ಉಡುಪಿ, ಜೂ 17 (DaijiworldNews/HR): ಅಂಬಲಪಾಡಿ ಗ್ರಾಮ ಪಂಚಾಯತ್ ಗ್ರಾಮಸ್ಥರು ಟ್ಯಾಂಕರ್ ಕುಡಿಯುವ ನೀರಿನ ಸೌಲಭ್ಯ ಸರಿಯಾಗಿ ಪೂರೈಕೆಯಾಗುತ್ತಿಲ್ಲ ಎಂದು ಆರೋಪಿಸಿ ಗ್ರಾಮ ಮಹಿಳೆಯರು ಕೊಡಪಾನ ಹಿಡಿದು ಗ್ರಾಮ ಪಂಚಾಯತ್ ಕಚೇರಿಗೆ ಮುತ್ತಿಗೆ ಹಾಕಿದ ಘಟನೆ ಶನಿವಾರ ಜೂನ್ 17 ರಂದು ನಡೆದಿದೆ.
ಉಡುಪಿ ನಗರದಲ್ಲಿ ತೀವ್ರ ರೀತಿಯ ನೀರಿನ ಸಮಸ್ಯೆ ಎದುರಾಗಿದ್ದು, ಉಡುಪಿ ನಗರಕ್ಕೆ ಅತಿ ಹತ್ತಿರುವಿರುವ ಅಂಬಲಪಾಡಿ ಗ್ರಾಮ ಪಂಚಾಯತ್ ಜನರಿಗೆ ಸರಿಯಾದ ರೀತಿಯಲ್ಲಿ ನೀರನ್ನು ಪೂರೈಸಲು ಸಾಧ್ಯವಾಗದ ಪರಿಸ್ಥಿತಿ ನಿರ್ಮಾಣವಾಗಿದೆ. ಈ ಹಿನ್ನಲೆಲ್ಲಿ ನಗರಸಭೆ 5 ದಿನಕ್ಕೊಮ್ಮೆ ಆಯಾ ಪಂಚಾಯತ್ ಗಳಿಗೆ ಟ್ಯಾಂಕರ್ ಮೂಲಕ ನೀರನ್ನು ಪೂರೈಕೆ ಮಾಡಲಾಗುತ್ತಿದೆ, ಅಂಬಲಪಾಡಿ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಗ್ರಾಮಸ್ಥರಿಗೆ ಟ್ಯಾಂಕರ್ ನೀರು ಕೂಡಾ ಸರಿಯಾದ ರೀತಿಯಲ್ಲಿ ಪೂರೈಕೆ ಆಗುತ್ತಿಲ್ಲ ಎಂಬ ಆರೋಪ ವ್ಯಕ್ತವಾಗಿದೆ.
ಇದರಿಂದಾಗಿ ಆಕ್ರೋಶಗೊಂಡಿರುವ ಗ್ರಾಮಸ್ಥರು ಶನಿವಾರದಂದು ಗ್ರಾಮ ಪಂಚಾಯತ್ ಕಚೇರಿಗೆ ಮುತ್ತಿಗೆ ಹಾಕಿ ಪಂಚಾಯತ್ ಅಧ್ಯಕ್ಷರನ್ನು ತರಾಟೆಗೆ ತೆಗೆದುಕೊಂಡರು.
ಈ ಸಂದರ್ಭದಲ್ಲಿ ಜನರು ತಮ್ಮ ತಮ್ಮ ಮನೆಯ ಖಾಲಿ ಕೊಡಪಾನಗಳನ್ನು ತಂದು ಗ್ರಾಮ ಪಂಚಾಯತ್ ನ ಸಂಬಂಧ ಪಟ್ಟ ಅಧಿಕಾರಿಗಳು ಬಂದು ಸಮಸ್ಯೆಯನ್ನು ಬಗೆ ಹರಿಸಬೇಕು ಎಂದು ಪಟ್ಟು ಹಿಡಿದರು.
ಮಾಧ್ಯಮದವರೊಂದಿಗೆ ಮಾತನಾಡಿದ ಗ್ರಾಮದ ಮಹಿಳೆಯರು, "ನಮಗೆ ನೀರು ಸಿಗದಿದ್ದರೆ ನಾವು ಹೇಗೆ ಬದಕಬೇಕು. ಇಲ್ಲಿರುವ ನೀರು ಕುಡಿಯಲು ಯೋಗ್ಯವಿಲ್ಲ ಟ್ಯಾಂಕರ್ ನೀರು ಸಿಗದಿರುವ ಕಾರಣ ಗ್ರಾಮ ಪಂಚಾಯತ್ ನವರು ಬದಲಿ ವ್ಯವಸ್ಥೆ ಮಾಡಬೇಕು. ನಾವು ಗ್ರಾಮ ಪಂಚಾಯತ್ ಗೆ ಹಣವನ್ನು ಕಟ್ಟುವುದಿಲ್ಲವೆ ಹಾಗಿದ್ರೆ ನಮಗೆ ಅವರು ನೀರನ್ನು ನೀಡಬೇಕು. ಕಳೆದ ರಡು ತಿಂಗಳಿನಲ್ಲಿ ಮೂರು ಬಾರಿ ನೀರು ನೀಡಿದ್ದು ಆ ಬಳಿಕ ನೀರು ನೀಡಿಲ್ಲ. ಭಾಗದಲ್ಲಿ ಸುಮಾರು 80 ಕುಟುಂಬಗಳು ವಾಸಿಸುತ್ತಿವೆ" ಎಂದು ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ.