತುವಾರಿ ಸಚಿವರು ಹಾಗು ಬಂದರು ಮತ್ತು ಮೀನುಗಾರಿಕಾ ಸಚಿವರನ್ನು ಭೇಟಿ ಮಾಡಿ ಚರ್ಚಿಸಿದ್ದೇನೆ ಎಂದರು