ಮಂಗಳೂರು, ಜೂ 12 (DaijiworldNews/SM): ಆಶಾ ಕಾರ್ಯಕರ್ತೆಯರು ನಿತ್ಯದ ಜನ ಸೇವಕರು. ಜನ ಸಾಮಾನ್ಯರ ಮನೆ ಬಾಗಿಲಿಗೆ ತೆರಳಿ ಸರಕಾರ ನೀಡಿದ ಜವಾಬ್ದಾರಿಯನ್ನು ಅಚ್ಚುಕಟ್ಟಾಗಿ ನಿಭಾಯಿಸುವವರು. ಜನಸಾಮಾನ್ಯರ ಪ್ರೀತಿಗೆ ಪಾತ್ರರಾಗಿದ್ದಾರೆ. ಆದರೆ, ಜನರ ಮುಂದೆ ನಗುಮುಖ ಬೀರುವ ಆಶಾಕಾರ್ಯಕರ್ತೆಯರು ತಮ್ಮೊಳಗೆ ಅನೇಕ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಆರೋಗ್ಯ ಸೇರಿದಂತೆ ಬಹಳಷ್ಟು ಸರ್ವೇ ಕಾರ್ಯ ಆಶಾಕಾರ್ಯಕರ್ತೆಯರ ಹೆಗಲ ಮೇಲಿದೆ. ಆದರೆ ಈ ಕಾರ್ಯವನ್ನು ನಿಭಾಯಿಸಲು ಬೇಕಾದ ಸರಿಯಾದ ವ್ಯವಸ್ಥೆಯಿಲ್ಲ. ಜೊತೆಗೆ ಸರಿಯಾದ ವೇತನವಿಲ್ಲ. ಸರಕಾರದ ಮೇಲೆ ಸರಕಾರಗಳು ಬರುತ್ತಲೇ ಇರುತ್ತದೆ. ಆದರೆ ಆಶಾಕಾರ್ಯಕರ್ತೆಯರ ಬವಣೆಗೆ ಕೊನೆಯೆಂಬುದಿಲ್ಲ. ಇದೇ ಕಾರಣಕ್ಕೆ ಇಂದು ಬೀದಿಗಿಳಿದು ಆಶಾ ಕಾರ್ಯಕರ್ತೆಯರು ಪ್ರತಿಭಟನೆ ನಡೆಸಿದ್ದಾರೆ.
ಸರ್ವೇ ಕಾರ್ಯಕ್ಕೆ ಮನೆಮನೆಗೆ ಅಲೆದಾಡಬೇಕು. ನಗರ ಪ್ರದೇಶಗಳಲ್ಲಿ ಕೆಲವೊಂದು ಮನೆಗಳಲ್ಲಿ ಸರಿಯಾಗಿ ಪ್ರತಿಕ್ರಿಯೆ ಸಿಗೋಲ್ಲ. ಆದರೂ ಸರ್ವೇ ಕಾರ್ಯ ಚಾಚೂ ತಪ್ಪದೆ ಮಾಡಬೇಕು. ಬಿಸಿಲು - ಮಳೆಯೆನ್ನದೆ ಅಲೆದಾಡಬೇಕು. ಮಳೆಗಾಲದಲ್ಲಿ ಡೆಂಗ್ಯು-ಮಲೇರಿಯಾ-ಫ್ಲೂ ಎಂದು ಜನರಿಗೆ ಜಾಗೃತಿ ಮೂಡಿಸಬೇಕು. ಆದರೂ ಇವರ ಕೆಲಸಕ್ಕೆ ಸರಿಯಾದ ವೇತನವಿಲ್ಲ. ಇದುವೇ ಆಶಾಕ್ಕನವರಿಗೆ ಅಸಮಾಧಾನಕ್ಕೆ ಕಾರಣವಾಗಿದೆ. ಆರೋಗ್ಯ ಹಾಗೂ ಕುಟುಂಬ ಕಲ್ಯಾಣ ಇಲಾಖೆಯ ನೂತನ ಸಚಿವ ದಿನೇಶ್ ಗುಂಡೂರಾವ್ ಅವರು ಮಂಗಳೂರು ಭೇಟಿ ವೇಳೆ ತಮ್ಮ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಮನವಿ ಮಾಡಿದ್ದಾರೆ.
ಅಲ್ಲದೆ ದ.ಕ.ಜಿಲ್ಲಾ ಆರೋಗ್ಯಾಧಿಕಾರಿಯವರಲ್ಲೂ ತಮ್ಮ ಸಂಕಷ್ಟಗಳನ್ನು ತೋಡಿಕೊಂಡಿದ್ದಾರೆ. ನಾವು ಕೆಲಸ ಮಾಡಲ್ಲವೆಂದು ಹೇಳಿಲ್ಲ. ಆದರೆ ಕಾಲಾವಕಾಶ ಕೊಡದೆ ಮೇಲಿಂದ ಮೇಲೆ ಸರ್ವೇ ಕಾರ್ಯಗಳನ್ನು ಕೊಟ್ಟಲ್ಲಿ ನಮಗೆ ಕೆಲಸ ಮಾಡಲು ಕಷ್ಟವಾಗುತ್ತದೆ. ನಮ್ಮದೆ ಸ್ವಂತ ಮೊಬೈಲ್ ನಲ್ಲಿ ಸರ್ವೇ ಕಾರ್ಯ ನಡೆಸೋದು ತೊಂದರೆಯಾಗುತ್ತದೆ. ನಮ್ಮ ಕೆಲಸವೇ ಬೇರೆ ಈಗ ನಮಗೆ ಒತ್ತಡ ಹಾಕುತ್ತಿರುದೇ ಬೇರೆ ಕೆಲಸಕ್ಕೆ. ಇದರಿಂದ ನಾವು ಮಾನಸಿಕ ಒತ್ತಡಕ್ಕೊಳಗಾಗಿದ್ದೇವೆ ಎಂದು ಆಶಾಕಾರ್ಯಕರ್ತೆಯರು ಅಳಲು ತೋಡಿಕೊಳ್ಳುತ್ತಿದ್ದಾರೆ. ಈ ಎಲ್ಲಾ ಸಮಸ್ಯೆಗಳನ್ನು ಬಗೆಹರಿಸುವ ಬಗ್ಗೆ ಸಚಿವರು ಸೇರಿದಂತೆ ಜಿಲ್ಲಾ ಆರೋಗ್ಯಾಧಿಕಾರಿಯೂ ಭರವಸೆ ನೀಡಿದ್ದಾರೆ.