ಮರವಂತೆ, ಜೂ 16 (DaijiworldNews/MS): ಬಿಪರ್ ಜಾಯ್ ಚಂಡಮಾರುತದ ಆರ್ಭಟದ ಪರಿಣಾಮ ಮರವಂತೆಯಲ್ಲಿ ಕಡಲ್ಕೊರೆತ ರೌದ್ರಾವತಾರ ತಾಳಿದೆ. ಭಾರೀ ಗಾತ್ರದ ಅಲೆಗಳು ದಡಕ್ಕೆ ಅಪ್ಪಳಿಸುತ್ತಿದ್ದು ಈಗಾಗಲೇ ಕಡಲಕೊರೆತ ತಡೆಗೆ ಹಾಕಿದ ಕಲ್ಲುಗಳು ಸಮುದ್ರ ಪಾಲಾಗಿದ್ದು, ಅಲೆಗಳು ಮತ್ತೆ ಮುಂದೊತ್ತಿ ಬರುತ್ತಿದ್ದು ಮರವಂತೆಯ ಕರಾವಳಿ ಸಂಪರ್ಕ ರಸ್ತೆ ಕೊಚ್ಚಿ ಹೋಗುವ ಆತಂಕ ಎದುರಾಗಿದೆ.
ಕಳೆದ ಒಂದು ವಾರದಿಂದ ಕಡಲ ಕೊರತೆ ಕಾಣಿಸಿಕೊಂಡಿದ್ದು ನಿನ್ನೆಯಿಂದ ಅದು ಭೀಕರ ರೂಪ ತಾಳಿದೆ. ಕಳೆದ ವರ್ಷ ಕಡಲ್ಕೊರೆತದಿಂದ ಸಾಕಷ್ಟು ಹಾನಿಯಾದ ಹೊರ ಬಂದರು ಸಮೀಪದಲ್ಲಿಯೇ ಮತ್ತೆ ಅಪಾಯ ಎದುರಾಗಿದೆ. ರಕ್ಕಸ ಗಾತ್ರದ ಅಲೆಗಳು ದಡಕ್ಕೆ ಅಪ್ಪಳಿಸುತ್ತಿದ್ದು ವಿದ್ಯುತ್ ಕಂಬ, ತೆಂಗಿನ ಮರಗಳು ಸೇರಿದಂತೆ ಸಮುದ್ರ ತೀರ ಪ್ರದೇಶದಲ್ಲಿ ತಡೆಗೆ ಅಡ್ಡ ಹಾಕಿದ ಕಲ್ಲುಗಳು ಕೊಚ್ಚಿಕೊಂಡು ಹೋಗುತ್ತಿದೆ. ಕರಾವಳಿ ರಸ್ತೆ ಬಿರುಕು ಕಾಣಿಸಿಕೊಂಡಿದ್ದು ಆತಂಕ ಹುಟ್ಟಿಸಿದೆ.
ಮರವಂತೆ ಭಾಗದ ಮೀನುಗಾರರು ತೀವ್ರ ಆತಂಕದಲ್ಲಿದ್ದು ನಿರಂತರವಾಗಿ ಸಂಭವಿಸುತ್ತಿರುವ ಕಡಲ್ಕೊರೆತದಿಂದ ಅವರು ಕಂಗೆಟ್ಟು ಹೋಗಿದ್ದಾರೆ. ಇನ್ನೂ ಕೂಡಾ ಕಡಲ್ಕೊರೆತ ಸಮಸ್ಯೆಗೆ ಶಾಶ್ವತ ಪರಿಹಾರ ಸಿಗದ ಬಗ್ಗೆ ಸರ್ಕಾರ, ಜಿಲ್ಲಾಡಳಿತ ಬಗ್ಗೆ ಆಕ್ರೋಶ ವ್ಯಕ್ತ ಪಡಿಸುತ್ತಾರೆ. ಕಳೆದ ಒಂದು ವಾರದಿಂದ ಕಡಲ್ಕೊರೆತ ಕಾಣಿಸಿಕೊಂಡಿದ್ದರೂ ತುರ್ತು ಪರಿಹಾರಕ್ಕೆ ಮುಂದಾಗದ ಜಿಲ್ಲಾಡಳಿತದ ಬಗ್ಗೆ ವ್ಯಾಪಕ ಅಸಮಾಧಾನ ವ್ಯಕ್ತ ಪಡಿಸುತ್ತಿದ್ದಾರೆ.
ಬೆಂಗಳೂರು ಪ್ರವಾಸದಲ್ಲಿದ್ದ ಸ್ಥಳೀಯ ಶಾಸಕ ಗುರುರಾಜ ಗಂಟಿಹೊಳೆ ಅವರು ಪ್ರವಾಸ ರದ್ದು ಪಡಿಸಿ ಶುಕ್ರವಾರ ಬೆಳಗ್ಗೆ ಮರವಂತೆಗೆ ಆಗಮಿಸಿ, ಸ್ಥಳದಲ್ಲಿ ಮೊಕ್ಕಂ ಹೂಡಿ, ಮೀನುಗಾರರಿಗೆ ಧೈರ್ಯ ತುಂಬುತ್ತಿದ್ದಾರೆ. ಸಂಬಂಧಪಟ್ಟ ಸಚಿವರು, ಅಧಿಕಾರಿಗಳನ್ನು ಸಂಪರ್ಕಿಸಿ ತಕ್ಷಣ ತುರ್ತು ಪರಿಹಾರಕ್ಕೆ ಕೂಡಲೆ ಸ್ಪಂದಿಸುವಂತೆ ದೂರವಾಣಿ ಮೂಲಕ ಮನವಿ ಮಾಡಿಕೊಳ್ಳುತ್ತಿದ್ದಾರೆ.
ಈ ಸಂದರ್ಭದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಶಾಸಕ ಗುರುರಾಜ ಗಂಟಿಹೊಳೆ ಅವರು, ಉಡುಪಿ ಜಿಲ್ಲೆಯ ಕರಾವಳಿ ಭಾಗದಲ್ಲಿ ಅತಿ ಹೆಚ್ಚು ಕಡಲ್ಕೊರೆತ ಸಮಸ್ಯೆ ಎದುರಿಸುವುದು ಬೈಂದೂರು ಕ್ಷೇತ್ರ. ಮರವಂತೆಯಲ್ಲಿ ನಿರಂತರವಾಗಿ ಕಡಲ್ಕೊರೆತ ಸಂಭವಿಸುತ್ತಿದೆ. ಈ ಬಗ್ಗೆ ಜಿಲ್ಲಧಿಕಾರಿಗಳು, ಅಧಿಕಾರಿಗಳನ್ನು ಪ್ರಶ್ನಿಸಿದರೆ ಅವರು ತಮ್ಮ ಅಸಹಾಯಕತೆ ತೊಡಿಕೊಳ್ಳುತ್ತಿದ್ದಾರೆ. ಈಗಾಗಲೇ ಸರ್ಕಾರದ ಮೀನುಗಾರಿಕಾ ಸಚಿವರನ್ನು ಭೇಟಿ ಮಾಡಿ ಸಮಸ್ಯೆಯನ್ನು ಅವರ ಗಮನಕ್ಕೆ ತಂದಿದ್ದೇನೆ. ಅವರು ಸ್ಥಳಕ್ಕೆ ಇಂದು ಭೇಟಿ ಕೊಡುವ ಸಾಧ್ಯತೆ ಇದೆ. ಸರ್ಕಾರ ತಕ್ಷಣ ಮರವಂತೆಯಲ್ಲಿ ಆಗುತ್ತಿರುವ ಕಡಲ್ಕೊರೆತ ಸಮಸ್ಯೆಗೆ ಸ್ಪಂದಿಸಬೇಕು. ಶಾಶ್ವತವಾಗಿ ಪರಿಹಾರ ದೊರಕಿಸಿಕೊಡಬೇಕು. ಈಗ ತಕ್ಷಣಕ್ಕೆ ಆಗುವ ಹಾನಿಯನ್ನು ತಪ್ಪಿಸುವ ನಿಟ್ಟಿನಲ್ಲಿ ತುರ್ತು ಪರಿಹಾರಕ್ಕೆ ಕ್ರಮಕ್ಕೆ ಸೂಚಿಸಬೇಕು ಎಂದರು.
ಮರವಂತೆಯ ಮೀನುಗಾರರ ಸೇವಾ ಸಮಿತಿಯ ಅಧ್ಯಕ್ಷ ವಾಸುದೇವ ಖಾರ್ವಿ ಮಾತನಾಡಿ, ಮರವಂತೆಯಲ್ಲಿ ಕಡಲ್ಕೊರೆತ ಸಮಸ್ಯೆ ಇಂದು ನಿನ್ನೆಯದಲ್ಲ. ಕಳೆದ ವರ್ಷ ತೌಕ್ತೆ ಚಂಡಮಾರುತ ಪರಿಣಾಮ 100 ಮೀಟರ್ ಪ್ರದೇಶ ಕೊಚ್ಚಿಕೊಂಡು ಹೋಗಿದೆ. ದೋಣಿ ಶೆಡ್ಗಳು ನೀರುಪಾಲಾಗಿದೆ. ನೂರಾರು ತೆಂಗಿನಮರಗಳು ಸಮುದ್ರಪಾಲಾಗಿದೆ. ಆಗ ನಾವೇ ಸ್ಥಳೀಯವಾಗಿ ಮರಳು ಚೀಲಗಳನ್ನು ಇಟ್ಟು ಕೊರೆತ ತಡೆಗೆ ಪ್ರಯತ್ನ ಮಾಡಿದ್ದೇವು. ಕಡಲ್ಕೊರೆತ ತೀವ್ರ ಸಂಭವಿಸಿದಾಗ ಸರ್ಕಾರವೇ ಇಲ್ಲಿಗೆ ಬರುತ್ತದೆ. ಮುಖ್ಯಮಂತ್ರಿಗಳು ಬಂದಿದ್ದಾರೆ. ಸಂಬಂಧಪಟ್ಟ ಎಲ್ಲಾ ಸಚಿವರು ಬಂದಿದ್ದಾರೆ. ಆದರೆ ಇನ್ನೂ ಕೂಡಾ ಶಾಶ್ವತ ಪರಿಹಾರ ಮಾಡುವ ಕೆಲಸ ಮಾತ್ರ ಯಾರೂ ಮಾಡಿಲ್ಲ ಎಂದರು.
ಈ ಸಂದರ್ಭದಲ್ಲಿ ಬಿಜೆಪಿ ಮಂಡಲದ ಅಧ್ಯಕ್ಷ ದೀಪಕ್ ಕುಮಾರ್ ಶೆಟ್ಟಿ, ತಾ.ಪಂ. ಮಾಜಿ ಅಧ್ಯಕ್ಷ ಮಹೇಂದ್ರ ಪೂಜಾರಿ, ಸುರೇಶ್ ಶೆಟ್ಟಿ ಬಿ.ಎಸ್., ಅಶೋಕ್ ಶೆಟ್ಟಿ, ಅನಿತಾ ಆರ್.ಕೆ., ಮೀನುಗಾರರ ಮುಖಂಡರು ಉಪಸ್ಥಿತರಿದ್ದರು