ಮಂಗಳೂರು, ಜೂ 18 (DaijworldNews/HR): ಮೂಲಗೇಣಿ ಒಕ್ಕಲುಗಳಿಗೆ ಮಾಲಕತ್ವ ನೀಡುವ ಕಾಯ್ದೆ 2012ಕ್ಕೆ ಕಾನೂನಿನ ಅಡೆತಡೆ ನಿವಾರಣೆಯಾಗಿದೆ. ಕಾಯ್ದೆ ವಿರುದ್ದ ಮೂಲಿದಾರರು ಅಥವಾ ಜಾಗದ ಮಾಲಕರು ಹಾಕಿದ್ದ ರಿಟ್ ಅರ್ಜಿಯನ್ನು ಹೈಕೋರ್ಟ್ ಏಕಸದಸ್ಯ ಪೀಠ ತಿರಸ್ಕರಿಸಿದೆ. ಈ ಮೂಲಕ ಮೂಲಗೇಣಿದಾರರು ತಮ್ಮ ಜಾಗದ ಪೂರ್ಣರೂಪದ ಹಕ್ಕನ್ನು ಪಡೆಯಲು ಸಾಧ್ಯವಾಗಿದೆ. ಇದು ಸಾಮಾಜಿಕ ನ್ಯಾಯಕ್ಕೆ ಸಂದ ಜಯ ಎಂದು ಹೈಕೋರ್ಟ್ ಹಿರಿಯ ವಕೀಲ ಬಿ.ಎಲ್. ಆಚಾರ್ಯ ಹೇಳಿದ್ದಾರೆ.
ಮೂಲಗೇಣಿ ಒಕ್ಕಲು ರಕ್ಷಣ ವೇದಿಕೆ ಮಂಗಳೂರು-ಉಡುಪಿ ವತಿಯಿಂದ ನಗರದ ಡಾನ್ ಬಾಸ್ಕೊ ಸಭಾಭವನದಲ್ಲಿ ನಡೆದ ವಾರ್ಷಿಕ ಮಹಾಸಭೆಯಲ್ಲಿ ಮಾತನಾಡಿ ಅವರು, ಕರ್ನಾಟಕ ಸರಕಾರ ಈ ಹಿಂದೆ ಹೊರಡಿಸಿದ ಆದೇಶವನ್ನು ಜಾರಿಗೊಳಿಸದಂತೆ ಕೆಲವು ಮೂಲ ದಾರರು ರಾಜ್ಯದ ಹೈಕೋರ್ಟ್ನಲ್ಲಿ ತಡೆ ಕೋರಿದ್ದರು. ಸುದೀರ್ಘ ವಾದ-ಪ್ರತಿವಿವಾದಗಳನ್ನು ಆಲಿಸಿದ ಉಚ್ಚ ನ್ಯಾಯಾಲ ಮೇ 22ರಂದು ತೀರ್ಪನ್ನು ಸರಕಾರದ ಪರವಾಗಿ ಹಾಗೂ ಮೂಲಗೇಣಿದಾರರ ಪರವಾಗಿ ನೀಡಿದೆ. ಹೀಗಾಗಿ ಮೂಲಗೇಣಿ ಒಕ್ಕಲುಗಳಿಗೆ ಮಾಲಕತ್ವ ನೀಡಲು ಸಾಧ್ಯವಾಗಲಿದೆ ಎಂದರು.
ಇನ್ನು ತ್ವರಿತಗತಿಯಲ್ಲಿ ತೀರ್ಪು ಪ್ರಕಟವಾಗಿರುವುದು ಶ್ಲಾಘನೀಯ ಕಾರ್ಯ. ಈ ನಿಟ್ಟಿನಲ್ಲಿ ಮೂಲಗೇಣಿ ಸದಸ್ಯರಾದ ಒಕ್ಕಲು ರಕ್ಷಣ ವೇದಿಕೆಯ ಹೋರಾಟ ಅಭಿನಂದನೀಯ ಎಂದು ಹೇಳಿದ್ದಾರೆ.
ಈ ವೇಳೆ ಹಿರಿಯ ವಕೀಲರಾದ ಎಂ.ಆರ್. ಬಲ್ಲಾಳ್, ನಂದೀಶ್ ಭೂಷಣ್, ಕಿಶೋರ್, ಮೂಲಗೇಣಿ ಒಕ್ಕಲು ರಕ್ಷಣ ವೇದಿಕೆಯ ಅಧ್ಯಕ್ಷ ಮ್ಯಾಕ್ಸಿಂ ಡಿ'ಸಿಲ್ವ ಉಡುಪಿಯ ಪ್ರಮುಖರಾದ ಎಸ್.ಎಸ್. ಶೇಟ್ ಉಪಸ್ಥಿತರಿದ್ದರು.
ವಿಧಾನ ಪರಿಷತ್ ಮಾಜಿ ಗಣೇಶ್ ಕಾರ್ಣಿಕ್, ಐವನ್ ಡಿ'ಸೋಜಾ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಉದಯವಾಣಿ ವಿಶ್ರಾಂತ ಸಹಾಯಕ ಸಂಪಾದಕ ಮನೋಹರ ಪ್ರಸಾದ್ ಕಾರ್ಯಕ್ರಮ ನಿರೂಪಿಸಿದರು. ಮೂಲಗೇಣಿ ಒಕ್ಕಲು ರಕ್ಷಣಾ ವೇದಿಕೆಯ ಕಾರ್ಯದರ್ಶಿ ಸಂದೇಶ್ ಪ್ರಭು ಸ್ವಾಗತಿಸಿದರು.