ಉಡುಪಿ, ಜೂ. 11 (DaijiworldNews/SM): ತನ್ನ ಅಲ್ಪಾವಧಿಯಲ್ಲಿ ಕಥೊಲಿಕ್ ಸಭಾ ಉಡುಪಿ ಪ್ರದೇಶ ಸಂಘಟನೆ ಚರ್ಚ್ ಮತ್ತು ಸಮಾಜಕ್ಕೆ ಸೇವೆ ನೀಡುವಲ್ಲಿ ರಾಷ್ಟ್ರೀಯ ಮಟ್ಟದಲ್ಲಿ ತನ್ನ ಛಾಪನ್ನು ಮೂಡಿಸಿದೆ ಎಂದು ಉಡುಪಿ ಧರ್ಮಪ್ರಾಂತ್ಯದ ವಿಕಾರ್ ಜನರಲ್ ವಂ. ಮೊನ್ಸಿಂಜ್ಞೊರ್ ಫರ್ಡಿನಾಂಡ್ ಗೊನ್ಸಾಲ್ವಿಸ್ ಹೇಳಿದರು.
ಅವರು ಭಾನುವಾರ ಅಂಬಾಗಿಲು ಕಕ್ಕುಂಜೆಯಲ್ಲಿ ಉಡುಪಿ ಧರ್ಮಪ್ರಾಂತ್ಯದ ಅನುಗ್ರಹ ಪಾಲನಾ ಕೇಂದ್ರದಲ್ಲಿ ನಡೆದ ಕಥೊಲಿಕ್ ಸಭಾ ಉಡುಪಿ ಪ್ರದೇಶ ಇದರ ದಶಮಾನೋತ್ಸವ ಕಾರ್ಯಕ್ರಮ, ಡೆನಿಸ್ ಡಿಸಿಲ್ವಾ ಸ್ಮಾರಕ ಲೇಖನ ಸ್ಪರ್ಧೆಯ ಪುರಸ್ಕಾರ ವಿತರಣೆ ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಿ ಮಾತನಾಡಿದರು.
ಕಥೊಲಿಕ್ ಸಭಾ ತನ್ನ ನಿಸ್ವಾರ್ಥ ಸೇವೆಯಿಂದ ಇಂದು ರಾಷ್ಟ್ರಮಟ್ಟದಲ್ಲಿ ತನ್ನದೇ ಆದ ಹೆಸರನ್ನು ಗಳಿಸುವಲ್ಲಿ ಶಕ್ತವಾಗಿರುವ ಶ್ರೀಸಾಮಾನ್ಯರ ಏಕೈಕ ಸಂಘಟನೆಯಾಗಿದೆ. ಈ ಸೇವೆ ಇಲ್ಲಿಗೆ ನಿಲ್ಲಸದೆ ಇನ್ನಷ್ಟು ಉತ್ತಮ ಸೇವಾಕೈಂಕರ್ಯವನ್ನು ಮುಂದುವರೆಸಬೇಕು ಎಂದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಸಮಾಜ ಸೇವಕರು ಹಾಗೂ ಉದ್ಯಮಿಗಳಾದ ಫಿಲಿಪ್ ಡಿ’ಕೊಸ್ತಾ ಕೋಣಿ ಬಸ್ರೂರು ದಶಮಾನೋತ್ಸವ ಸ್ಮಾರಕ ಸಂಚಿಕೆ ಅನಾವರಣಗೊಳಿಸಿದರೆ, ಎಐಸಿಯು ರಾಜ್ಯ ಕಾರ್ಯದರ್ಶಿ ಆ್ಯಂಟನಿ ವಿಲ್ಸನ್ 2023-24ನೇ ಸಾಲಿನ ಕಥೊಲಿಕ್ ಸಭಾ ಡೈರಕ್ಟರಿ ಬಿಡುಗಡೆಗೊಳಿಸಿದರು.
ಇದೇ ವೇಳೆ ಹಿರಿಯ ಸಾಹಿತಿ ನಿವೃತ್ತ ಪ್ರಾಂಶುಪಾಲರಾದ ಡಾ|ಜೆರಾಲ್ಡ್ ಪಿಂಟೊ ಅವರು ಬರೆದಿರುವ ಆಮ್ಚೆ ಮ್ಹಾಲ್ಗಡೆ ಸಾಹಿತಿ ಪುಸ್ತಕವನ್ನು ವಿಕಾರ್ ಜನರಲ್ ವಂ. ಮೊನ್ಸಿಂಜ್ಞೊರ್ ಫರ್ಡಿನಾಂಡ್ ಗೊನ್ಸಾಲ್ವಿಸ್ ಬಿಡುಗಡೆ ಮಾಡಿದರು.
ಕಾರ್ಯಕ್ರಮದಲ್ಲಿ ಮಾಜಿ ಅಧ್ಯಕ್ಷರು, ಕಾರ್ಯದರ್ಶಿಗಳನ್ನು ಹಾಗೂ ಜಿಲ್ಲಾ ಲಯನ್ ಗವರ್ನರ್ ಆಗಿ ಆಯ್ಕೆಯಾದ ಡಾ|ನೇರಿ ಕರ್ನೆಲಿಯೊ, ರೋಟರಿ ಜಿಲ್ಲಾ ಸಹಾಯಕ ಗವರ್ನರ್ ಆಲ್ವಿನ್ ಕ್ವಾಡ್ರಸ್ ಇವರಿಗೆ ಸನ್ಮಾನಿಸಿ ಗೌರವಿಸಲಾಯಿತು. ಆಲ್ಫೋನ್ಸ್ ಡಿಕೋಸ್ತಾ ಸಂಚಾಲಕತ್ವದಲ್ಲಿ ನಡೆದ ಡೆನಿಸ್ ಡಿಸಿಲ್ವಾ ಸ್ಮಾರಕ ಲೇಖನ ಸ್ಪರ್ಧೆಯ ಬಹುಮಾನ ವಿತರಣೆ ಮಾಡಲಾಯಿತು.
ಕಥೊಲಿಕ್ ಸಭಾ ಉಡುಪಿ ಪ್ರದೇಶ ಅಧ್ಯಕ್ಷ ಸಂತೋಷ್ ಕರ್ನೆಲಿಯೋ ಅಧ್ಯಕ್ಷತೆ ವಹಿಸಿದ್ದರು. ಕಥೊಲಿಕ್ ಸಭಾ ಮಂಗಳೂರು ಪ್ರದೇಶ ಅಧ್ಯಕ್ಷ ಸ್ಟ್ಯಾನಿ ಲೋಬೊ, ಕಥೊಲಿಕ್ ಸಭಾ ಉಡುಪಿ ಪ್ರದೇಶ ಇದರ ಪ್ರಥಮ ಅಧ್ಯಕ್ಷರಾದ ಎಲ್ ರೊಯ್ ಕಿರಣ್ ಕ್ರಾಸ್ತಾ, ನಿಕಟಪೂರ್ವ ಅಧ್ಯಕ್ಷರಾದ ಮೇರಿ ಡಿಸೋಜಾ, ಕೋಶಾಧಿಕಾರಿ ಜೆರಾಲ್ಡ್ ರೊಡ್ರಿಗಸ್ ಉಪಸ್ಥಿತರಿದ್ದರು.
ದಶಮಾನೋತ್ಸವ ಸಮಿತಿಯ ಸಂಚಾಲಕರಾದ ಆಲ್ವಿನ್ ಕ್ವಾಡ್ರಸ್ ಸ್ವಾಗತಿಸಿ, ಕಾರ್ಯದರ್ಶಿ ಒಲಿವೀಯಾ ಡಿಮೆಲ್ಲೊ ವಂದಿಸಿದರು. ಕ್ಯಾರೊಲಿನ್ ಮಿನೇಜಸ್ ಕಾರ್ಯಕ್ರಮ ನಿರೂಪಿಸಿದರು.