ಉಡುಪಿ, ಜೂ 20 (DaijiworldNews/MS): ರಾಜ್ಯ ಸರ್ಕಾರದ ಪ್ರತಿಷ್ಠಿತ ‘ಅನ್ನಭಾಗ್ಯ' ಯೋಜನೆಗೆ ಅಕ್ಕಿ ಪೂರೈಕೆ ಮಾಡಲು ನಿರಾಕರಿಸಿದ ಪ್ರಧಾನಿ ನರೇಂದ್ರ ಮೋದಿಯವರು ಬಡವರ ಹೊಟ್ಟೆಗೆ ಹೊಡೆಯುವ ಕೆಲಸ ಮಾಡುತ್ತಿದೆ ಎಂದು ಮಾಜಿ ಸಚಿವ ವಿನಯ್ ಕುಮಾರ್ ಸೊರಕೆ ಆರೋಪಿಸಿದರು.
ಅವರು ಮಂಗಳವಾರ ಅನ್ನಭಾಗ್ಯ ಯೋಜನೆಗೆ ಅಕ್ಕಿ ಪೂರೈಕೆ ಮಾಡಲು ನಿರಾಕರಿಸಿದಕೇಂದ್ರ ಬಿಜೆಪಿ ಸರ್ಕಾರದ ವಿರುದ್ದ ದ್ವೇಷ ರಾಜಕಾರಣ ಹಾಗೂ ಬಡವರ ವಿರೋಧಿ ನೀತಿಯನ್ನು ಖಂಡಿಸಿ ಉಡುಪಿ ಜಿಲ್ಲಾ ಕಾಂಗ್ರೆಸ್ ವತಿಯಿಂದ ಆಯೋಜಿಸಿದ್ದ ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದರು.
ಕಾಂಗ್ರೆಸ್ ಕೊಟ್ಟ ಐದು ಗ್ಯಾರಂಟಿ ಅನುಷ್ಠಾನ ಆಗುತ್ತೋ ಇಲ್ಲವೋ ಎಂದು ಬಿಜೆಪಿ ಟೀಕೆ ಮಾಡಿಕೊಂಡು ಬಂದಿದ್ದು, ಸರ್ಕಾರ ರಚನೆ ಮಾಡಿದ ಮೊದಲನೇ ದಿನ ಗ್ಯಾರಂಟಿ ಘೋಷಣೆ ಮಾಡಿದ್ದೇವೆ, ಎರಡನೇ ಸಂಪುಟ ಸಭೆಯಲ್ಲಿ ದಿನಾಂಕ ನಿಗದಿಯನ್ನು ಮಾಡಿದ್ದೇವೆ. ನಾವು ನುಡಿದಂತೆ ನಡೆಯುತ್ತಿದ್ದೇವೆ.
ಬಿಜೆಪಿ ಸೋತರೆ ರಾಜ್ಯಕ್ಕೆ ಸಹಕಾರ ಕೊಡಲ್ಲ ಎಂದು ಜೆಪಿ ನಡ್ಡಾ ಹೇಳಿದ್ದರು. ಅವರ ಮಾತಿನಂತೆ ನಡೆದುಕೊಂಡಿದ್ದಾರೆ. ಯಾರು ಹಸಿದುಕೊಂಡು ಇರಬಾರದು ಎಂದು ಅನ್ನಭಾಗ್ಯ ಯೋಜನೆ ಜಾರಿಗೊಳಿಸಿದ್ದೇವೆ. ಉಚಿತವಾಗಿ ಅಕ್ಕಿ ಕೊಡಿ ಎಂದು ನಾವು ಕೇಂದ್ರದ ಬಳಿ ಕೇಳಿಲ್ಲ. ಜೂನ್ 12 ರಂದು ಎಫ್ ಐ ಸಿ ಜುಲೈನಲ್ಲಿ 2,88,425 ಮೆಟ್ರಿಕ್ ಟನ್ ಅಕ್ಕಿ ಕೊಡುವ ವಾಗ್ದಾನ ನೀಡಿದ್ದರು. ಅದರೆ ಮತ್ತೆ ಪತ್ರ ಬರೆದು, ಗೋಧಿ ಹಾಗೂ ಅಕ್ಕಿ ರಾಜ್ಯಗಳಿಗೆ ಸದ್ಯಕ್ಕೆ ಕೊಡಲ್ಲ ಎಂದು ಹೇಳಿದ್ದಾರೆ. ಈ ಮೂಲಕ ದ್ವೇಷದ ರಾಜಕಾರಣ ಮಾಡುತ್ತಿದೆ ಬಿಜೆಪಿ. ಬಡವರ ಹೊಟ್ಟೆಯ ಮೇಲೆ ದಾಳಿ ಮಾಡುತ್ತಿದೆ. ಬಿಜೆಪಿ ಬಡವರಿಗೆ ದ್ರೋಹ ಮಾಡುತ್ತಿದೆ. ಇವರಿಗೆ ಲಕ್ಷಾಂತರ ಮೆಟ್ರಿಕ್ ಟನ್ ಅಕ್ಕಿಯನ್ನು ತಾಲಿಬಾನ್ ಸರಕಾರಕ್ಕೆ ನೀಡುವ ಕೇಂದ್ರಕ್ಕೆ ಕರ್ನಾಟಕ ರಾಜ್ಯದ ಬಡವರಿಗೆ ನೀಡುವ ಅಕ್ಕಿ ಇಲ್ಲ. ಇದು ಅನ್ನ ಭಾಗ್ಯ ಯೋಜನೆಯನ್ನು ತಡೆಯುವ ಷಡ್ಯಂತ್ರ ಎಂದು ಆರೋಪಿಸಿದರು.
ಪ್ರತಿಭಟನೆಯಲ್ಲಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಅಶೋಕ್ ಕುಮಾರ್ ಕೊಡವೂರು, ಉಪಾಧ್ಯಕ್ಷ ಪ್ರಖ್ಯಾತ್ ಶೆಟ್ಟಿ, ಉಡುಪಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಮೇಶ್ ಕಾಂಚನ್, ನಾಯಕರಾದ ಪ್ರಸಾದ್ ರಾಜ್ ಕಾಂಚನ್, ಮೊಳಹಳ್ಳಿ ದಿನೇಶ್ ಹೆಗ್ಡೆ, ಮುನಿಯಾಲು ಉದಯ್ ಶೆಟ್ಟಿ, ಪ್ರಶಾಂತ್ ಪೂಜಾರಿ, ಗೀತಾ ವಾಗ್ಳೆ, ವಿಶ್ವಾಸ್ ಅಮೀನ್, ಪ್ರಶಾಂತ್ ಜತ್ತನ್ನ, ಹರೀಶ್ ಕಿಣಿ, ಕೃಷ್ಣಮೂರ್ತಿ ಆಚಾರ್ಯ, ದೀಪಕ್ ಕೋಟ್ಯಾನ್, ಸೌರಭ್ ಬಲ್ಲಾಳ್, ಯತೀಶ್ ಕರ್ಕೇರಾ ಹಾಗೂ ಇತರರು ಉಪಸ್ಥಿತರಿದ್ದರು.