ಮಂಗಳೂರು, ಜೂ 16 (DaijiworldNews/SM) : ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬಿಜೆಪಿ ಅವಧಿಯಲ್ಲಿ ಕರಾವಳಿಯಲ್ಲಿ ಶಾಂತಿ, ಸೌಹಾರ್ದತೆ ಇತ್ತು. ಆದರೆ ಕಾಂಗ್ರೆಸ್ ಒಂದು ಸಮುದಾಯವನ್ನು ಮೆಚ್ಚಿಸುವ ಕೆಲಸ ಮಾಡುತ್ತಿದೆ. ಹೀಗಾಗಿ ಕರಾವಳಿಯಲ್ಲಿ ಕಮ್ಯೂನಲ್ ವಿಂಗ್ ಸ್ಥಾಪನೆ ಆಗಿದೆ. ಆದರೆ, ಧರ್ಮ, ಸಂಸ್ಕೃತಿ ಬಂದಾಗ ನಮ್ಮ ಪರಿವಾರ ಸಂಘಟನೆ ಹೋರಾಟ ಮಾಡಲಿದೆ. ಯಾವುದೇ ವಿಂಗ್ ಇದ್ದರೂ ಕಾರ್ಯಕರ್ತರು ಹೋರಾಟ ನಡೆಸುತ್ತಾರೆ. ನಮ್ಮ ಕಾರ್ಯಕರ್ತರಿಗೆ ಬಿಜೆಪಿ ಬೆಂಬಲ ನೀಡಲಿದೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಸುದರ್ಶನ್ ಹೇಳಿಕೆ ನೀಡಿದ್ದಾರೆ.
ನಗರದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ತುಷ್ಟೀಕರಣ ನೀತಿ ಮೂಲಕ ಕಾಂಗ್ರೆಸ್ ರಾಜಕಾರಣ ಮಾಡುತ್ತಿದೆ. ಈ ಹಿಂದೆ ನಮ್ಮ ಸರಕಾರ ಸಂವಿಧಾನದ ಆಶಯಕ್ಕೆ ಪೂರಕವಾಗಿ ಮತಾಂತರ ನಿಷೇಧ ಕಾಯ್ದೆ ಜಾರಿ ಮಾಡಿತ್ತು. ಇದೀಗ ಈ ಕಾಯ್ದೆಯನ್ನು ಕಾಂಗ್ರೆಸ್ ವಾಪಸ್ ಪಡೆದುಕೊಳ್ಳುತ್ತಿದೆ. ಆ ಮೂಲಕ ಬಲವಂತದ ಮತಾಂತರ, ಲವ್ ಜಿಹಾದ್ ಗೆ ಕಾಂಗ್ರೆಸ್ ಬೆಂಬಲ ನೀಡುತ್ತಿದೆ. ಮತಾಂತ ನಿಷೇಧ ಕಾಯ್ದೆ ಹಿಂಪಡೆಯುವ ಮೂಲಕ ರಾಜ್ಯದಲ್ಲಿ ಅರಾಜಕತೆ ಸೃಷ್ಟಿಸಲು ಕಾಂಗ್ರೆಸ್ ಪ್ರಯತ್ನ ಪಡುತ್ತಿದೆ. ರಾಜ್ಯದ ಶಾಂತಿ, ಸೌಹಾರ್ದತೆ ಉಳಿಯಲು ಕಾಯ್ದೆ ಜಾರಿಯಲ್ಲಿರಬೇಕು ಅದಕ್ಕಾಗಿ ಮತಾಂತರ ನಿಷೇಧ ಕಾಯ್ದೆಯನ್ನು ವಾಪಸ್ ತೆಗೆಯಬಾರದು ಎಂದು ಆಗ್ರಹಿಸಿದರು.