ಕುಂದಾಪುರ, ಏ 01(SM): ಕೇಂದ್ರ ಸರ್ಕಾರದ ಅಭಿವೃದ್ದಿ ಯೋಜನೆಗಳು, ದೇಶದ ರಕ್ಷಣೆಯ ವಿಚಾರದಲ್ಲಿ ಕೇಂದ್ರ ಸರ್ಕಾರದ ಬದ್ದತೆ, ಬಡ ಜನರ ಬಗ್ಗೆ ಸರ್ಕಾರದ ಕಳಕಳಿಯನ್ನು ಗಮನಿಸಿರುವ ಜನರು ಮತ್ತೆ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಬರಬೇಕು ಎನ್ನುವ ಆಶಯ ಹೊಂದಿದ್ದಾರೆ. ಆ ಹಿನ್ನೆಲೆಯಲ್ಲಿ ಶಿವಮೊಗ್ಗ ಕ್ಷೇತ್ರದಲ್ಲಿ ನೇರ ಹಣಾಹಣಿ ಉಂಟಾದರೂ ಕೂಡಾ ಅತ್ಯಂತ ಹೆಚ್ಚು ಮತಗಳ ಜನಾಶೀರ್ವಾದ ನಮಗೆ ಸಿಗಲಿದೆ ಎಂದು ಶಿವಮೊಗ್ಗ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬಿ.ವೈ.ರಾಘವೇಂದ್ರ ಹೇಳಿದ್ದಾರೆ.
ಅವರು ಏ.1ರಂದು ಉಪ್ಪುಂದದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಉಪ ಚುನಾವಣೆಯಲ್ಲಿ 58% ಮತದಾನ ಆಗಿತ್ತು. ಈ ಬಾರಿ ದೇಶದಾದ್ಯಂತ ಮೋದಿ ಮತ್ತೆ ಪ್ರಧಾನಿ ಆಗಬೇಕು ಎನ್ನುವ ಅಲೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಮತದಾನ ನಡೆಯಲಿದೆ. ಶಿವಮೊಗ್ಗ ಕ್ಷೇತ್ರದ 8 ವಿಧಾನ ಸಭಾ ಕ್ಷೇತ್ರಗಳ ಪೈಕಿ 7 ಕ್ಷೇತ್ರಗಳಲ್ಲಿ ಬಿಜೆಪಿ ಶಾಸಕರಿದ್ದಾರೆ. ಶಿವಮೊಗ್ಗ ಕ್ಷೇತ್ರವೊಂದರಲ್ಲಿಯೇ ಇವತ್ತು ಕೇಂದ್ರ ಸರ್ಕಾರದ ಯೋಜನೆಗಳ 16 ಲಕ್ಷ ಫಲಾನುಭವಿಗಳಿದ್ದಾರೆ. ರೈತ ಸಮ್ಮಾನ್, ಆಯುಷ್ಮಾನ್, ಉಜ್ವಲ ಯೋಜನೆ ಹೀಗೆ ಪ್ರತಿಯೊಂದು ಯೋಜನೆಗಳು ಜನರನ್ನು ತಲುಪಿವೆ ಎಂದರು.
ಎರಡು ಅವಧಿಗಳಿಂದ ಕ್ಷೇತ್ರವನ್ನು ಪ್ರತಿನಿಧಿಸಿ ಜನಸೇವೆ ಮಾಡುವ ಅವಕಾಶವನ್ನು ಜನತೆ ನೀಡಿದ್ದಾರೆ. ರಾಷ್ಟ್ರ ಕಲ್ಪನೆ, ಸಾಮಾಜಿಕ ಚಿಂತನೆ, ಕ್ಷೇತ್ರದ ಬಗ್ಗೆ ಅಭಿವೃದ್ದಿಯ ಕನಸುಗಳನ್ನು ಇಟ್ಟುಕೊಂಡು ಕಾರ್ಯಗತಗೊಳಿಸುತ್ತಾ ಬಂದಿದ್ದೇನೆ. ಬೈಂದೂರು ರೈಲ್ವೆ ನಿಲ್ದಾಣದಲ್ಲಿ ಎರ್ನಾಕುಲಂ-ಪುಣೆ ಎಕ್ಸ್ಪ್ರೆಸ್ ರೈಲು ನಿಲುಗಡೆಯಾಗಿದೆ. ಇನ್ನೂ ಅನೇಕ ರೈಲುಗಳ ನಿಲುಗಡೆಯಾಗಬೇಕಿದೆ. ಸಾಮಾನ್ಯ ಜನರಿಗೂ ಕೂಡಾ ವಿಮಾನಯಾನ ಲಭಿಸಬೇಕು ಎನ್ನುವುದು ಪ್ರಧಾನಿ ಮೋದಿಯವರ ಕನಸು. ಆ ಹಿನ್ನೆಲೆಯಲ್ಲಿ ಬೈಂದೂರಿನಲ್ಲಿ ವಿಮಾನ ನಿಲ್ದಾಣಕ್ಕೂ ನಾವೆಲ್ಲಾ ಒಟ್ಟಾಗಿ ಪ್ರಯತ್ನ ಮಾಡಲಿದ್ದೇವೆ ಎಂದರು.