ಮಂಗಳೂರು, ಜೂ 23 (DaijiworldNews/SM): ನಗರದಲ್ಲಿ ಟೈಫಾಯಿಡ್ ಜ್ವರದ ಪ್ರಕರಣಗಳು ವಿಪರೀತವಾಗಿ ಹೆಚ್ಚಳವಾಗುತ್ತಿದೆ ಎಂದು ಸುದ್ದಿಯೊಂದು ವಾಟ್ಸಪ್ ಗಳಲ್ಲಿ ಹರಿಯ ಬಿಟ್ಟು ಸಾರ್ವಜನಿಕರಲ್ಲಿ ಆತಂಕವುಂಟು ಮಾಡುವ ಘಟನೆ ನಡೆಯುತ್ತಿದ್ದು, ಇಂತಹ ಆಘಾತಕಾರಿ ಪ್ರಕರಣಗಳು ದ.ಕ. ಜಿಲ್ಲೆಯಲ್ಲೇ ಪತ್ತೆಯಾಗಿಲ್ಲ ಎಂದು ಜಿಲ್ಲಾ ಆರೋಗ್ಯ ಇಲಾಖೆ ಸ್ಪಷ್ಟಪಡಿಸಿದೆ.
ದ.ಕ. ಜಿಲ್ಲೆಯಲ್ಲಿ ವಿವಿಧ ಪ್ರಾಥಮಿಕ ಆರೋಗ್ಯ ಕೇಂದ್ರಗಳ ವ್ಯಾಪ್ತಿಯಲ್ಲಿ ಇಲ್ಲಿಯ ತನಕ ಒಟ್ಟು 13 ಪ್ರಕರಣಗಳು ಪತ್ತೆಯಾಗಿವೆ. ಪ್ರತಿ ವರ್ಷ ಇವುಗಳು ಸಾಮಾನ್ಯವಾಗಿದ್ದು, ಈ ಬಾರಿ ಮಿತಿ ಮೀರಿ ಪ್ರಕರಣಗಳು ವರದಿಯಾಗಿಲ್ಲ. ಈ ಬಗ್ಗೆ ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ. ಜಗದೀಶ್ ಅವರನ್ನು ಸಂಪರ್ಕಿಸಿದಾಗ ಸ್ಪಷ್ಟ ಮಾಹಿತಿ ನೀಡಿದ್ದಾರೆ.
ಮಳೆಗಾಲ ಆರಂಭಗೊಂಡಾಕ್ಷಣ ಡೆಂಗ್ಯೂ, ಮಲೇರಿಯಾ, ಇಲಿಜ್ವರ, ಟೈಫಾಯಿಡ್ ಸಾಮಾನ್ಯವಾಗಿ ಕಂಡುಬರುತ್ತದೆ. ಸಾರ್ವಜನಿಕರು ಮುಂಜಾಗೃತ ಕ್ರಮ ವಹಿಸಿದ್ದಲ್ಲಿ ಯಾವುದೇ ಸಮಸ್ಯೆಯಾಗುವುದಿಲ್ಲ. ಸದ್ಯ ಸಿಕ್ಕಿರುವ ಮಾಹಿತಿ ಪ್ರಕಾರ ದ.ಕ. ಜಿಲ್ಲೆಯಲ್ಲಿ 13 ಟೈಫಾಯಿಡ್ ಪ್ರಕರಣಗಳು ಪತ್ತೆಯಾಗಿವೆ. ಈ ಬಗ್ಗೆ ಆತಂಕ ಪಡುವ ಅವಶ್ಯಕತೆ ಇಲ್ಲ. ಬದಲಾಗಿ ಸಾರ್ವಜನಿಕರು ಎಚ್ಚರಿಕೆಯನ್ನು ವಹಿಸಿಕೊಳ್ಳುವುದು ಅತೀ ಅಗತ್ಯವಾಗಿದೆ ಎಂದು ಡಾ. ಜಗದೀಶ್ ಅವರು ತಿಳಿಸಿದ್ದಾರೆ.
ಟೈಫಿ ಎಂಬ ಬ್ಯಾಕ್ಟಿರಿಯಾದಿಂದ ವಿಷಮ ಶೀತ ಜ್ವರ ಉಂಟಾಗುತ್ತದೆ. ಕಲುಷಿತವಾದ ಆಹಾರ, ನೀರು ಸೇವನೆಯಿಂದಾಗಿ ಟೈಫಾಯಿಡ್(ವಿಷಮ ಶೀತ ಜ್ವರ) ಉಂಟಾಗುತ್ತದೆ. ಅಲ್ಲದೆ, ಆಹಾರ ಪದಾರ್ಥಗಳನ್ನು ಮುಟ್ಟುವ ಸಂದರ್ಭದಲ್ಲಿ ಕೈ ತೊಳೆಯದೇ ಇದ್ದಲ್ಲಿ ವಿಷಮ ಶೀತ ಜ್ವರ ಇದ್ದಲ್ಲಿ ಹರಡುವ ಸಾಧ್ಯತೆ ಹೆಚ್ಚಾಗಿದೆ.
ಟೈಫಾಯಿಡ್ ಲಕ್ಷಣಗಳು:
1. ಜ್ವರ
2. ಸುಸ್ತು
3. ಹೊಟ್ಟೆ ನೋವು
4. ತಲೆನೋವು
5. ಅತಿಸಾರ, ಮಲಬದ್ಧತೆ
6. ಹಸಿವಿಲ್ಲದಿರುವು
ಟೈಫಾಯಿಡ್ ಸೇರಿದಂತೆ ಮಳೆಗಾಲದಲ್ಲಿ ಹರಡಬಹುದಾದ ಸಾಮಾನ್ಯ ರೋಗಗಳಿಗೆ ಸಂಬಂಧಿಸಿದಂತೆ ಆರೋಗ್ಯ ಇಲಾಖೆ ಎಲ್ಲಾ ರೀತಿಯ ಮುನ್ನೆಚ್ಚರಿಕೆ ವಹಿಸಿಕೊಂಡಿದೆ. ಸಾರ್ವಜನಿಕರು ಶುಚಿತ್ವದಿಂದ ಇದ್ದುಕೊಂಡು ಶುದ್ಧ ಆಹಾರ, ನೀರು ಸೇವಿಸಿ ರೋಗಗಳಿಂದ ದೂರ ಉಳಿಯುವಂತೆ ಆರೋಗ್ಯ ಇಲಾಖೆಯ ಅಧಿಕಾರಿಗಳು ಮನವಿ ಮಾಡಿಕೊಂಡಿದ್ದಾರೆ.