ಕುಂದಾಪುರ, ಜೂ 21 (DaijiworldNews/MS): ನಾಡ ಗ್ರಾ.ಪಂ. ವ್ಯಾಪ್ತಿಯ ಬಡಾಕೆರೆ, ಹಡವು ಗ್ರಾಮಗಳು, ಕೋಣ್ಕಿ ಪ್ರದೇಶದ ಜನರು, ನೂರಾರು ಮಂದಿ ಶಾಲಾ- ಕಾಲೇಜು ವಿದ್ಯಾರ್ಥಿಗಳು ಖಾಸಗಿ ಹಾಗೂ ಕೆಎಸ್ಸಾರ್ಟಿಸಿ ಬಸ್ಗಳ ಸೌಕರ್ಯವಿಲ್ಲದೆ ಪರದಾಡುವಂತಾಗಿದೆ. ಈ ಭಾಗಕ್ಕೆ ತುರ್ತಾಗಿ ಕೆಎಸ್ಸಾರ್ಟಿಸಿ ಬಸ್ಸಿನ ಸೇವೆಯನ್ನು ಒದಗಿಸಬೇಕು ಎಂದು ಒತ್ತಾಯಿಸಿ ಬುಧವಾರ ಭಾರತ ಪ್ರಜಾಸತ್ತಾತ್ಮಕ ಯುವಜನ ಫೆಡರೇಶನ್ (ಡಿವೈಎಫ್ಐ) ಪಡುಕೋಣೆ ಘಟಕ ಹಾಗೂ ಅಖಿಲ ಭಾರತ ಜನವಾದಿ ಮಹಿಳಾ ಸಂಘಟನೆ ಬಂದೂರು ತಾಲೂಕು ವತಿಯಿಂದ ನಾಡ ಗ್ರಾ.ಪಂ. ಕಚೇರಿ ಎದುರು ಪ್ರತಿಭಟನೆ ನಡೆಯಿತು.
ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದ ಡಿವೈಎಫ್ಐ ರಾಜ್ಯಾಧ್ಯಕ್ಷ ಮುನೀರ್ ಕಾಟಿಪಳ್ಳ, ನಾಡ ಗ್ರಾಮ ಮಾತ್ರವಲ್ಲದೆ ಕರಾವಳಿ ಜಿಲ್ಲೆಗಳಲ್ಲಿಯೇ ಖಾಸಗಿ ಏಕಸ್ವಾಮ್ಯದಿಂದಾಗಿ ಸರಕಾರಿ ಬಸ್ಗಳ ಸಂಖ್ಯೆ ಕಡಿಮೆಯಿದೆ. ಖಾಸಗಿ ಬಸ್ಗಳಿಗೆ ನಮ್ಮ ವಿರೋಧವಿಲ್ಲ. ಆದರೆ ಅದು ಕೂಡ ಸೀಮಿತ ಸಂಖ್ಯೆಯಲ್ಲಿ ಇರುವುದರಿಂದ ಗ್ರಾಮೀಣ ಭಾಗದಿಂದ ನಗರ ಭಾಗಕ್ಕೆ ಸಂಚರಿಸುವ ಕೂಲಿ ಕಾರ್ಮಿಕರು, ಮಹಿಳೆಯರು, ಶಾಲಾ- ಕಾಲೇಜು ವಿದ್ಯಾರ್ಥಿಗಳಿಗೆ ಸಮಸ್ಯೆಯಾಗುತ್ತಿದೆ. ಸರಕಾರಿ ಬಸ್ ಕೇಳುವುದು ನಮ್ಮ ಮೂಲಭೂತ ಅಗತ್ಯಗಳಲ್ಲಿ ಒಂದಾಗಿದ್ದು, ಮುಂದಿನ ದಿನಗಳಲ್ಲಿ ಡಿಸಿ ಕಚೇರಿ ಮುಂದೆ, ಆ ಬಳಿಕವೂ ಈಡೇರದಿದ್ದರೆ ಕೆಎಸ್ಸಾರ್ಟಿಸಿ ಮಂಗಳೂರು ವಿಭಾಗೀಯ ಕಚೇರಿ ಎದುರು ಧರಣಿ ಕುಳಿತುಕೊಳ್ಳಲಾಗುವುದು ಎಂದವರು ಎಚ್ಚರಿಸಿದರು. ಸಭೆಯ ಬಳಿಕ ಪ್ರಾದೇಶಿಕ ಸಾರಿಗೆ ಅಧಿಕಾರಿಗೆ ನಾಡ ಗ್ರಾ.ಪಂ. ಪಿಡಿಒ ಮೂಲಕ ಮನವಿ ಸಲ್ಲಿಸಲಾಯಿತು.
ಡಿವೈಎಫ್ಐ ಪಡುಕೋಣೆ ಘಟಕದ ಅಧ್ಯಕ್ಷ ನಾಗರಾಜ ಕುರು, ಪ್ರಮುಖರಾದ ರಾಜು ಪಡುಕೋಣೆ, ರಾಜೇಶ್ ಪಡುಕೋಣೆ, ವೆಂಕಟೇಶ್ ಕೋಣಿ, ಜನವಾದಿ ಮಹಿಳಾ ಸಂಘಟನೆಯ ನಾಗರತ್ನ ನಾಡ, ಶೀಲಾವತಿ, ಸುಶೀಲಾ ನಾಡ, ಗ್ರಾ.ಪಂ. ಸದಸ್ಯೆ ಶೋಭಾ, ಮತ್ತಿತರರು ಉಪಸ್ಥಿತರಿದ್ದರು.