ಕಾರ್ಕಳ, ಏ 01 (MSP): ವಿವಿಧ ಸಂಘಟನೆಗಳು ವಿವಿಧ ಬೇಡಿಕೆಗಳನ್ನು ಮುಂದಿಟ್ಟು ಬಂಡೀಮಠ ಪರಿಸರದಲ್ಲಿ ಆಯೋಜಿಸಿ ಏ.1 ರ ಸೋಮವಾರದ ಪ್ರತಿಭಟನೆಯು ದ್ವಂದ ನಿಲುವಿನಿಂದ ಗೊಂದಲ ಗೂಡಾಗಿ ಮಾರ್ಪಟ್ಟಿತು.
ತಾಲೂಕಿನಲ್ಲಿ ಉದ್ಭವಿಸಿರುವ ಕಟ್ಟಡ ಸಾಮಗ್ರಿಗಳ ಉತ್ಪಾದನೆ ಮತ್ತು ಸಾಗಾಟ ವ್ಯವಸ್ಥೆಯಲ್ಲಿ ಮರಳು, ಕಟ್ಟಡ ಕಲ್ಲು, ಜಲ್ಲಿಕಲ್ಲು, ಕೆಂಪು ಕಲ್ಲು ಇತರೇ ಸಾಮಾಗ್ರಿಗಳು ಸಿಗುತ್ತಿಲ್ಲ. ಜನಜೀವನ ಅಸ್ತವ್ಯಸ್ತವಾಗಿದೆ. ಬದುಕಲು ಸಾದ್ಯವಾಗುತ್ತಿಲ್ಲ. ಜೊತೆಗೆ ಅಧಿಕಾರಿಗಳ ದೌರ್ಜನ್ಯ ಮತ್ತು ದಬ್ಬಾಳಿಕೆ ಖಂಡಿಸಿ ಸೋಮವಾರದಂದು ಬಂಡೀಮಠ ಬಸ್ಸು ನಿಲ್ದಾಣದಲ್ಲಿ ಮೇಸ್ತ್ರಿಗಳು, ಸೆಂಟ್ರಿಂಗ್ ಕಾರ್ಮಿಕರು, ಕಾಂಟ್ರಾಕ್ಟ್ದಾರರು, ಇಂಜಿನಿಯರ್, ಕೂಲಿಕಾರ್ಮಿಕರು, ಲಾರಿ, ಟಿಪ್ಪರ್ ಚಾಲಕ ಮಾಲಕರು, ಕಲ್ಲುಕೋರೆ ಮಾಲಕರು, ಕೆಂಪು ಕಲ್ಲುಕೋರೆ ಮಾಲಕರು, ಜಲ್ಲಿ ಕ್ರಶರ್ ಮಾಲಕರು, ಮರಳು ದಕ್ಕೆ ಪರವಾನಗಿದಾರು ಸೇರಿದಂತೆ ಸುಮಾರು ೫೦೦ಕ್ಕೂ ಅಧಿಕ ಮಂದಿ ಸ್ವಯಂ ಪ್ರೇರಿತವಾಗಿ ಈ ಬಾರಿಯ ಲೋಕಸಭಾ ಚುನಾವಣೆ ಬಹಿಷ್ಕಾರ ಹಾಗೂ ಸಾಂಕೇತಿಕವಾಗಿ ಶಾಂತಿಯುತ ಪ್ರತಿಭಟನೆ ನಡೆಸಿದ್ದರು.
ಮುಖಂಡರ ದ್ವಂದ ನಿಲುವು
ಒಂದೆಡೆ ಲೋಕಸಭಾ ಚುನಾವಣೆ ಬಹಿಷ್ಕರಿಸಲಿದ್ದೇವೆ ಎಂದು ಪದಾಧಿಕಾರಿಗಳು ಪತ್ರಿಕಾಗೋಷ್ಟಿ ನಡೆಸಿದರೆ, ಮತ್ತೊಂದೆಡೆ ಪಕ್ಷದ ಕಾರ್ಯಕ್ರಮದಲ್ಲಿ ಭಾಗವಹಿಸುವ ಮೂಲಕ ಸಾರ್ವಜನಿಕರ ಕೆಂಗಣ್ಣಿಗೆ ಗುರಿಯಾಗಿದ್ದಾರೆ.
ಸೋಮವಾರ ನಡೆಸಲಾಗಿದ್ದ ಲೋಕಸಭೆ ಚುನಾವಣೆ ಶಾಂತಿಯುತ ಬಹಿಷ್ಕಾರದ ಕಾರ್ಯಕ್ರಮದಲ್ಲಿ ಭಾಗವಹಿಸಿದ ಕೆಲ ಪಕ್ಷದ ಕಾರ್ಯಕರ್ತರು ಚುನಾವಣೆ ಬಹಿಷ್ಕಾರ ಇಲ್ಲ ಎಂದು ಘಂಟಾಘೋಷವಾಗಿ ಹೇಳಿರುವುದು ಹೋರಾಟಕ್ಕೆ ತೀವ್ರ ಹಿನ್ನಡೆಗೆ ಕಾರಣವಾಗಿದೆ. ಮುಖಂಡರ ಈ ದ್ವಂದ್ವ ನಿಲುವಿನಿಂದ ಪ್ರತಿಭಟನೆಯಲ್ಲಿ ಭಾಗವಹಿಸಿದ ಕೂಲಿ ಕಾರ್ಮಿಕರಲ್ಲಿ ಗೊಂದಲಕ್ಕೀಡು ಮಾಡಿದೆ. ಸ್ಥಳಕ್ಕೆ ಚುನಾವಣಾಧಿಕಾರಿಯಾಗಿರುವ ತಾಲೂಕು ಪಂಚಾಯತ್ ಕಾರ್ಯನಿರ್ವಾಹಧಿಕಾರಿ ಡಾ. ಹರ್ಷ ಮೇಜರ್ ಸ್ಥಳಕ್ಕೆ ಭೇಟಿ ನೀಡಿ, ಚುನಾವಣೆ ನೀತಿ ಸಂಹಿತೆ ಜಾರಿ ಇದ್ದು ಯಾವುದೇ ಮತದಾನ ಬಹಿಷ್ಕಾರಕ್ಕೆ ಮಾಡುವಂತಿಲ್ಲ. ಅಲ್ಲದೆ ಪ್ರತಿಭಟನೆಗೆ ಅವಕಾಶವಿಲ್ಲ. ತಾವು ಕೂಡಲೇ ಕಾರ್ಯಕ್ರಮವನ್ನು ಕೈಬಿಡುವಂತೆ ಮನವಿ ಮಾಡಿದರು.
ಚುನಾವಣೆ ಅಯೋಗ ವಿಫಲ:
ಬಂಡಿಮಠ ಬಸ್ಸು ನಿಲ್ದಾಣದಲ್ಲಿ ಐನ್ನೂರಕ್ಕೂ ಅಧಿಕ ಸಾರ್ವಜನಿಕರು ಚುನಾವಣೆ ಅಯೋಗ ಹಾಗೂ ಪೊಲೀಸ್ ಅನುಮತಿ ಪಡೆಯದೇ ಚುನಾವಣೆ ಬಹಿಷ್ಕಾರ ನಡೆಸಿ ಪ್ರತಿಭಟನೆ ನಡೆಯುತ್ತಿದ್ದರೂ ಅಧಿಕಾರಿಗಳು ಹಾಗೂ ಪೊಲೀಸರು ಮೂಕಪ್ರೇಕ್ಷಕರಾಗಿದ್ದರು.
ಇಷ್ಟೊಂದು ದೊಡ್ಡ ಮಟ್ಟದಲ್ಲಿ ಕಾರ್ಯಕ್ರಮ ನಡೆಯುತ್ತಿದ್ದರೂ ಅವರ ಮನವೊಲಿಕೆಯ ಪ್ರಯತ್ನ ನಡೆಯದೇ ಇರುವುದು ಅಧಿಕಾರಿಗಳ ವೈಫಲ್ಯ ಕಂಡು ಬಂದಿತ್ತು.
ರಾಜಕೀಯ ತಿರುವು ಪಡೆದುಕೊಂಡ ಪ್ರತಿಭಟನೆ:
ಜೀವನ ಮೊದಲು ಪಕ್ಷ ನಂತರ ಎಂದು ಪತ್ರಿಕಾಗೋಷ್ಠಿಯಲ್ಲಿ ಹೇಳಿಕೊಂಡಿದ್ದ ಪದಾಧಿಕಾರಿಯೋರ್ವರು ಗ್ರಾಮ ಪಂಚಾತ್ವೊಂದರ ಅಧ್ಯಕ್ಷರು ಆಗಿದ್ದಾರೆ. ಆದರೆ ಭಾನುವಾರ ನಡೆದ ಮಂಜುನಾಥ ಪೈ ಸಭಾಂಗಣದಲ್ಲಿ ಜರುಗಿದ್ದ ಬಿಜೆಪಿ ಸಮಾವೇಶದಲ್ಲಿ ಅವರು ಪಾಲ್ಗೊಂಡಿರುವ ಫೋಟೋ ವಾಟ್ಸ್ಅಪ್ ನಲ್ಲಿ ಹರಿದಾಡಿದನ್ನು ಗಮನಿಸಬಹುದಾಗಿದೆ.
ಮರಳು ಪರವಾನಿಗೆದಾರರು ಹಾಗೂ ಲಾರಿ ಚಾಲಕ-ಮಾಲಕ ಸಂಘದ ಅಧ್ಯಕ್ಷ ಉದಯ ಕುಮಾರ್ ಹೆರ್ಮುಂಡೆ, ಗೌರವಾಧ್ಯಕ್ಷ ಉದಯ ಕುಮಾರ್ ಹೆಗ್ಡೆ ಕಾಂತರಗೋಳಿ, ಉಪಾಧ್ಯಕ್ಷ ಸಂಜೀವ ಕೆರ್ವಾಶೆ, ಸದಸ್ಯ ಪ್ರಶಾಂತ್ ಶೆಟ್ಟಿ ಕುಂಠಿಣಿ, ಇಂಜಿನಿಯರ್ಸ್ ಅಸೋಸಿಯೇಷನ್ ಅಧ್ಯಕ್ಷ ದಿವಾಕರ ಶೆಟ್ಟಿ, ಕಾರ್ಯದರ್ಶಿ ರಾಜೇಶ್ ಕುಂಟಾಡಿ, ಪ್ರಶಾಂತ್ ಬೆಳ್ಳಿಯಾರ, ಹರೀಶ್ ಅಂಚನ್, ಕಾರ್ಮಿಕ ಸಂಘಟನೆಯ ಅಧ್ಯಕ್ಷ ರವಿರಾಜ್, ಕ್ರಷರ್ ಮಾಲಕರ ಕಾರ್ಯದರ್ಶಿ ವೆಂಕಟೇಶ್ ರೆಡ್ಡಿ, ಕೆ.ಸಿ. ದೀಪಕ್ ಕಾಮತ್ ಹಾಗೂ ಕೂಲಿ ಕಾರ್ಮಿಕರು ಭಾಗವಹಿಸಿದ್ದರು.