ಉಡುಪಿ, ಜೂ 18 (DaijworldNews/HR): ಉಡುಪಿ ನಗರದ ಹೃದಯ ಭಾಗದಲ್ಲಿ ಇರುವ ಕಾಡಬೆಟ್ಟು ಎಂಬಲ್ಲಿ ಇರುವ "ವಾಯೇಜರ್ ಅಪಾರ್ಟ್ಮೆಂಟ್ನ" ಫ್ಲಾಟ್ ಮಾಲೀಕರು, ಕಟ್ಟಡದ ಬಿಲ್ಡರ್ ಆಗಿರುವ ಅಮೃತ್ ಶೆಣೈ, ಫ್ಲಾಟ್ ನ ಮಾಲೀಕರಿಗೆ ವಂಚಿಸಿ ಬೆದರಿಕೆ ಹಾಕಿದ್ದಾರೆ ಮತ್ತು ಒಂದೇ ಫ್ಲಾಟ್ ಅನ್ನು ಅನೇಕರಿಗೆ ನೀಡಿದ್ದಾರೆ ಎಂದು ಆರೋಪಿಸಿದ್ದಾರೆ.
ಜೂನ್ 17 ರಂದು ಅಪಾರ್ಟ್ಮೆಂಟ್ ಆವರಣದಲ್ಲಿ ಆಯೋಜಿಸಿದ್ದ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದ ವಾಯೇಜರ್ ಫ್ಲಾಟ್ ಮಾಲೀಕರಲ್ಲಿ ಓರ್ವರಾದ ಗಿರೀಶ್ ಐತಾಳ್ ಮಾತನಾಡಿ, "ವಾಯೇಜರ್ ಫ್ಲಾಟ್ ಸುಮಾರು 36 ಮನೆಗಳು. ಫ್ಲಾಟ್ ನಿರ್ಮಿಸಿದ ಅಮೃತ್ ಶೆಣೈ ಪ್ರತಿ ನಿವಾಸಿಗಳಿಂದ 30 ಲಕ್ಷಕ್ಕೂ ಹೆಚ್ಚು ಹಣವನ್ನು ತೆಗೆದುಕೊಂಡರು ಮತ್ತು ಮನೆಯನ್ನು ಖರೀದಿದಾರರ ಹೆಸರಿನಲ್ಲಿ ಇನ್ನೂ ಕೂಡಾ ನೋಂದಣಿ ಮಾಡಿಸಿಲ್ಲ, ಮಣಿಪಾಲದ ಕೆನರಾ ಬ್ಯಾಂಕ್ನಿಂದ ಫ್ಲ್ಯಾಟ್ ನಿರ್ಮಾಣಕ್ಕೆ 15 ಕೋಟಿ ಸಾಲ ಪಡೆದರು, ಇನ್ನೂ 4 ಕೋಟಿ ಸಾಲ ಪಾವತಿ ಬಾಕಿ ಇದೆ, ಸರಿಯಾದ ಪಾರ್ಕಿಂಗ್ ಸೌಲಭ್ಯವಿಲ್ಲ, ಕುಡಿಯುವ ನೀರಿನ ಸೌಲಭ್ಯವೂ ಇಲ್ಲ, ನಿವಾಸಿಗಳು ಈಗ ಟ್ಯಾಂಕರ್ ನೀರು ಪೂರೈಕೆಯ ಮೇಲೆ ಅವಲಂಬಿತರಾಗಿದ್ದಾರೆ, ಸರಿಯಾದ ವಿದ್ಯುತ್ ಸೌಲಭ್ಯವೂ ಲಭ್ಯವಿಲ್ಲ, ನಿವಾಸಿಗಳು ತಾತ್ಕಾಲಿಕ ವಿದ್ಯುತ್ ಸಂಪರ್ಕವನ್ನು ಬಳಸುತ್ತಿದ್ದಾರೆ. 36 ಅಪಾರ್ಟ್ಮೆಂಟ್ಗಳಲ್ಲಿ 150 ಕ್ಕೂ ಹೆಚ್ಚು ಜನರು ವಾಸಿಸುತ್ತಿದ್ದಾರೆ. ಪ್ರತಿಯೊಬ್ಬ ಫ್ಲಾಟ್ ಮಾಲೀಕರು ಚೆಕ್ ಅಥವಾ ಆನ್ಲೈನ್ ಪಾವತಿಯ ಮೂಲಕ ಪೂರ್ಣ ಮೊತ್ತವನ್ನು ಪಾವತಿಸಿದ್ದಾರೆ, ಆದ್ದರಿಂದ ಅವರು ಪಾವತಿಗೆ ಪುರಾವೆ ಇದೆ, ಸರಿಯಾದ ಭದ್ರತೆ ಇಲ್ಲ, ಮತ್ತು ಕಟ್ಟಡದ 40% ಕೆಲಸ ಇನ್ನೂ ಬಾಕಿ ಇದೆ, ಫ್ಲಾಟ್ ಅಕ್ರಮ ಕಟ್ಟಡ ಎಂದು ಪ್ರಸಿದ್ಧವಾಗಿದೆ, ಅಮೃತ್ ಶೆಣೈ ವಿರುದ್ಧ ಉಡುಪಿಯಲ್ಲಿ ಫ್ಲಾಟ್ ನಿವಾಸಿಗಳಿಂದ ಅನೇಕ ಪ್ರಕರಣಗಳು ದಾಖಲಾಗಿವೆ, ಸುಮಾರು 15 ವಾರಂಟ್ಗಳನ್ನು ಸಹ ಹೊರಡಿಸಲಾಗಿದೆ, ಆದರೆ ಆತನ ವಿರುದ್ಧ ಯಾವುದೇ ಕ್ರಮ ಕೈಗೊಂಡಿಲ್ಲ. ತನ್ನನ್ನು ಪ್ರಶ್ನಿಸುವ ಫ್ಲಾಟ್ ಮಾಲೀಕರಿಗೆ ಬೆದರಿಕೆ ಹಾಕುತ್ತಿದ್ದಾರೆ.
ಇಲ್ಲಿನ ನಿವಾಸಿ ಜೆಸಿಂತಾ ಮೆಂಡೋನ್ಸಾ ಮಾಧ್ಯಮದವರೊಂದಿಗೆ ಮಾತನಾಡಿ, ‘ಬಿಲ್ಡರ್ ಅಮೃತ್ ಶೆಣೈಗೆ ಸಂಪೂರ್ಣ ಹಣ ನೀಡಿದ್ದೇನೆ. ನಾನು 53 ಲಕ್ಷ ರೂಪಾಯಿ ಸಾಲ ಪಡೆದು ಅವನಿಗೆ ಪಾವತಿಸಿದ್ದೇನೆ. ಆದರೆ ಅಪಾರ್ಟ್ಮೆಂಟ್ ಇನ್ನೂ ನನ್ನ ಹೆಸರಿಗೆ ನೋಂದಣಿಯಾಗಿಲ್ಲ. ನಾನು 9 ನೇ ಮಹಡಿಯಲ್ಲಿ ಇರುತ್ತೇನೆ. ಎಲಿವೇಟರ್ ಆಗಲಿ ಕೆಲಸ ಮಾಡುವುದಿಲ್ಲ, ನಮ್ಮಲ್ಲಿ ಹಲವರು ಲಿಫ್ಟ್ನಲ್ಲಿ ಗಂಟೆಗಟ್ಟಲೆ ಸಿಲುಕಿಕೊಂಡ ಘಟನೆಕೂಡ ನಡೆದಿದೆ, ಆದ್ದರಿಂದ ನನ್ನ ಮಕ್ಕಳನ್ನು ಲಿಫ್ಟ್ನಲ್ಲಿ ಕಳುಹಿಸಲು ನಾನು ಹೆದರುತ್ತಿದ್ದೆನೆ, ಒಂಬತ್ತನೇ ಮಹಡಿಯಿಂದ ಮೆಟ್ಟಿಲುಗಳ ಮೂಲಕ ನಡೆಯಲು ತುಂಬಾ ಕಷ್ಟ. ಲಿಫ್ಟ್ ರಿಪೇರಿ ಬಗ್ಗೆ ಅಥವಾ ನೋಂದಣಿ ಬಗ್ಗೆ ಕೇಳಿದರೆ ನಮ್ಮ ಪಕ್ಷ ಅಧಿಕಾರಕ್ಕೆ ಬಂದ ಮೇಲೆ ತಕ್ಕ ಪಾಠ ಕಲಿಸುತ್ತೇನೆ ಎಂದು ಗದರಿಸಿ, ಎಲ್ಲ ಪೊಲೀಸ್ ಅಧಿಕಾರಿಗಳು ಹಾಗೂ ಇತರೆ ಅಧಿಕಾರಿಗಳು ತಮ್ಮ ಹಿಡಿತದಲ್ಲಿದ್ದಾರೆ ಎಂದು ಬೆದರಿಕೆ ಹಾಕುತ್ತಿದ್ದಾರೆ. ನಿಮಗೆ ಏನನ್ನೂ ಮಾಡಲು ಸಾಧ್ಯವಿಲ್ಲ ಎನ್ನುತ್ತಾರೆ" ಎಂದರು.
ಫ್ಲಾಟ್ ಒಂದರ ನಿವಾಸಿ ಜೋಶಿತಾ ಮಥಯಾಸ್ ಮಾತನಾಡಿ, “ನಾನು 2013 ರಲ್ಲಿ ಮುಂಗಡವಾಗಿ ಒಂದು ಲಕ್ಷ ಪಾವತಿಸಿ ಈ ಫ್ಲಾಟ್ನಲ್ಲಿ ಅಪಾರ್ಟ್ಮೆಂಟ್ ತೆಗೆದುಕೊಂಡೆ, ನಂತರ 2017 ರಲ್ಲಿ ನನ್ನ ಭವಿಷ್ಯ ನಿಧಿ ಮತ್ತು ಸಾಲವನ್ನು ಮಾಡಿ ಪೂರ್ಣ ಮೊತ್ತವನ್ನು ಪಾವತಿಸಿದೆ. ಅಪಾರ್ಟ್ಮೆಂಟ್ ಅನ್ನು ನನ್ನ ಹೆಸರಿನಲ್ಲಿ ನೋಂದಾಯಿಸಲು ನಾನು ಕೇಳಿದಾಗ ಅವರು ದಾಖಲೆಗಳನ್ನು ಪಡೆಯಲು ನಮ್ಮನ್ನು ಎರಡು ದಿನಗಳವರೆಗೆ ಅಲೆದಾಡಿಸಿದರು, ಆದರೆ ಅವರು ಇನ್ನೂ ಫ್ಲಾಟ್ ಅನ್ನು ನನ್ನ ಹೆಸರಿಗೆ ನೋಂದಾಯಿಸಲಿಲ್ಲ. ನಾನು ಸಂಪೂರ್ಣ ಹಣ ವನ್ನು ಪಾವತಿಸಿದ್ದೇನೆ ಮತ್ತು ಮನೆಯ ಇಂಟೀರಿಯರ್ ಕೆಲಸಗಳನ್ನು ನಾನು ನನ್ನ ಸ್ವಂತ ಹಣವನ್ನು ಖರ್ಚು ಮಾಡಿದ್ದೇನೆ.
ಹಿರಿಯ ನಾಗರಿಕರಾದ ಪಾಂಡುರಂಗ ರಾವ್ ಅವರು ಮಾಧ್ಯಮದವರ ಮುಂದೆ ತಮ್ಮ ಕಷ್ಟವನ್ನು ಬಿಂಬಿಸುತ್ತಾ, "ನಾನು ನನ್ನ ಹೆಂಡತಿಯ ನೆಕ್ಲೇಸ್ ಸೇರಿದಂತೆ ನನ್ನ ಎಲ್ಲಾ ವಸ್ತುಗಳನ್ನು ಮಾರಿ 65 ಲಕ್ಷ ರೂ. ಪಾವತಿಸಿದ್ದೇನೆ. ಲಿಫ್ಟ್ ಕೆಲಸ ಮಾಡದ ಕಾರಣ, ಆರು ತಿಂಗಳಲ್ಲಿ ಮೊದಲ ಬಾರಿಗೆ 9 ನೆ ಮಹಡಿಯಿಂದ ಕೆಳಗೆ ಬಂದಿದ್ದೇನೆ. ನನಗೆ ಮೆಟ್ಟಿಲುಗಳ ಮೂಲಕ ನಡೆದು ಕೆಳಗೆ ಬರಲು ತುಂಬಾ ಕಷ್ಟ ಆಗುತ್ತದೆ ನನ್ನಂತಹ ಹಿರಿಯ ನಾಗರಿಕರು ಕೆಳಗೆ ಬರಲು ಬಹುತೇಕ ನೋವು ಅನುಭವಿಸುತ್ತಿದ್ದೇವೆ. ನಾನು ಮತ್ತು ನನ್ನ ಹೆಂಡತಿ ಒಮ್ಮೆ ಗಂಟೆಗಟ್ಟಲೆ ಲಿಫ್ಟ್ನಲ್ಲಿ ಸಿಲುಕಿಕೊಂಡಿದ್ದೆವು. ಕಟ್ಟಡಕ್ಕೆ ಜನರೇಟರ್ ಸಹ ಬ್ಯಾಕಪ್ ಇಲ್ಲ".
ಬಿಲ್ಡರ್ ಅಮೃತ್ ಶೆಣೈ ಒಂದೇ ಫ್ಲಾಟ್ ಅನ್ನು ಅನೇಕ ಖರೀದಿದಾರರಿಗೆ ಮಾರಾಟ ಮಾಡಿದ್ದಾರೆ ಎಂದು ನಿವಾಸಿಗಳು ಆರೋಪಿಸಿದ್ದಾರೆ. ಮಾತ್ರವಲ್ಲದೆ ಅಮೃತ್ ಶೆಣೈ ಒಂದೇ ಫ್ಲಾಟ್ ಅನ್ನು ಮೂವರಿಗೆ ಮಾರಾಟ ಮಾಡಿದ್ದಾರೆ ಮತ್ತು ಅವರಿಗೆ ಒಂದೇ ಬ್ಯಾಂಕ್ನಿಂದ ಸಾಲ ಸೌಲಭ್ಯವನ್ನು ಸಹ ಏರ್ಪಡಿಸಿದ್ದಾರೆ.
ಫ್ಲಾಟ್ ನಿವಾಸಿಗಳು ಎರಡು ವರ್ಷಗಳ ಹಿಂದೆ ಅಮೃತ್ ಶೆಣೈ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ, ಎಫ್ಐಆರ್ ಕೂಡ ದಾಖಲಾಗಿದೆ. 21023 ರ ಜೂನ್ 13 ರಂದು ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಐಪಿಸಿ 406, 417,418 ಮತ್ತು 420 ರ ಅಡಿಯಲ್ಲಿ ಬಿಲ್ಡರ್ ವಿರುದ್ಧ ಮತ್ತೊಂದು ಹೊಸ ಪ್ರಕರಣವನ್ನು ದಾಖಲಿಸಲಾಗಿದೆ. ಮುಂದಿನ ದಿನಗಳಲ್ಲಿ ನಿವಾಸಿಗಳು ಕಾನೂನು ಪ್ರಕಾರ ಹೋರಾಟ ಮಾಡಲು ನಿರ್ಧರಿಸಿದ್ದಾರೆ. ಮುಂದಿನ ವಾರ ಬೆಂಗಳೂರಿಗೆ ಭೇಟಿ ನೀಡಿ, ಹೈಕೋರ್ಟ್ನಲ್ಲಿ ರಿಟ್ ಪ್ರಕರಣ ದಾಖಲಿಸಿ, ಸಿಎಂ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ಅವರ ಗಮನಕ್ಕೂ ಈ ಪ್ರಕರಣವನ್ನು ತರಲು ನಿರ್ಧರಿಸಿದ್ದಾರೆ.