ಬಂಟ್ವಾಳ, ಜೂ 17 (DaijiworldNews/MS): ಮೋಸ, ಅಮೀಷ, ಬಲವಂತವಾಗಿ ಮತಾಂತರ ಮಾಡುವ ಕೃತ್ಯದಿಂದ ರಕ್ಷಿಸಲು ಈ ಹಿಂದಿನ ಸರಕಾರ ತಂದಿದ್ದ ಮತಾಂತರ ಕಾಯ್ದೆಯನ್ನು ರದ್ದುಗೊಳಿಸಲು ಮುಂದಾಗಿರುವ ಕಾಂಗ್ರೆಸ್ ಸರಕಾರದ ಕ್ರಮಕ್ಕೆ ತೀವ್ರ ಅಸಮಾಧಾನ ವ್ಯಕ್ತಪಡಿಸಿರುವ ಆರೆಸ್ಸೆಸ್ ಮುಖಂಡ ಡಾ.ಪ್ರಭಾಕರ ಭಟ್ ಕಲ್ಲಡ್ಕ ಅವರು ಇದರ ವಿರುದ್ಧ ಜನಮಾನಸದಿಂದ ದೊಡ್ಡಮಟ್ಟದಲ್ಲಿ ಹೋರಾಟ ನಡೆಯಲಿದೆ ಎಂದು ಎಚ್ಚರಿಸಿದ್ದಾರೆ.
ಶುಕ್ರವಾರ ಬಿ.ಸಿ.ರೋಡಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಹಿಂದಿನ ಸರ್ಕಾರ ತಂದಿರುವ ಮತಾಂತರ ಕಾಯ್ದೆ ಕಾನೂನಿನಲ್ಲಿ ಮೋಸ , ವಂಚನೆಯ, ಬಲವಂತದ ಮತಾಂತರಕ್ಕೆ ಅವಕಾಶವಿರಲಿಲ್ಲ,ಆದರೆ ಸ್ವ ಇಚ್ಛೆಯಿಂದ ಜಿಲ್ಲಾಧಿಕಾರಿಯವರಿಗೆ ಅರ್ಜಿ ಹಾಕಿ ಸ್ಪಷ್ಟ ಕಾರಣ ನೀಡಿ ಮತಾಂತರವಾಗುವುದಕ್ಕೆ ಅಡ್ಡಿ ಇರಲಿಲ್ಲ ಎಂದು ತಿಳಿಸಿದರು.
ಮತಾಂತರ ಕದ್ದುಮುಚ್ಚಿ ನಡೆಯಬಾರದು ಎನ್ನುವುದೂ ಸ್ಪಷ್ಟವಾಗಿತ್ತು, ಮತಾಂತರಕ್ಕೂ ಕಾನೂನಿನ ನಿಬಂಧನೆಗಳನ್ನೂನೀಡಲಾಗಿತ್ತು, ಆದರೆ ಈಗಿನ ಸರ್ಕಾರ ಯಾರನ್ನು ಓಲೈಸಲು ಮತಾಂತರ ನಿಷೇಧ ಕಾಯ್ದೆ ರದ್ದುಪಡಿಸುತ್ತಿದ್ದಾರೆ ಎನ್ನುವುದು ಅರ್ಥವಾಗುತ್ತಿಲ್ಲ ಎಂದ ಡಾ.ಭಟ್ ಅವರು ಸರ್ಕಾರಗಳು ಬದಲಾದ ಹಾಗೆ ಹಿಂದಿನದು ಸರಿ ಇಲ್ಲವಾದರೆ ಬದಲಿಸುವುದು ಸಹಜ, ಅದಕ್ಕೆ ಸಂವಿಧಾನದಲ್ಲಿ ಅವಕಾಶವೂ ಇದೆ, ಆದರೆ ಹಿಂದಿನ ಸರ್ಕಾರದ ಯಾವುದೂ ಕೂಡ ಸರಿ ಇಲ್ಲ ಎನ್ನುವ ಈಗಿನ ಸರ್ಕಾರದ ಧೋರಣೆ ಸರಿ ಅಲ್ಲ ಎಂದು ಅವರು ತಿಳಿಸಿದರು
ನಗರ ಪ್ರದೇಶ ಮಾತ್ರವಲ್ಲ ಗ್ರಾಮೀಣ ಭಾಗದಲ್ಲು ವಿವಿಧ ಅಮಿಷ, ಬಲವಂತದ ಮತಾಂತರ ಅವ್ಯಾಹತವಾಗಿ ನಡೆಯುತಿತ್ತು.ಇದನ್ನು ತಡೆಯುವ ನಿಟ್ಟಿನಲ್ಲಿ ಹಿಂದಿನ ಸರಕಾರ ತಂದಿರುವ ಮತಾಂತರ ಕಾಯ್ದೆಯನ್ನು ಈಗಿನ ಸರಕಾರ ರದ್ದುಗೊಳಿಸುವ ಮೂಲಕ ಮೋಸ, ಅಮಿಷ, ಬಲವಂತದ ಮತಾಂತರಕ್ಕೆ ಮತ್ತೆ ಒಪ್ಪಿಗೆ ನೀಡುತ್ತದೆಯೇ ಎಂದು ಪ್ರಶ್ನಿಸಿರುವ ಡಾ.ಭಟ್ ಅವರು ಮತಾಂತರ ನಿಷೇಧ ಕಾಯ್ದೆ ರದ್ದುಪಡಿಸುವುದಕ್ಕೆ ತನ್ನ ವಿರೋಧ ಇದೆ ಎಂದರು.
ಹಿಂದೂ ಸಮಾಜ ಎಲ್ಲವನ್ನು ಸ್ವೀಕರಿಸುವ ಮತ್ತು ಒಪ್ಪಿಕೊಳ್ಳುವ ಸಮಾಜವಾಗಿದೆ.ಅವರವರ ಪದ್ದತಿಗನುಗುಣವಾಗಿ ನಡೆದುಕೊಳ್ಳುವುದಕ್ಕೆ ಯಾರು ಅಡ್ಡಿಪಡಿಸುವುದಾಗಲಿ,ವಿರೋಧವು ಇಲ್ಲ ,ಆದರೆ ಮನೆ,ಮನ,ಮನಸ್ಸು ಒಡೆಯುವ ಕಾರ್ಯ ಅಗಬಾರದು ಎಂದರು.