ಆಲ್ದೂರು, ಏ01(SS): ಹಿಂದುತ್ವವನ್ನೇ ಆಧಾರವಾಗಿಟ್ಟುಕೊಂಡು ಈ ಕ್ಷೇತ್ರವನ್ನು ಪ್ರತಿನಿಧಿಸುತ್ತಿರುವ ಶೋಭಾ ಅವರಿಗೆ ಜನರೇ ತಕ್ಕ ಪಾಠ ಕಲಿಸುತ್ತಾರೆ ಎಂದು ಉಡುಪಿ - ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಮೈತ್ರಿಕೂಟದ ಅಭ್ಯರ್ಥಿ ಪ್ರಮೋದ್ ಮಧ್ವರಾಜ್ ಹೇಳಿದ್ದಾರೆ.
ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು, ಪ್ರಧಾನಿ ಮೋದಿಯವರ ಮುಖವಾಡ ಧರಿಸಿ ಬೆಜೆಪಿ ಅಭ್ಯರ್ಥಿ ಮತ ಯಾಚಿಸುತ್ತಿದ್ದಾರೆ. ಈ ಹಿಂದೆ ಎಂಪಿಯಾಗಿದ್ದಾಗ ಕ್ಷೇತ್ರಕ್ಕೆ ಅವರು ನೀಡಿರುವ ಕೊಡುಗೆ ಏನು.. ? ಹಿಂದುತ್ವವನ್ನೇ ಆಧಾರವಾಗಿಟ್ಟುಕೊಂಡು ಈ ಕ್ಷೇತ್ರವನ್ನು ಪ್ರತಿನಿಧಿಸುತ್ತಿರುವ ಶೋಭಾ ಅವರಿಗೆ ಜನರೇ ತಕ್ಕ ಪಾಠ ಕಲಿಸುತ್ತಾರೆ ಎಂದು ಹೇಳಿದರು.
ಕಾಂಗ್ರೆಸ್ ಪಕ್ಷದಿಂದ ನಾನು ಟಿಕೆಟ್ ಆಕಾಂಕ್ಷಿಯಾಗಿದ್ದೆ. ಆದರೆ ಜೆಡಿಎಸ್ ಪಕ್ಷದವರು ನನ್ನನ್ನು ಅಭ್ಯರ್ಥಿಯನ್ನಾಗಿ ಘೋಷಿಸಿದ್ದು ಅವರ ಉದಾರತೆಗೆ ನಾನು ಆಭಾರಿಯಾಗಿದ್ದೇನೆ. ಈ ಕ್ಷೇತ್ರವನ್ನು ಗೆಲ್ಲಬೇಕು ಎಂದು ಪಕ್ಷ ಸಂಕಲ್ಪ ಮಾಡಿದೆ. ಹೀಗಾಗಿ ಅತಿ ಹೆಚ್ಚು ಮತಗಳ ಅಂತರದಿಂದ ಗೆದ್ದು ಬರುತ್ತೇನೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಉಡುಪಿ ಕ್ಷೇತ್ರಕ್ಕೆ 2 ಸಾವಿರ ಕೋಟಿ ಅನುದಾನ ತಂದು ಅಭಿವೃದ್ಧಿ ಕಾರ್ಯಗಳನ್ನು ಕೈಗೊಂಡಿದ್ದೆ. ಈ ಹಿಂದೆ ಶಾಸಕನಾಗಿ, ಮಂತ್ರಿಯಾಗಿ ಒಳ್ಳೆಯ ಕೆಲಸ ಮಾಡಿದ್ದೇನೆ. ಅಭಿವೃದ್ಧಿ ಮಾಡಿದಾಗಲೇ ನನ್ನನ್ನು ಜನ ಸೋಲಿಸಿದ್ದಾರೆ. ಇನ್ನು ಯಾವುದೇ ಅಭಿವೃದ್ಧಿ ಕೆಲಸ ಮಾಡದ ಶೋಭಾ ಕಂರದ್ಲಾಜೆಯವರನ್ನು ಮತದಾರರು ಗೆಲ್ಲಿಸುತ್ತಾರೆಯೇ ಎಂದು ಪ್ರಶ್ನಿಸಿದರು.
ಗೋ ಬ್ಯಾಕ್ ಶೋಭಾ ಎಂಬ ಅಭಿಯಾನವನ್ನು ಅವರ ಪಕ್ಷದವರೇ ಪ್ರಾರಂಭಿಸಿದ್ದಾರೆ. ಹೀಗಾಗಿ ಇದು ನಮ್ಮ ಗೆಲುವಿಗೆ ಅನುಕೂಲವಾಗಲಿದೆ. ಪ್ರತಿ ಕಾರ್ಯಕರ್ತರು ತಾವೆ ಚುನಾವಣೆ ಎದುರಿಸುತ್ತಿರುವಂತೆ, ಒಮ್ಮತದಿಂದ ಮೈತ್ರಿ ಪಕ್ಷಗಳು ಒಟ್ಟಾಗಿ ಕೆಲಸ ಮಾಡಿ ನನ್ನನ್ನು ಗೆಲ್ಲಿಸಿ. ಖಂಡಿತ ನಾನು ಸೇವಕನಾಗಿ ನಿಮ್ಮ ಕೆಲಸ ಮಾಡುತ್ತೇನೆ ಎಂದು ವಿನಂತಿಸಿದ್ದಾರೆ.