ಉಡುಪಿ, ಜೂ. 19 (DaijiworldNews/SM): ರಾಜ್ಯ ಕಾಂಗ್ರೆಸ್ ಸರಕಾರ ಮತಾಂತರ ನಿಷೇಧ ಕಾಯ್ದೆಯನ್ನು ವಾಪಸ್ ಪಡೆದಿರುವುದನ್ನು ವಿರೋಧಿಸಿ ವಿಶ್ವಹಿಂದು ಪರಿಷತ್ ಹಾಗೂ ಬಜರಂಗದಳ ಮಣಿಪಾಲದಲ್ಲಿರುವ ಜಿಲ್ಲಾಧಿಕಾರಿ ಕಚೇರಿ ಎದುರು ಸೋಮವಾರ ಪತ್ರಿಭಟನೆ ನಡೆಸಿ, ರಾಜ್ಯ ಸರಕಾರದ ನಿರ್ಧಾರಕ್ಕೆ ಧಿಕ್ಕಾರ ಘೋಷಿಸಿದರು.
ವಜ್ರಾದೇಹಿಮಠದ ಶ್ರೀ ರಾಜಶೇಖರಾನಂದ ಸ್ವಾಮೀಜಿಯವರು ಮಾತನಾಡಿ, ರಾಜ್ಯ ಸರಕಾರ ಹಿಂದು ವಿರೋಧಿ ನೀತಿ ಅನುಸರಿಸುತ್ತಿದೆ. ಮುಖ್ಯಮಂತ್ರಿಯವರು ಓಲೈಕೆ ರಾಜಕಾರಣ ಮಾಡುತ್ತಿದ್ದಾರೆ. ಅಧಿಕಾರಕ್ಕೆ ಅಮಲಿನಲ್ಲಿ ಏನೇ ಮಾಡಿದರೂ ನಡೆಯುತ್ತದೆ ಎನ್ನುವುದು ಸರಿಯಲ್ಲ. ಹಿಂದು ಧರ್ಮದ ಅವಹೇಳನ ಮಾಡುವುದನ್ನು ಬಿಟ್ಟು ಅಧಿಕಾರ ನಡೆಸಿ, ಸಮಾಜದ ಉನ್ನತಿ, ಸಮುದಾಯದ ಏಳ್ಗೆಗಾಗಿ ಕೆಲಸ ಮಾಡಿ, ಹಿಂದುಗಳ ಧಮನ ನೀತಿ ಕೈಬಿಡಿ. ಇಲ್ಲವಾದರೆ ಮುಂದಿನ ಆರು ತಿಂಗಳಲ್ಲಿ ಉತ್ತರ ಸಿಗಲಿದೆ ಎಂದರು. ರಾಜ್ಯದ ಮಠಾಧೀಶರು ಹಿಂದು ಸಮಾಜವನ್ನು ರಕ್ಷಣೆ ಮಾಡುವ ನಿಟ್ಟಿನಲ್ಲಿ ಒಂದಾಗಬೇಕು ಎಂದು ಮನವಿ ಮಾಡಿದರು.
ಪ್ರಾಂತ ಸಂಯೋಜಕ ಸುನಿಲ್ ಕೆ.ಆರ್. ಮಾತನಾಡಿ, ಮತಾಂತರ ನಿಷೇಧ ಕಾಯ್ದೆಯನ್ನು ರಾಜ್ಯ ಸರಕಾರ ವಾಪಸ್ ಪಡೆಯುತ್ತಿರುವುದನ್ನು ಖಂಡಿಸಿ ಪ್ರತಿಭಟನೆ ಮಾಡುತ್ತಿದ್ದೇವೆ. ಹಿಂದು ವಿರೋಧಿ ನೀತಿಯನ್ನು ಮುನ್ನೆಲೆಗೆ ತರುವ ಪ್ರಯತ್ನವನ್ನು ರಾಜ್ಯ ಸರಕಾರ ಮಾಡುತ್ತಿದೆ. ದೇಶದಲ್ಲಿ 60 ವರ್ಷಕ್ಕೂ ಹೆಚ್ಚುಕಾಲ ಸರಕಾರಗಳು ಅಲ್ಪಸಂಖ್ಯಾಕರ ಪರವಾಗಿ ತುಷ್ಠೀಕರಣ ಮಾಡಿದೆ. ತತ್ ಕ್ಷಣ ಸರಕಾರ ತನ್ನ ನಿರ್ಧಾರ ವಾಪಸ್ ಪಡೆಯಬೇಕು. ಮುಂದೆ ಉಗ್ರ ಹೋರಾಟ ಮಾಡಲಿದ್ದೇವೆ. ಪಠ್ಯ ಪರಿಷ್ಕರಣೆ ನಿರ್ಧಾರವನ್ನು ವಾಪಸ್ ಪಡೆಯಬೇಕು ಎಂದು ಆಗ್ರಹಿಸಿದರು.
ವಿಷ್ಣುಮೂರ್ತಿ ಆಚಾರ್ಯ, ವಿಎಚ್ ಪಿ ಜಿಲ್ಲಾ ದಿನೇಶ್ ಮೆಂಡನ್, ಶಾಸಕರಾದ ಯಶ್ ಪಾಲ್ ಸುವರ್ಣ, ಗುರುರಾಜ ಗಂಟಿಹೊಳೆ, ಮಾಜಿ ಶಾಸಕ ರಘುಪತಿ ಭಟ್, ಬಿಜೆಪಿ ಜಿಲ್ಲಾಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್, ಪ್ರಮುಖರಾದ ಚೇತನ್ ಪೇರಲ್ಕೆ, ಕೆ. ಉದಯ ಕುಮಾರ್ ಶೆಟ್ಟಿ, ಬೈಕಾಡಿ ಸುಪ್ರಸಾದ್ ಶೆಟ್ಟಿ, ರಾಘವೇಂದ್ರ ಕಿಣಿ, ಶ್ಯಾಮಲಾ ಕುಂದರ್, ಸುಮಿತ್ರಾ ಆರ್. ನಾಯಕ್, ಅಂಡಾರು ದೇವಿ ಪ್ರಸಾದ್ ಶೆಟ್ಟಿ ಸಹಿತ ವಿಎಚ್ ಪಿ, ಬಜರಂಗದಳ, ಬಿಜೆಪಿಯ ಪ್ರಮುಖರು ಪ್ರತಿಭಟನೆಯಲ್ಲಿದ್ದರು.