ಮಂಗಳೂರು, ಜೂ 22 (DaijiworldNews/HR): ಕರಾವಳಿ ಕರ್ನಾಟಕದ ಜನಪ್ರಿಯ ವಾಹಿನಿಯಾಗಿರುವ ದಾಯ್ಜಿವಲ್ಡ್ 10ನೇ ವರ್ಷಕ್ಕೆ ಕಾಲಿಡುತ್ತಿದೆ.
ಜೂನ್ 16, 2014 ರಂದು ಬೆಳಿಗ್ಗೆ 6 ರಿಂದ ದಾಯ್ಜಿವಲ್ಡ್ ವಾಹಿನಿಯಲ್ಲಿ ಕಾರ್ಯಕ್ರಮಗಳ ನೇರ ಪ್ರಸಾರವು ಪ್ರಾರಂಭವಾಗಿ, ಚಾನಲ್ ಸ್ಥಳೀಯವಾಗಿ ಕೇಬಲ್ ನೆಟ್ವರ್ಕ್ಗಳು, ಡಿಜಿಟಲ್ ಸೆಟ್-ಟಾಪ್ ಬಾಕ್ಸ್ಗಳು ಮತ್ತು ಇಂಟರ್ನೆಟ್ ಮೂಲಕ ಪ್ರಪಂಚದಾದ್ಯಂತ ಲಭ್ಯವಿದೆ.
ಆರಂಭದಲ್ಲಿ ದಾಯ್ಜಿವಲ್ಡ್ ವಾಹಿನಿಯು ಕರಾವಳಿ ಕರ್ನಾಟಕದ ಜನರ ಸುದ್ದಿ ಮತ್ತು ಮನರಂಜನಾ ಆಸಕ್ತಿಗಳ ಮೇಲೆ ಕೇಂದ್ರೀಕರಿಸಿದ್ದು, ಬಳಿಕ ಕನ್ನಡ, ತುಳು ಮತ್ತು ಕೊಂಕಣಿ ಭಾಷೆಗಳಲ್ಲಿ ಅನೇಕ ಕಾರ್ಯಕ್ರಮಗಳು ಮೂಡಿಬರುವ ಮೂಲಕ ಜನಪ್ರಿಯತೆ ಗಳಿಸಿದೆ.
ಇನ್ನು ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ವಿವಿಧ ರಿಯಾಲಿಟಿ ಶೋಗಳ ಮೂಲಕ ಅನೇಕ ಉದಯೋನ್ಮುಖ ಪ್ರತಿಭೆಗಳನ್ನು ಪರಿಚಯಿಸಿದ್ದು, ವಿವಿಧ ಕಾರ್ಯಕ್ರಮಗಳ ಮೂಲಕ ಪ್ರಸಿದ್ಧ ವ್ಯಕ್ತಿಗಳು ಮತ್ತು ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಾಧಕರನ್ನು ಜನರಿಗೆ ಪರಿಚಯಿಸಿದೆ. ಜೊತೆಗೆ ಯುವ ಮತ್ತು ಕ್ರಿಯಾತ್ಮಕ ಪತ್ರಕರ್ತರನ್ನು ಒಳಗೊಂಡ ತಂಡದೊಂದಿಗೆ ಸುದ್ದಿ, ಪ್ಯಾಕೇಜ್ಗಳು ಮತ್ತು ಚರ್ಚಾ ಕಾರ್ಯಕ್ರಮಗಳು ಪ್ರಸಾರವಾಗುತ್ತಿತ್ತು.
ಕೋವಿಡ್-19 ಸಮಯದಲ್ಲಿ ವಾಹಿನಿಯ ಉದ್ದೇಶ ಮತ್ತು ನೈತಿಕ ಜವಾಬ್ದಾರಿ ಹೆಚ್ಚಿ ಅಗತ್ಯವಿರುವವರಿಗೆ ಸಕಾಲಿಕ ನೆರವು ಒದಗಿಸಿದ್ದು, ವಿಶೇಷವಾಗಿ ಲಾಕ್ಡೌನ್ ಅವಧಿಯಲ್ಲಿ ಆಹಾರ ಮತ್ತು ಔಷಧದ ವಿಚಾರದಲ್ಲಿ ನೆರವಾಗಿದ್ದು, ಇದು ವಿಶ್ವಾದ್ಯಂತ ಭಾರಿ ಅಭಿಮಾನಿ ವೀಕ್ಷಕರನ್ನು ಗಳಿಸಿತು.
ಇನ್ನು ಕೋವಿಡ್ -19 ವಿರುದ್ಧ ಹೋರಾಡಲು ಮತ್ತು ಲಾಕ್ಡೌನ್ನ ಸವಾಲುಗಳನ್ನು ಎದುರಿಸಲು ದಾಯ್ಜಿವಲ್ಡ್ ವಾಹಿನಿಯು ಸಹಾಯ ಮಾಡಿದ್ದು, 'ನಾವು ನಿಮ್ಮೊಂದಿಗೆ', ಕೊರೋನಾ ಗೆಲ್ಲೋನಾ, ಪೈವೆಟ್ ಚಾಲೆಂಜ್ (ತುಳು), ಕಿರಿಕಿರಿ ಜೋಡಿಗಳು (ತುಳು), ಬದುಕು ಕಲಿತವರು, ಸವಿ ಸಂಜೆ, ಫೋನ್ ಇನ್ ಸಂಗೀತ ತಾರೆ, ಮತ್ತು ಗಾಯನ್ ಗಜಲಿ (ಕೊಂಕಣಿ) ಮುಂತಾದ ಕಾರ್ಯಕ್ರಮಗಳನ್ನು ಲಾಕ್ಡೌನ್ ಅವಧಿಗೆ ವಿಶೇಷವಾಗಿ ಪ್ರಸಾರಗೊಳ್ಳುತ್ತಿತ್ತು.
ವಿಶೇಷವಾಗಿ ತುಳು ಲಿಪಿಯಲ್ಲಿ ತನ್ನ ಲೋಗೋವನ್ನು ಪ್ರದರ್ಶಿಸಿದ ಮೊದಲ ಸ್ಥಳೀಯ ವಾಹಿನಿ ದಾಯ್ಜಿವಲ್ಡ್ ಆಗಿದ್ದು, ವಾಹಿನಿಯು ಒಂದು ವರ್ಷ ತುಳು ಬರವಣಿಗೆಯ ತರಗತಿಯನ್ನು ಪ್ರಸಾರ ಮಾಡಿದ್ದು ಇದಕ್ಕೆ ದಾಖಲೆಯ ಪ್ರತಿಕ್ರಿಯೆ ವ್ಯಕ್ತವಾಗಿತ್ತು.
ವಾಹಿನಿಯು ಇಲ್ಲಿಯವರೆಗೆ ಐದು ಕೊಂಕಣಿ ಧಾರಾವಾಹಿಗಳನ್ನು ಪ್ರಸಾರ ಮಾಡಿದ್ದು, ಮತ್ತೊಂದು ದಾಖಲೆ ಮುರಿಯುವ ಸಾಧನೆ ಮಾಡಿದೆ. ‘ಮಿಸೆಸ್ ಮೀನಾ ಅಂಡ್ ಫ್ಯಾಮಿಲಿ’ ಧಾರಾವಾಹಿ ಈಗಾಗಲೇ 75 ಸಂಚಿಕೆಗಳನ್ನು ಪೂರೈಸಿದ್ದು, ಇನ್ನೂ ಪ್ರಸಾರವಾಗುತ್ತಿದೆ. ‘ಆಮ್ಚಿ ಮತಿ ಆಮ್ಚಿಂ ಮೊನ್ಶಾಮ್’ ಎಂಬ ಕೊಂಕಣಿ ಕಾರ್ಯಕ್ರಮವೂ 100ನೇ ಸಂಚಿಕೆಯನ್ನು ತಲುಪಿದೆ. ಗಾಯನ ಕಾರ್ಯಕ್ರಮ 'ಗಯಾನ್ ಮತ್ತು ಗಜಾಲಿ' ತನ್ನ 100 ನೇ ಸಂಚಿಕೆ ಮುಂದಿನ ವಾರ ಪ್ರಸಾರವಾಗಲಿದೆ.
10 ನೇ ವರ್ಷದ ವಾರ್ಷಿಕೋತ್ಸವ ಕುರಿತು ಮಾತನಾಡಿದ ದಾಯ್ಜಿವಲ್ಡ್ ಸಂಸ್ಥಾಪಕ ವಾಲ್ಟರ್ ನಂದಳಿಕೆ, ಡೈಜಿವರ್ಲ್ಡ್ ವಾಹಿನಿಯ ಯಶಸ್ಸು ಇಡೀ ತಂಡದ ಸದಸ್ಯರಿಗೆ ಮತ್ತು ಜಗತ್ತಿನಾದ್ಯಂತ ಇರುವ ವೀಕ್ಷಕರಿಗೆ ಸಲ್ಲುತ್ತದೆ ಎಂದರು.
ಸ್ಥಳೀಯ ಪತ್ರಿಕೋದ್ಯಮದಲ್ಲಿ ಇದು ಅಪರೂಪದ ಸಾಧನೆಯಾಗಿದ್ದು, ಡೈಜಿವರ್ಲ್ಡ್ ಸಾಮಾಜಿಕ ಮಾಧ್ಯಮ ಫಾಲೋವರ್ಸ್ ಮಿಲಿಯನ್ ದಾಟಿದ್ದಾರೆ. ಯೂಟ್ಯೂಬ್ ನಲ್ಲಿ ಡೈಜಿವರ್ಲ್ಡ್ ಟಿವಿಯು 530,000 ಸಬ್ ಸ್ಕ್ರೈಬ್ ಹೊಂದಿದೆ.