ಕುಂದಾಪುರ, ಜೂ 19 (DaijiworldNews/MS): ಉಡುಪಿ ಜಿಲ್ಲೆಯಲ್ಲಿ 63 ಸರಕಾರಿ ಶಾಲೆಗಳಲ್ಲಿ ಶೂನ್ಯ ಶಿಕ್ಷಕರಿದ್ದು, ರಾಜ್ಯದಲ್ಲಿಯೂ ಕೂಡಾ ಹಲವಾರು ಶಾಲೆಗಳಲ್ಲಿ ಶೂನ್ಯ ಶಿಕ್ಷಕರ ಸಮಸ್ಯೆಯಿದೆ. ಖಾಯಂ ಶಿಕ್ಷಕರಿಲ್ಲದೆ ಗ್ರಾಮೀಣ ಭಾಗದ ವಿದ್ಯಾರ್ಥಿಗಳು ಗುಣಮಟ್ಟದ ಶಿಕ್ಷಣದಿಂದ ವಂಚಿತರಾಗುತ್ತಿದ್ದಾರೆ. ಆದ್ದರಿಂದ ಇದೇ ತಿಂಗಳು ನಡೆಯುವ ಹೆಚ್ಚುವರಿ ಶಿಕ್ಷಕರ ವರ್ಗಾವಣೆ ಪ್ರಕ್ರಿಯೆ ಸಮಯದಲ್ಲಿ ಮೊದಲು ಶೂನ್ಯ ಶಿಕ್ಷಕರು ಇರುವ ಶಾಲೆಗಳನ್ನು ಭರ್ತಿಗೊಳಿಸಿ ನಂತರ ಉಳಿದ ಶಾಲೆಗಳಿಗೆ ಅವಕಾಶ ನೀಡಬೇಕು. ಶಿಕ್ಷಕರಿಲ್ಲದ ಶಾಲೆಗೆ ಪ್ರಥಮ ಒತ್ತನ್ನು ನೀಡುವಂತೆ ರಾಜ್ಯದ ಮುಖ್ಯಮಂತ್ರಿಗಳಿಗೆ ಕರ್ನಾಟಕ ರಾಜ್ಯ ಶಾಲಾಭಿವೃದ್ದಿ ಮತ್ತು ಮೇಲುಸ್ತುವಾರಿ ಸಮಿತಿಗಳ ಸಮನ್ವಯ ವೇದಿಕೆ ಉಡುಪಿ ಜಿಲ್ಲಾ ಘಟಕ ಮನವಿ ಸಲ್ಲಿಸಿದೆ.
ಸೋಮವಾರ ಕುಂದಾಪುರದ ಸಹಾಯಕ ಕಮಿಷನರ್ ಕಛೇರಿಯಲ್ಲಿ ನಾಗರಾಜ ನಾಯ್ಕಡ ತಹಶೀಲ್ದಾರ್ ಗ್ರೇಡ್-2 ಇವರ ಮೂಲಕ ಮುಖ್ಯಮಂತ್ರಿಗಳು, ಶಿಕ್ಷಣ ಸಚಿವರಿಗೆ ಮನವಿ ಸಲ್ಲಿಸಲಾಯಿತು.
ಕರ್ನಾಟಕ ರಾಜ್ಯ ಶಾಲಾಭಿವೃದ್ದಿ ಮತ್ತು ಮೇಲುಸ್ತುವಾರಿ ಸಮಿತಿಗಳ ಸಮನ್ವಯ ವೇದಿಕೆ ಉಡುಪಿ ಜಿಲ್ಲೆ ಶಿಕ್ಷಣ ತಜ್ಞರಾದ ಪ್ರೋ. ಡಾ. ನಿರಂಜನಾರಾಧ್ಯ ವಿ.ಪಿ ಅವರ ಮಾರ್ಗದರ್ಶನದಲ್ಲಿ ಹಾಗೂ ಮಗು ಮತ್ತು ಕಾನೂನು ಕೇಂದ್ರ ನ್ಯಾಶನಲ್ ಲಾ ಸ್ಕೂಲ್ ಆಫ್ ಇಂಡಿಯಾ ಯೂನವರ್ಸಿಟಿ ಬೆಂಗಳೂರು ಇವರ ಸುಗಮವಾರಿಕೆಯಲ್ಲಿ ಉಡುಪಿ ಜಿಲ್ಲಾ ಎಸ್.ಡಿ.ಎಂ.ಸಿ ಸಮನ್ವಯ ವೇದಿಕೆ 2013ರಿಂದ ‘ಸರಕಾರಿ ಶಾಲೆ ಉಳಿಯಲಿ ಬೆಳೆಯಲಿ ನೆರೆಹೊರೆಯ ಸಮಾನ ಶಾಲೆಯಾಗಲಿ’ ಎಂಬ ಧ್ಯೇಯ ಉದ್ದೇಶದೊಂದಿಗೆ ಸರಕಾರಿ ಶಾಲೆಗಳ ಎಸ್.ಡಿ.ಎಂ.ಸಿ ಸಬಲೀಕರಣ ಮತ್ತು ಶಿಕ್ಷಕರು, ಪೋಷಕರು ಮತ್ತು ಸಮುದಾಯದೊಂದಿಗೆ ನಿರಂತರವಾಗಿ ಗ್ರಾಮೀಣ ಭಾಗದ ಸರಕಾರಿ ಶಾಲಾ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಸಿಗುವಂತೆ ಮಾಡುವಲ್ಲಿ ತೊಡಗಿಸಿಕೊಂಡಿದೆ ಎಂದು ಮನವಿಯಲ್ಲಿ ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ರಾಜ್ಯ ಶಾಲಾಭಿವೃದ್ದಿ ಮತ್ತು ಮೇಲುಸ್ತುವಾರಿ ಸಮಿತಿಗಳ ಸಮನ್ವಯ ವೇದಿಕೆ ಜಿಲ್ಲಾ ಅಧ್ಯಕ್ಷ ಅಬ್ದುಲ್ ಸಲಾಂ ಚಿತ್ತೂರು, ಪುರಸಭಾ ಘಟಕದ ಅಧ್ಯಕ್ಷ ಅಶ್ವತ್ ಕುಂದಾಪುರ, ಬೈಂದೂರು ತಾಲೂಕು ಅಧ್ಯಕ್ಷ ಅವಿನಾಶ್ ಹೊಳ್ಳ, ಪತ್ರಿಕಾ ಕಾರ್ಯದರ್ಶಿ ಶಶಿ ಬಳ್ಕೂರು, ಸಂಘಟನಾ ಕಾರ್ಯದರ್ಶಿ ವರದ ಆಚಾರ್ಯ ಅಂಕದಕಟ್ಟೆ, ಸಂಪನ್ಮೂಲ ವ್ಯಕ್ತಿ ಅಶ್ಫಕ್ ಮೂಡುಗೋಪಾಡಿ, ಶೋಭಾ ಶಾಂತಾರಾಜ್, ತಾಲೂಕು ಕೋಶಾಧಿಕಾರಿ ಕೃಷ್ಣಾನಂದ ಶ್ಯಾನುಭಾಗ್ ಉಪಸ್ಥಿತರಿದ್ದರು.