ಉಡುಪಿ, ಏ 01(SM): ಮಣಿಪಾಲದಲ್ಲಿ 17ರ ಹರೆಯದ ಬಾಲಕಿಯ ಮೇಲೆ ಅತ್ಯಾಚಾರ ಎಸಗಿ ಜೈಲು ಪಾಲಾಗಿ ಬಳಿಕ ಪೊಲೀಸರ ಕೈಯಿಂದ ತಪ್ಪಿಸಿಕೊಂಡಿದ್ದ ಆರೋಪಿಯೋರ್ವನನ್ನು ಪೆರ್ಣಂಕಿಲದ ಮನೆಯೊಂದರಿಂದ ಬಂಧಿಸಲಾಗಿದೆ. ಹನುಮಂತಪ್ಪ ಪೊಲೀಸರಿಗೆ ಚಳ್ಳೆಹಣ್ಣು ತಿನ್ನಿಸಿ ಪರಾರಿಯಾಗಿ ಇದೀಗ ಮತ್ತೆ ಬಂಧಿಸಲ್ಪಟ್ಟ ಆರೋಪಿ.
ಮಣಿಪಾಲದಲ್ಲಿ ನಡೆದ 17 ವರ್ಷದ ಬಾಲಕಿ ಮೇಲಿನ ಅತ್ಯಾಚಾರ ಹಾಗೂ ಕೊಲೆ ಪ್ರಕರಣದಲ್ಲಿ ಭಾಗಿಯಾಗಿದ್ದ ಹನುಮಂತಪ್ಪ ಎಂಬ ಆರೋಪಿ ಮಾರ್ಚ್ 29ರ ಶುಕ್ರವಾರದಂದು ಬಂಧಿತನಾಗಿ ಜೈಲು ಸೇರಿದ್ದ. ಬಳಿಕ ಆತನನ್ನು ರವಿವಾರದಂದು ಮಣಿಪಾಲ ಪೊಲೀಸರು ನ್ಯಾಯಾಧೀಶರ ಮುಂದೆ ಹಾಜರು ಪಡಿಸಿದ್ದರು.
ವಿಚಾರಣೆಯ ಬಳಿಕ ನ್ಯಾಯಾಧೀಶರು ಆರೋಪಿಗೆ 14 ದಿನಗಳ ನ್ಯಾಯಾಂಗ ಬಂಧನ ವಿಧಿಸಿದ್ದರು. ಬಳಿಕ ಆತನನ್ನು ಹೊಯ್ಸಳ ವಾಹನದಲ್ಲಿ ಇಬ್ಬರು ಕಾನ್ಸ್ ಟೇಬಲ್ ಗಳೊಂದಿಗೆ ಕರೆ ತರಲಾಗಿತ್ತು. ಆ ಸಂದರ್ಭದಲ್ಲಿ ಆರೋಪಿ ಪೊಲೀಸರ ಕಣ್ತಪ್ಪಿಸಿ ತಲೆ ಮರೆಸಿ ಕೊಂಡಿದ್ದ. ಇದೀಗ ಆತನನ್ನು ಪೆರ್ಣಂಕಿಲದ ಮನೆಯೊಂದರಿಂದ ವಶಕ್ಕೆ ಪಡೆಯುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.