ಕುಂದಾಪುರ, ಜೂ 12 (DaijiworldNews/HR): ನಿನ್ನೆ ಕುಂದಾಪುರದಲ್ಲಿ ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆ ಯೋಜನೆಗಳಲ್ಲಿ ಒಂದಾದ ಮಹಿಳೆಯರಿಗೆ ಸರ್ಕಾರಿ ಬಸ್ಸುಗಳಲ್ಲಿ ಉಚಿತ ಪ್ರಯಾಣ “ಶಕ್ತಿ” ಯೋಜನೆಯನ್ನು ಅಧಿಕಾರಿಗಳು ಚಾಲನೆಗೊಳಿಸಿದ್ದಾರೆ. ಆದರೆ ಸಂಬಂಧಪಟ್ಟ ಯಾವೊಬ್ಬ ಜನಪ್ರತಿನಿಧಿಯೂ ಈ ಕಾರ್ಯಕ್ರಮದಲ್ಲಿ ಭಾಗವಹಿಸದೇ ಗೈರಾಗಿದ್ದು ಹಲವು ಕುತೂಹಲಗಳಿಗೆ ಕಾರಣವಾಗಿದೆ.
ಕುಂದಾಪುರ ತಾಲೂಕು ಒಂದು ಪುರಸಭೆ ಹಾಗೂ ಇತರ ಗ್ರಾಮ ಪಂಚಾಯತ್ ಗಳನ್ನು ಹೊಂದಿದೆ. ತಾಲೂಕು ಪಂಚಾಯತ್ ಕೂಡಾ ಇದೆ. ಆದರೆ ಶಕ್ತಿ ಯೋಜನೆ ಲೋಕಾರ್ಪಣೆ ಸಂದರ್ಭ ಯಾವೊಬ್ಬ ಜನಪ್ರತಿನಿಧಿಯೂ ಭಾಗವಹಿಸಿಲ್ಲ.
ಮೇಲ್ನೋಟಕ್ಕೆ ಕುಂದಾಪುರ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಶಾಸಕರಿದ್ದಾರೆ. ತಾಲೂಕು ಪಂಚಾಯತೂ ಬಿಜೆಪಿಯೇ. ಪುರಸಭೆಯೂ ಬಿಜೆಪಿ ಹಿಡಿತದಲ್ಲಿಯೇ ಇದೆ. ಹಾಗಂತ ಕಾಂಗ್ರೆಸ್ ನ ಜನಪ್ರತಿನಿಧಿಗಳೂ ಇದ್ದಾರೆ. ಆದರೆ ಕಾಂಗ್ರೆಸ್ ನೇತೃತ್ವದ ರಾಜ್ಯ ಸರ್ಕಾರದ ಶಕ್ತಿ ಯೋಜನೆಯ ಲೋಕಾರ್ಪಣೆಗೆ ಕಾಂಗ್ರೆಸ್ ಪಕ್ಷದಿಂದ ಆಯ್ಕೆಯಾದ ಜನಪ್ರತಿನಿಧಿಗಳೂ ಭಾಗವಹಿಸಿರಲಿಲ್ಲ ಎನ್ನುವುದು ವಿಶೇಷ.
ಹೌದು. ಇದಕ್ಕೆ ಕಾರಣ ತರಾತುರಿಯಲ್ಲಿ ನಡೆದ ಲೋಕಾರ್ಪಣೆ ಕಾರ್ಯಕ್ರಮ ಎನ್ನುವುದು ಮೇಲ್ನೋಟಕ್ಕೆ ಕಾಣಿಸುತ್ತಿದೆ. ಕುಂದಾಪುರದ ಪುರಸಭೆಯ ಯಾವೊಬ್ಬ ಸದಸ್ಯರಿಗೂ ಕಾರ್ಯಕ್ರಮದ ಆಮಂತ್ರಣ ಸಿಕ್ಕಿಲ್ಲ ಎನ್ನುವ ಮಾತುಗಳು ಕೇಳಿ ಬರುತ್ತಿದೆ. ತಾಲೂಕು ಪಂಚಾಯತ್ ಸದಸ್ಯರಿಗೂ, ಜಿಲ್ಲಾ ಪಂಚಾಯತ್ ಸದಸ್ಯರಿಗೂ ಆಮಂತ್ರಣ ಪತ್ರ ತಲುಪಿಲ್ಲ ಎನ್ನುವ ಆರೋಪ ಕೇಳಿ ಬಂದಿದೆ. ಈಬಗ್ಗೆ ಕೆಲವು ಜನಪ್ರತಿನಿಧಿಗಳು ಅಧಿಕಾರಿಗಳ ನಡೆಗೆ ಆಕ್ರೋಶ ಹೊರಹಾಕಿದ್ದಾರೆ. ಇತ್ತ ಎಲ್ಲರಿಗೂ ಆಮಂತ್ರಣ ಕಳಿಸಿದ್ದೇವೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಇದೆಲ್ಲದರ ನಡುವೆ ಅಧಿಕಾರಿಗಳು ಸರ್ಕಾರದ ಯೋಜನೆಗೆ ನಿನ್ನೆ ಅಧಿಕೃತ ಚಾಲನೆಯನ್ನೂ ನೀಡಿದ್ದಾರೆ.