ಮಂಗಳೂರು, ಜೂ 16 (DaijiworldNews/SM): ನಗರದ ಅತ್ತಾವರ ಕೆಎಂಸಿ ಆಸ್ಪತ್ರೆ ಸಮೀಪದ ಎರಡು ಮನೆಗಳಲ್ಲಿ ಕಳ್ಳತನ ನಡೆಸಿ ಪರಾರಿಯಾಗಲು ಯತ್ನಿಸಿದ ಹೊರ ರಾಜ್ಯದ ನಾಲ್ಕು ಮಂದಿಯನ್ನು ಪಾಂಡೇಶ್ವರ ಪೊಲೀಸರು ಕೃತ್ಯ ನಡೆದ ಐದು ಗಂಟೆಯೊಳಗೆ ಬಂಧಿಸಿದ ಘಟನೆ ಗುರುವಾರ ನಡೆದಿದೆ. ಬಂಧಿತ ಆರೋಪಿಗಳನ್ನು ಹೊಸದಿಲ್ಲಿಯ ನಿವಾಸಿಗಳಾದ ಮುಹಮ್ಮದ್ ಆಸೀಫ್(23), ಶೇಖ್ ಮೈದುಲ್(25), ವಕೀಲ್ ಅಹ್ಮದ್(34), ಪಶ್ಚಿಮ ಬಂಗಾಳದ ರಫೀಕ್ ಖಾನ್(24) ಎಂದು ಗುರುತಿಸಲಾಗಿದೆ.
ಇವರಿಂದ ಕಳ್ಳತನ ನಡೆಸಿದ ಲಕ್ಷಾಂತರ ರೂ. ಮೌಲ್ಯದ ಚಿನ್ನಾಭರಣ ಮತ್ತು ನಗದನ್ನು ವಶಪಡಿಸಲಾಗಿದೆ. ನಗರದ ಅತ್ತಾವರದ ಬ್ರಿಜೇಶ್ ಅಪಾರ್ಟ್ಮೆಂಟ್ನ ಎರಡು ಮನೆಯ ಬಾಗಿಲನ್ನು ಗುರುವಾರ ಮಧ್ಯಾಹ್ನ 1ರಿಂದ 3ರ ಮಧ್ಯೆ ಮುರಿದ ಆರೋಪಿಗಳು ಕಪಾಟಿನಲ್ಲಿಟ್ಟಿದ್ದ ವಿವಿಧ ವಿನ್ಯಾಸದ ಚಿನ್ನಾಭರಣ, ನಗದು ಸಹಿತ ಸುಮಾರು 4.45 ಲಕ್ಷ ರೂ. ಮೌಲ್ಯದ ಸೊತ್ತುಗಳನ್ನು ಕಳವು ಮಾಡಿದ್ದಾರೆ ಎಂದು ವಿಜಯಪುರ ಮೂಲದ ಪೂಜಾ ಎಂಬಾಕೆ ಪಾಂಡೇಶ್ವರ ಪೊಲೀಸರಿಗೆ ದೂರು ನೀಡಿದ್ದರು. ಅದರಂತೆ ಕಾರ್ಯಾಚರಣೆ ನಡೆಸಿದ ಪೊಲೀಸರು ಪಣಂಬೂರು ಬೀಚ್ ಬಳಿ ರಾತ್ರಿ ಸುಮಾರು 8ಕ್ಕೆ ಸಂಶಯಾಸ್ಪದ ರೀತಿಯಲ್ಲಿದ್ದ ನಾಲ್ಕು ಮಂದಿಯನ್ನು ವಶಕ್ಕೆ ಪಡೆದು ವಿಚಾರಿಸಿದರು.
ಈ ಸಂದರ್ಭ ಆರೋಪಿಗಳು ಅತ್ತಾವರದ ಮನೆಯಲ್ಲಿ ಕಳ್ಳತನ ನಡೆಸಿರುವುದನ್ನು ಒಪ್ಪಿಕೊಂಡಿದ್ದಾರೆ. ಅದರಂತೆ ನಾಲ್ಕು ಮಂದಿಯನ್ನೂ ಪೊಲೀಸರು ಬಂಧಿಸಿ ಕೃತ್ಯಕ್ಕೆ ಬಳಸಿದ್ದ 2 ಕಟ್ಟರ್, 2 ಸ್ಕ್ರೂಡ್ರೈವರ್, 1 ಚೂಪಾದ ಕಬ್ಬಿಣದ ರಾಡ್, 7 ಮೊಬೈಲ್ ಪೋನುಗಳನ್ನು ಸ್ವಾಧೀನಪಡಿಸಲಾಗಿದೆ. ಸಿ.ಸಿ. ಕ್ಯಾಮರಾ ಇಲ್ಲದಿರುವ, ಬೀಗ ಹಾಕಿರುವ ಮನೆ ಹಾಗೂ ಅಪಾರ್ಟ್ಮೆಂಟ್ಗಳನ್ನು ಗುರಿಯಾಗಿಸಿಕೊಂಡು ಕಳವು ನಡೆಸುತ್ತಿರುವ ಬಗ್ಗೆ ಆರೋಪಿಗಳು ಬಾಯ್ಬಿಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಮಂಗಳೂರು ನಗರ ಮತ್ತು ಇತರ ಕಡೆಗಳಲ್ಲಿ ನಡೆದ ಕಳವು ಪ್ರಕರಣಕ್ಕೆ ಸಂಬಂಧಪಟ್ಟು ಹೆಚ್ಚಿನ ವಿಚಾರಣೆಗೆ ಆರೋಪಿಗಳನ್ನು ಪೊಲೀಸ್ ಕಸ್ಟಡಿಗೆ ಪಡೆಯಲಾಗಿದೆ ಎಂದು ಪೊಲೀಸ್ ಆಯುಕ್ತ ಕುಲದೀಪ್ ಕುಮಾರ್ ಜೈನ್ ತಿಳಿಸಿದ್ದಾರೆ. ಕಾರ್ಯಾಚರಣೆಯಲ್ಲಿ ಪಾಂಡೇಶ್ವರ ಠಾಣೆಯ ನಿರೀಕ್ಷಕ ಮಂಜುನಾಥ ಎಂ., ಎಸ್ಸೈಗಳಾದ ಮನೋಹರ್ ಪ್ರಸಾದ್ ಪಿ., ಅನಂತ ಮುರ್ಡೇಶ್ವರ್, ಶೀತಲ್ ಅಲಗೂರು, ಜ್ಯೋತಿ ಜಿ. ಹಾಗೂ ಅಪರಾದ ಪತ್ತೆ ವಿಭಾಗದ ಸಿಬ್ಬಂದಿ ಪ್ರಕಾಶ್ ನಾಯ್ಕ್ ವಿ., ಲಕ್ಷ್ಮಣ ಸಾಲೋಟಗಿ, ಭಾಸ್ಕರ್ ಹಾಲಾಡಿ, ಸ್ವಾಮಿ ಎಸ್. ಪಾಲ್ಗೊಂಡಿದ್ದರು.