ಸುಳ್ಯ, ಏ 01(SM): ಕಾಸರಗೋಡು ಲೋಕಸಭಾ ಕ್ಷೇತ್ರವನ್ನು ನಾನು ಈ ಬಾರಿ ಗೆದ್ದೆ ಗೆಲ್ಲುತ್ತೇನೆ ಎಂದು ಕಾಸರಗೋಡು ಲೋಕ ಸಭಾ ಕ್ಷೇತ್ರದ ಬಿ.ಜೆ.ಪಿ ಅಭ್ಯರ್ಥಿ ರವೀಶ್ ತಂತ್ರಿ ವಿಶ್ವಾಸ ವ್ಯಕ್ತಪಡಿಸಿದರು.
ಅವರು ಸುಳ್ಯ ಸೀಮೆ ದೇವಾಲಯ ಹಾಗೂ ಕೇರಳದ ಕಾಸರಗೋಡಿನೊಂದಿಗೆ ಧಾರ್ಮಿಕ ಐತಿಹಾಸಿಕ ಸಂಬಂಧವುಳ್ಳ ಕಾರಣೀಕ ಕ್ಷೇತ್ರವಾದ ತೊಡಿಕಾನ ಶ್ರೀ ಮಲ್ಲಿಕಾರ್ಜುನ ದೇವಾಲಯಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು.
ನರೇಂದ್ರ ಮೋದಿ ಅವರು ಉತ್ತಮ ಆಡಳಿತ ನೀಡುತ್ತಿದ್ದು ಇದನ್ನು ಜನರು ಮೆಚ್ಚಿಕೊಳ್ಳುವುದರೊಂದಿಗೆ ವಿಶ್ವವೇ ಒಪ್ಪಿಕೊಂಡಿದೆ. ಈ ಹಿನ್ನಲೆಯಲ್ಲಿ ಸಮಾಜ ನಮ್ಮನ್ನು ಬೆಂಬಲಿಸುತ್ತದೆ. ಶಬರಿಮಲೆ ವಿಷಯ ಸೇರಿದಂತೆ ಧಾರ್ಮಿಕ ನಂಬಿಕೆಗೆ ಕೇರಳ ಸರಕಾರ ಆಸ್ತಿಕರ ಭಾವನೆಗೆ ದಕ್ಕೆ ಉಂಟು ಮಾಡಿದೆ. ಇದರಿಂದ ಆಸ್ತಿಕರಿಗೆ ನೋವಾಗಿದೆ. ಎಡಪಕ್ಷವನ್ನು ದೂರವಿರಿಸಿ ನಮ್ಮನ್ನು ಬೆಂಬಲಿಸುವುದರಲ್ಲಿ ಎರಡು ಮಾತಿಲ್ಲ. ಕೇರಳದಲ್ಲಿ ಈ ಸಲ ಎನ್.ಡಿ.ಎ ಖಾತೆ ತೆರೆದೆ ತೆರೆಯುತ್ತದೆ ಇದಕ್ಕ ಸಂಶಯ ಬೇಡ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಕಾಸರಗೋಡಿನಲ್ಲಿ ನೇರ ಸ್ಪರ್ಧೆ ಇರುವುದು ಎನ್ ಡಿಎ ಮತ್ತು ಎಡಪಕ್ಷಕ್ಕೆ. ಚುನಾವಣಾ ಘೋಷಣೆಯ ಕೊನೇ ಕ್ಷಣದ ತನಕ ಕಾಸರಗೋಡಿನವರಾದ ಸುಬ್ಬಯ್ಯ ರೈ ಅವರೇ ಯುಡಿಎಫ್ನ ಅಭ್ಯರ್ಥಿ ಎಂದು ಪ್ರಚಾರವಾಗಿತ್ತು. ಕೊನೆಯ ಕ್ಷಣದಲ್ಲಿ ಕೊಲ್ಲಂನ ರಾಜಮೋಹನ್ ಉನ್ನಿತ್ತಾನ್ ಅವರಿಗೆ ಅವಕಾಶ ನೀಡಿದ್ದು ಈ ಭಾಗದ ಅನೇಕ ಕನ್ನಡಿಗರಿಗೆ ನೋವಾಗಿದೆ. ಆದರೆ ಬಿಜೆಪಿ ಕನ್ನಡಿಗನಾದ ನನ್ನನ್ನು ಕಣಕ್ಕಿಳಿಸಿದೆ. ಇದರಿಂದ ನನ್ನ ಕ್ಷೇತ್ರದ ಜನರು ನನ್ನನ್ನು ಕಂಡಿತ ಬೆಂಬಲಿಸುತ್ತಾರೆ ಎಂಬ ಪುನರುಚ್ಚರಿಸಿದರು.