ಉಳ್ಳಾಲ, ಜೂ 20 (DaijiworldNews/HR): ಕಳೆದ ಹಲವು ವರ್ಷಗಳಿಂದ ಉಳ್ಳಾಲ ಬೀಚ್ ಸಮೀಪ ತ್ಯಾಜ್ಯದ ರಾಶಿ ಹಾಕಿ ಪ್ರದೇಶವಿಡೀ ಮಲಿನಗೊಂಡು, ಪರಿಸರದ ಬಾವಿ ನೀರು ಕಲುಷಿತಗೊಂಡು, ಪ್ರವಾಸಿಗರನ್ನು ಒಳಗೊಂಡಂತೆ ಸ್ಥಳೀಯರು ದುರ್ವಾಸನೆಯಿಂದ ಕೂಡಿದ ವಾತಾವರಣದಲ್ಲಿ ಬಾಳುವ ಸ್ಥಿತಿಯಿಂದ ಸಿಡಿದೆದ್ದ ನಾಗರಿಕರು ಇಂದು ಉಳ್ಳಾಲ ಕೋಡಿ ಸಂಪರ್ಕಿಸುವ ರಸ್ತೆ ಮೇಲೆ ತ್ಯಾಜ್ಯ ವಿಟ್ಟು ಪ್ರತಿಭಟನೆ ಆರಂಭಿಸಿದ್ದಾರೆ.
ಪರಿಸರ ಸಂರಕ್ಷಣಾ ನಾಗರಿಕ ಒಕ್ಕೂಟ ಉಳ್ಳಾಲ ಆಶ್ರಯದಲ್ಲಿ ನದಿ ಪರಿಸರ ಸಂರಕ್ಷಣಾ ಸಮಿತಿ, ನಾಗರಿಕ ಹಿತರಕ್ಷಣಾ ವೇದಿಕೆ, ಕರ್ನಾಟಕ ರಕ್ಷಣಾ ವೇದಿಕೆ, ಜಮಾಅತೆ ಇಸ್ಲಾಮೀ ಹಿಂದ್, ಮೊಗವೀರ ಮಹಿಳಾ ಸೇವಾ ಸಂಘ, ಸಾಲಿಡ್ಯಾರಿಟಿ ಯೂತ್ ಮೂವ್ ಮೆಂಟ್, ಶಿವಾಜಿ ಈಜುಗಾರರ ಸಂಘ, ಮಾರುತಿ ಯುವಕ ಮಂಡಲ, ಬ್ರದರ್ಸ್ ಸ್ಪೋಟ್ಸ್ ಕ್ಲಬ್ ಮುಂತಾದ ಸ್ಥಳೀಯ ಸಂಘಟನೆಗಳ ನೇತೃತ್ವದಲ್ಲಿ ಉಳ್ಳಾಲ ಬೀಚ್ ಬದಿಯಿಂದ ತ್ಯಾಜ್ಯ ತೆರವು ಮಾಡುವವರೆಗೂ ರಸ್ತೆ ಬಂದ್ ನಡೆಸಿ ಪ್ರತಿಭಟನೆ ಮುಂದುವರಿಯಲಿದೆ.
ಸ್ವಚ್ಛ ಭಾರತ್ ಮಿಷನ್ನಿನಡಿ ಕೋಟ್ಯಂತರ ರೂ. ಅನುದಾನ ನಗರಸಭೆಗಳಿಗೆ ಮಂಜೂರಾಗುತ್ತಿದೆ. ಉಳ್ಳಾಲದಲ್ಲಿ ಅದು ವಿನಿಯೋಗವಾಗದೆ ಜನರ ಬದುಕು ದುಸ್ತರವಾಗಿದೆ. ತಕ್ಷಣ ಸಮಸ್ಯೆ ಕುರಿತು ಜಿಲ್ಲಾಧಿಕಾರಿಗಳಿಗೆ ತಿಳಿಸಬೇಕಿದೆ. ಹಲವು ವರ್ಷಗಳಿಂದ ಪ್ರವಾಸಿಗರು, ಜನರು ಮೂಗುಮುಚ್ಚಿಕೊಂಡು ಹೋಗುವಂತಹ ಪರಿಸ್ಥಿತಿ ಇದ್ದರೂ, ಈ ಭಾಗದ ಜನಪ್ರತಿನಿಧಿ ಇತ್ತ ಗಮನವೇ ಹರಿಸುತ್ತಿಲ್ಲ. ಪ್ರಸ್ತುತ ವಾತಾವರಣದಿಂದ ಪ್ರವಾಸಿಗರ ಸಂಖ್ಯೆಯೂ ಕಡಿಮೆಯಾಗಿ, ಪ್ರದೇಶದ ಅಭಿವೃದ್ಧಿಯಲ್ಲಿ ನಷ್ಟವಾಗಲಿದೆ. ಒಂದು ದಿನದೊಳಗೆ ಉಳ್ಳಾಲದಿಂದ ತ್ಯಾಜ್ಯ ವಿಲೇವಾರಿ ಆಗದೇ ಇದ್ದಲ್ಲಿ ನಗರಸಭೆ ಮುಂದೆ ತ್ಯಾಜ್ಯವನ್ನಿಟ್ಟು ಪ್ರತಿಭಟಿಸುತ್ತೇವೆ ಅನ್ನುವ ಎಚ್ಚರಿಕೆ ಹಾಕಿದ್ದಾರೆ.
ಪರಿಸರ ಸಂರಕ್ಷಣಾ ನಾಗರಿಕ ಒಕ್ಕೂಟ ಉಳ್ಳಾಲ ಇದರ ರಿಯಾಝ್ ಮಂಗಳೂರ ಮಾತನಾಡಿ, ಸಮುದ್ರ ತೀರದಲ್ಲಿಯೇ ತ್ಯಾಜ್ಯ ರಾಶಿ ಹಾಕುತ್ತಿರುವುದರಿಂದ ಜಲಚರಗಳು ನಾಶವಾಗುವ ಭೀತಿಯಿದೆ. ಪರಿಸರವಿಡೀ ದುರ್ನಾತದಿಂದ ಕೂಡಿ, ಸಮುದ್ರದಲ್ಲಿನ ಜೀವಿಗಳಿಗೂ ಕಂಟಕವಾಗುವ ಸಾಧ್ಯತೆಗಳಿವೆ. ಸಮಸ್ಯೆ ಕುರಿತು ಸ್ಥಳಿಯಾಡಳಿತದಿಂದ ಜಿಲ್ಲಾಡಳಿತದ ಗಮನಕ್ಕೂ ತಂದರೂ ಪರಿಹಾರ ಸಿಕ್ಕಿಲ್ಲ. ಸ್ಥಳೀಯರಿಗೆ ವಾಸಿಸಲು ಸಾಧ್ಯವಾಗದೆ, ಕುಡಿಯಲು ಇರುವ ನೀರು ಮಲಿನಗೊಂಡು ಮಕ್ಕಳು, ವೃದ್ಧರು ಪರದಾಡುವ ಸ್ಥಿತಿ ಇದೆ. ಎಲ್ಲಿಯವರೆಗೂ ತ್ಯಾಜ್ಯ ಉಳ್ಳಾಲದಿಂದ ವಿಲೇವಾರಿ ಆಗುವುದಿಲ್ಲ, ಅಲ್ಲಿತನಕ ಪ್ರತಿಭಟನೆ ಮುಂದುವರಿಸಲಿದ್ದೇವೆ ಎಂದರು.
ಆರೋಗ್ಯ ಅಧಿಕಾರಿಗಳನ್ನು ಕರೆದು ತುರ್ತು ಸಭೆಯನ್ನು ನಡೆಸುತ್ತೇನೆ. ಕನಿಷ್ಟ ಒಂದು ತಿಂಗಳ ಸಮಯವಕಾಶ ಬೇಕಿದೆ. ಒಂದು ವರ್ಷದ ಸಮಸ್ಯೆ, ತಾನು ಬಂದು ನಾಲ್ಕು ದಿನಗಳಲ್ಲಿ ಏನನ್ನೂ ಮಾಡಲು ಸಾಧ್ಯವಿಲ್ಲ. ಜನರಿಗೆ ತೊಂದರೆಯಾಗದ ರೀತಿಯಲ್ಲಿ ತ್ಯಾಜ್ಯ ವಿಲೇವಾರಿ ಸ್ಥಳಾಂತರಗೊಳಿಸಲು ಕ್ರಮಕೈಗೊಳ್ಳುತ್ತೇನೆ ಎಂದು ಪೌರಾಯುಕ್ತೆ ವಾಣಿ ಆಳ್ವ ತಿಳಿಸಿದರು.
ಈ ಸಂದರ್ಭ ಫಾರೂಕ್ ಅಲೇಕಳ, ಫೈರೋಝ್, ಗಣೇಶ್ ಮೊಗವೀರ, ಸೆಲ್ವೀ, ಜಗನ್ನಾಥ್, ಪ್ರವೀಣ್, ಸವಿತಾ, ಹಮೀದ್ ಉಳ್ಳಾಲ್, ಹರೀಶ್ ಮುಂತಾದವರು ಉಪಸ್ಥಿತರಿದ್ದರು.
ಸ್ಥಳದಲ್ಲಿ ಉಳ್ಳಾಲ ಪೊಲೀಸರು ಹಾಗೂ ಮೀಸಲು ಪೊಲೀಸರು ಬಂದೋಬಸ್ತ್ ಏರ್ಪಡಿಸಿದ್ದರು.