ಮಂಗಳೂರು, ಜೂ 13 (DaijiworldNews/MS): ತಾಲೂಕಿನ ಅತಿಕಾರಿಬೆಟ್ಟು ಗ್ರಾಮದ ಕಕ್ವೆ ಎಂಬಲ್ಲಿ ಜೂಜಾಟದ ಆರೋಪದಲ್ಲಿ 13 ಮಂದಿ ಆರೋಪಿಗಳನ್ನು ಮುಲ್ಕಿ ಪೊಲೀಸರು ಸೋಮವಾರ ಬಂಧಿಸಿದ್ದಾರೆ.
ಸಾರ್ವಜನಿಕ ಸ್ಥಳದಲ್ಲಿ ಜೂಜಾಟ ನಡೆಯುತ್ತಿದೆ ಎಂಬ ಖಚಿತ ಮಾಹಿತಿಯಂತೆ ಸೋಮವಾರ ಸಂಜೆ ಸುಮಾರು 5-10 ಗಂಟೆಗೆ ಮಂಗಳೂರು ಉತ್ತರ ಉಪ ವಿಭಾಗದ ಸಹಾಯಕ ಪೊಲೀಸ್ ಆಯುಕ್ತರ ಮಾರ್ಗದರ್ಶನದಂತೆ ಮುಲ್ಕಿ ಪೊಲೀಸ್ ಠಾಣೆಯ ಪೊಲೀಸ್ ನಿರೀಕ್ಷಕರಾದ ವಿಧ್ಯಾಧರ್ ಡಿ ಬಾಯ್ಕರಿಕ ಮತ್ತು ಪಿಎಸ್ಐ ವಿನಾಯಕ ತೊರಗಲ್ ನೇತೃತ್ವದಲ್ಲಿ ಪೊಲೀಸರು ದಾಳಿ ನಡೆಸಿದರು ಎನ್ನಲಾಗಿದೆ.
ಆರೋಪಿಗಳನ್ನು ಬಂಧಿಸಿದ ಪೊಲೀಸರು ಜೂಜಾಟಕ್ಕೆ ಉಪಯೋಗಿಸಿದ ನಗದು ಹಣ 1,17,310 ರೂಪಾಯಿ, ಇತರ ಸೊತ್ತುಗಳನ್ನು ವಶಪಡಿಸಿಕೊಂಡಿದ್ದಾರೆ. ಈ ಸಂಬಂಧ ಮುಲ್ಕಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.