ಉಡುಪಿ,ಜೂ 16 (DaijiworldNews/SM): ಉಡುಪಿ ಜಿಲ್ಲಾ ಎಸ್.ಪಿ. ಅಕ್ಷಯ್ ಮಚಿಂದ್ರ ಹಾಕೆ ಐ.ಪಿ.ಎಸ್ ರವರ ಮಾರ್ಗದರ್ಶನದಲ್ಲಿ ಮಣಿಪಾಲ ಪಿಐ ದೇವರಾಜ್ ಟಿ.ವಿ ನೇತೃತ್ವದ ವಿಶೇಷ ತಂಡ ಡ್ರಗ್ಸ್ ವಿರುದ್ಧದ ಕಾರ್ಯಾಚರಣೆ ನಡೆಸಿದ್ದು, ಇಬ್ಬರು ಕಾನೂನು ವಿದ್ಯಾರ್ಥಿಗಳನ್ನು ಬಂಧಿಸಲಾಗಿದೆ.
ಮಣಿಪಾಲ ಠಾಣಾ ವ್ಯಾಪ್ತಿಯ ಹೆರ್ಗಾ ಗ್ರಾಮದ ಈಶ್ವರ ನಗರದ ಅಪಾರ್ಟ್ಮೆಂಟ್ ಒಂದರ ಬಳಿ ಸಾರ್ವಜನಿಕ ರಸ್ತೆಯಲ್ಲಿ ನಿಷೇಧಿತ ಮಾದಕ ದ್ರವ್ಯ ಮೆಥಾಂಪೆಟಮೆನ್ ನನ್ನು ಮಾರಾಟ ಮಾಡಲು ಪ್ರಯತ್ನದಲ್ಲಿದ್ದ ಇಬ್ಬರು ಕಾನೂನು ವಿದ್ಯಾರ್ಥಿಗಳನ್ನು ವಶಕ್ಕೆ ಪಡೆಯಲಾಗಿದೆ. ಇವರನ್ನು ವಿಚಾರಣೆ ಮಾಡಲಾಗಿ ಇಬ್ಬರು ವಿದ್ಯಾರ್ಥಿಗಳ ಬಳಿಯಿಂದ 35 ಸಾವಿರ ಮೌಲ್ಯದ 7.3 ಗ್ರಾಂ ಮೆಥಾಂಪೆಟಮೆನ್ (MDMA) ಮಾದಕ ದ್ರವ್ಯ ಪತ್ತೆಯಾಗಿದೆ. ಜೊತೆಗೆ 1.25 ಲಕ್ಷ ಮೌಲ್ಯದ ಡ್ಯೂಕ್ ಬೈಕ್ ಹಾಗೂ 1 ಲಕ್ಷ ಮೌಲ್ಯದ 2 ಮೊಬೈಲ್ ಫೋನ್ಗಳನ್ನು ವಶಪಡಿಸಲಾಗಿದೆ. ಬಂಧಿತರನ್ನು ಕೇರಳ ಮೂಲದ ಉಡುಪಿಯಲ್ಲಿ ಕಾನೂನು ಕಾಲೇಜಿನ ವಿದ್ಯಾರ್ಥಿಗಳಾದ ನಿಭೀಷ್(23), ಅಮಲ್(22) ಎಂದು ಗುರುತಿಸಲಾಗಿದೆ. ಇನ್ನೊಬ್ಬ ಆರೋಪಿ ಅಪ್ಸಿನ್ ತಲೆಮರೆಸಿಕೊಂಡಿದ್ದು, ಆತನ ಪತ್ತೆಗೆ ಬಲೆ ಬೀಸಲಾಗಿದೆ.
ಸದರಿ ಪ್ರಕರಣವನ್ನು ಉಡುಪಿ ಜಿಲ್ಲಾ ಪೊಲೀಸ್ ಅಧೀಕ್ಷಕ ಅಕ್ಷಯ್ ಮಚಿಂದ್ರ ಹಾಕೆ ರವರ ಮಾರ್ಗದರ್ಶನದಲ್ಲಿ ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ಸಿದ್ಧಲಿಂಗಪ್ಪ ಟಿ ಕೆ.ಎಸ್.ಪಿ.ಎಸ್ ರವರು ತಮ್ಮ ತಂಡದ ಸದಸ್ಯರಾದ ದಿನಕರ ಕೆ.ಪಿ, ಡಿ.ವೈ.ಎಸ್.ಪಿ ಉಡುಪಿ , ದೇವರಾಜ ಟಿ.ವಿ ಪೊಲೀಸ್ ನಿರೀಕ್ಷಕರು ಮಣಿಪಾಲ ಠಾಣೆ, ಪಿಎಸ್ಐ ಅಬ್ದುಲ್ ಖಾದರ್ ಠಾಣಾ ಸಿಬ್ಬಂದಿಗಳಾದ ಎ.ಎಸ್.ಐ ನಾಗೇಶ್ ನಾಯಕ್ , ಹೆಚ್.ಸಿ. ಸುಕುಮಾರ್ ಶೆಟ್ಟಿ, ಹೆಚ್.ಸಿ. ಅಬ್ದುಲ್ ರಜಾಕ್, ಹೆಚ್ ಸಿ ಇಮ್ರಾನ್ , ಪಿ.ಸಿ ಚೆನ್ನೇಶ್ , ಪಿಸಿ ಆನಂದಯ್ಯ, ಪಿಸಿ ಅರುಣ್ ಕುಮಾರ್, ಹಾಗೂ ಜಿಲ್ಲಾ ಪೊಲೀಸ್ ಅಧೀಕ್ಷಕರ ಕಛೇರಿಯ ಸಿಡಿಆರ್ ಸೆಕ್ಷನ್ನ ದಿನೇಶ್ ರವರನ್ನು ಒಳಗೊಂಡ ತಂಡ ಕಾರ್ಯಾಚರಣೆಯನ್ನು ಯಶಸ್ವಿಗೊಳಿಸಿದ್ದಾರೆ.