ಮೂಡುಬಿದಿರೆ, ಜೂ. 13 (DaijiworldNews/SM): ಮೂಡುಬಿದಿರೆಯಿಂದ ಕಾರ್ಕಳದತ್ತ ಸಾಗುವ ರಾಷ್ಟ್ರೀಯ ಹೆದ್ದಾರಿ 169ರ ಅಂಚಿನಲ್ಲಿ ಬೆಳುವಾಯಿ ಪೇಟೆಯಲ್ಲಿ ವಿದ್ಯುತ್ ಪರಿವರ್ತಕವೊಂದು ಮಂಗಳವಾರ ಅಪರಾಹ್ನ ಒಂದು ಗಂಟೆಯ ವೇಳೆಗೆ ದಿಢೀರ್ ಕುಸಿದು ಬಿದ್ದು ಆತಂಕಕ್ಕೆ ಕಾರಣವಾಯಿತು.
ಬೆಳುವಾಯಿಯ ಬ್ಲೋಸಂ ಆಂಗ್ಲ ಮಾಧ್ಯಮ ಶಾಲೆಯ ಆವರಣದ ಬಳಿಯ ರಸ್ತೆಯ ಪಕ್ಕದಲ್ಲೇ ಇದ್ದ ಈ ವಿದ್ಯುತ್ ಪರಿವರ್ತಕ ಕಂಬಗಳ ಸಹಿತ ಧರೆಗುರುಳಿದರೂ ಘಟನಾ ಸ್ಥಳದಲ್ಲಿ ಆ ಹೊತ್ತಿನಲ್ಲಿ ಯಾರೂ ಇರದ ಕಾರಣ ಭಾರೀ ದುರಂತವೊಂದು ತಪ್ಪಿದಂತಾಗಿದೆ.
ಈ ಭಾಗದಲ್ಲಿ ಹೈವೇ ವಿಸ್ತರಣೆ ಕಾರ್ಯ ನಡೆಯುತ್ತಿದ್ದು ಕೆಲವೇ ದಿನಗಳ ಹಿಂದೆ ರೋಡ್ ಮಾರ್ಜಿನ್ ಕಾರಣಕ್ಕೆ ಈ ವಿದ್ಯುತ್ ಪರಿವರ್ತಕವನ್ನು ಅವರ ಮುತುವರ್ಜಿಯಲ್ಲೇ ಈಗಿರುವ ಸ್ಥಳಕ್ಕೆ ಬದಲಾಯಿಸಲಾಗಿತ್ತು. ಆದರೆ ತರಾತುರಿಯ ಈ ಕಾಮಗಾರಿಯಲ್ಲಿ ಕಂಬಗಳನ್ನು ಸರಿಯಾಗಿ ಆಳವಾದ ಗುಂಡಿಯಲ್ಲಿ ಭದ್ರಪಡಿಸದಿರುವುದು, ಕಳೆದ ಎರಡು ದಿನಗಳಿಂದ ಬೆಳುವಾಯಿ ಪರಿಸರದಲ್ಲಿ ಮಳೆ ಸುರಿದಿರುವುದರಿಂದ ಈ ವಿದ್ಯುತ್ ಪರಿವರ್ತಕದ ಬುಡ ಶಿಥಿಲವಾದಂತಾಗಿ ಈ ಬೆಳವಣಿಗೆಗೆ ಕಾರಣ ಎನ್ನಲಾಗಿದೆ.
ಘಟನಾ ಸ್ಥಳಕ್ಕೆ ಹೈವೇ ಕಾಮಗಾರಿಯವರು, ಮೆಸ್ಕಾಂನವರು ಆಗಮಿಸಿ ಅಗತ್ಯ ಮುಂಜಾಗರೂಕತಾ ಕ್ರಮಗಳನ್ನು ಕೈಗೊಂಡಿದ್ದಾರೆ. ಆದರೆ ವಿದ್ಯುತ್ ಪರಿವರ್ತಕ ಮತ್ತೆ ಅಳವಡಿಸುವ ಕೆಲಸ ಬಾಕಿಯಾಗಿದ್ದು ಬ್ಲೋಸಂ ಶಾಲೆ ಹಾಗೂ ಹತ್ತಿರದ ಎರಡು ಮನೆಗಳಿಗೆ ವಿದ್ಯುತ್ ಸಂಪರ್ಕ ಕಡಿತಗೊಂಡಿದೆ ಎಂದು ಶಾಲಾ ಸಂಚಾಲಕ ಸೈಮನ್ ಮಸ್ಕರೇನಸ್ ತಿಳಿಸಿದ್ದಾರೆ.