ಬಂಟ್ವಾಳ, ಜೂ. 21 (DaijiworldNews/SM): ರಕ್ತಸಿಕ್ತವಾಗಿ ಬಿದ್ದುಕೊಂಡಿರುವನನ್ನು ಆಸ್ಪತ್ರೆಗೆ ದಾಖಲಿಸಿ ಮರು ಜೀವ ನೀಡಿದ ಪೋಲೀಸರಿಗೆ ವ್ಯಕ್ತಿಯೋರ್ವ ಠಾಣೆಗೆ ಆಗಮಿಸಿ ಧನ್ಯವಾದ ಹೇಳಿದ ಅಪರೂಪದ ಘಟನೆಯೊಂದು ನಡೆದಿದೆ.
ನಡೆದ ಘಟನೆಯಾದರು ಏನು?
ಜೂನ್. 13 ರಂದು ನರಿಕೊಂಬು ಗ್ರಾಮಪಂಚಾಯತ್ ಕಚೇರಿಯ ಜಗಲಿಯಲ್ಲಿ ರಕ್ತಸ್ರಾವದ ಜೊತೆ ವ್ಯಕ್ತಿಯೋರ್ವ ಬಿದ್ದುಕೊಂಡ ಬಗ್ಗೆ ಗ್ರಾಮಪಂಚಾಯತ್ ನ ಅಧಿಕಾರಿಗಳ ಗಮನಕ್ಕೆ ಬರುತ್ತದೆ. ಆತನ ಮಾಹಿತಿ ಪಡೆದಾಗ ಅಂತರ ನಿವಾಸಿ ಶಿವಶಂಕರ ಎಂಬ ವಿಚಾರ ಗ್ರಾ.ಪಂ.ನ ಅಧಿಕಾರಿಗಳಿಗೆ ತಿಳಿಯುತ್ತದೆ. ಜೂನ್ 12 ರಂದು ರಾತ್ರಿ ಆದರೆ ಈತ ಗ್ರಾ.ಪಂ.ನ ಕಿಟಕಿಯ ಗಾಜು ಪುಡಿಗೈದು ಕಚೇರಿಯ ಒಳಗೆ ಅಂದರೆ ಜಗುಲಿಗೆ ಪ್ರವೇಶ ಮಾಡಿದ್ದ. ಗಾಜು ಹೊಡೆದು ಒಳನುಗ್ಗುವ ವೇಳೆ ಈತನಕೈಗೆ ಗಾಜು ಕೊಯ್ದು ರಕ್ತಸ್ರಾವವಾಗಿತ್ತು. ವಿಪರೀತ ಕುಡಿಯುವ ಚಟವನ್ನು ಹೊಂದಿರುವ ಈತ ಕುಡಿದ ಮತ್ತಿನಲ್ಲಿ ಗಾಜು ಹೊಡೆದು ಒಳಗೆ ನುಗ್ಗಿದ್ದ.ಆದರೆ ಈ ಸಂದರ್ಭದಲ್ಲಿ ಈತನ ಕೈಗೆ ಗಾಯವಾಗಿ ರಕ್ತಸ್ರಾವವಾಗಿತ್ತು.
ಶಿವಶಂಕರ ರಕ್ತದ ನಡುವೆ ಬಿದ್ದುಕೊಂಡಿದ್ದು ಹತ್ತಿರ ಹೋಗಲು ಹೆದರುತ್ತಿದ್ದರು.
ಘಟನೆಯ ಬಗ್ಗೆ ಬಂಟ್ವಾಳ ನಗರ ಠಾಣಾ ಪೋಲೀಸರಿಗೆ ಮಾಹಿತಿ ನೀಡಿ ಕರೆಯಲಾಗುತ್ತದೆ. ಸ್ಥಳಕ್ಕೆ ಬಂದ ನಗರ ಠಾಣಾ ಎಸ್. ಐ.ರಾಮಕೃಷ್ಣ ಹಾಗೂ ಅವರ ಸಿಬ್ಬಂದಿಗಳ ತಂಡ ಅಂಬ್ಯುಲೆನ್ಸ್ ಮೂಲಕ ಮಂಗಳೂರು ವೆನ್ಲಕ್ ಆಸ್ಪತ್ರೆಗೆ ದಾಖಲಿಸಿ ಅವರ ಮನೆಯವರಿಗೆ ವಿಚಾರ ತಿಳಿಸಿದ್ದರು.
ರಕ್ತದ ನಡುವಿನಲ್ಲಿ ಬಿದ್ದುಕೊಂಡು ಮೂರ್ಛೆ ಹೋಗಿದ್ದ ಶಿವಶಂಕರನನ್ನು ನಗರ ಠಾಣಾ ಎಸ್.ಐ.ರಾಮಕೃಷ್ಣ ಹಾಗೂ ಅವರ ಸಿಬ್ಬಂದಿಗಳು ಸೇರಿಕೊಂಡು ಮಂಗಳೂರು ವೆನ್ಲಾಕ್ ಆಸ್ಪತ್ರೆಗೆ ದಾಖಲಿಸಿದ್ದರು ಎಂಬ ಮಾಹಿತಿ ಈತನಿಗೆ ತಿಳಿಯುತ್ತದೆ. ಆತ ಜೂನ್ 21 ಇಂದು ಆಸ್ಪತ್ರೆಯಿಂದ ಡಿಸ್ಚಾರ್ಜ್ ಆದ ಕೂಡಲೇ ಮೊದಲು ಬಂದಿರುವುದು ಬಂಟ್ವಾಳ ನಗರ ಪೋಲಿಸ್ ಠಾಣೆಗೆ. ರಕ್ತದ ನಡುವಿನಲ್ಲಿ ಬಿದ್ದ ಶಿವಶಂಕರನಿಗೆ ನೀರು ನೀಡಿ ಆಸ್ಪತ್ರೆಗೆ ದಾಖಲಿಸಿದ ಪೋಲೀಸರ ಕಾರ್ಯವೈಖರಿಯನ್ನು ನೆನಪು ಮಾಡಿಕೊಂಡು ಆರೋಗ್ಯದಲ್ಲಿ ಸುಧಾರಣೆ ಕಂಡ ಕೂಡಲೇ ಸೀದ ಠಾಣೆಗೆ ಬಂದು ಥ್ಯಾಂಕ್ಸ್ ಹೇಳಿದ್ದಾನೆ.