ಬಂಟ್ವಾಳ, ಜೂ. 11 (DaijiworldNews/SM): ಸರ್ಕಾರ ಮಹಿಳಾ ವರ್ಗದ ಹಿತಾಸಕ್ತಿಯನ್ನು ಇರಿಸಿಕೊಂಡು ಶಕ್ತಿ ಯೋಜನೆಯನ್ನು ಜಾರಿಗೊಳಿಸಿದ್ದು, ಮಹಿಳೆಯರು ಇದನ್ನು ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಬಂಟ್ವಾಳ ತಹಶೀಲ್ದಾರ್ ವಿ.ಎಸ್.ಕೂಡಲಗಿ ಹೇಳಿದ್ದಾರೆ.
ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ ಪುತ್ತೂರು ವಿಭಾಗದ ಬಿಸಿರೋಡು ಘಟಕದ ವತಿಯಿಂದ ಭಾನುವಾರ ಮಧ್ಯಾಹ್ನ ಬಿ.ಸಿ.ರೋಡು ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣದಲ್ಲಿ ಕರ್ನಾಟಕ ಸರ್ಕಾರದ ಶಕ್ತಿ ಯೋಜನೆಗೆ ಚಾಲನೆ ನೀಡಿ, ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಬಂಟ್ವಾಳ ಉಪವಿಭಾಗದ ಪೊಲೀಸ್ ಉಪಾಧೀಕ್ಷಕ ಪ್ರತಾಪ್ ಸಿಂಗ್ ಥೋರಟ್ ಮಾತನಾಡಿ, ಶಕ್ತಿ ಯೋಜನೆಯ ಎಲ್ಲಾ ಫಲಾನುಭವಿಗಳಿಗೆ ಅಭಿನಂದನೆ ಸಲ್ಲಿಸಿದರು.
ಮಾಜಿ ಸಾರಿಗೆ ಸಚಿವ ಬಿ.ರಮಾನಾಥ ರೈ ಮಾತನಾಡಿ, ಶಕ್ತಿ ಯೋಜನೆ, ಸರ್ಕಾರದ ಐದು ಗ್ಯಾರಂಟಿಗಳಲ್ಲಿ ಮೊದಲನೆಯದ್ದಾಗಿದ್ದು, ಹಂತ ಹಂತವಾಗಿ ಎಲ್ಲವೂ ಜಾರಿಗೊಳ್ಳಲಿದೆ ಎಂದರು. ಬಂಟ್ವಾಳ ಪುರಸಭಾ ಅಧ್ಯಕ್ಷ ಮಹಮ್ಮದ್ ಶರೀಫ್, ವಿಭಾಗದ ಲೆಕ್ಕಪತ್ರ ಅಧಿಕಾರಿ ಆಶಾಲತಾ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಘಟಕದ ಉಸ್ತುವಾರಿ ಅಧಿಕಾರಿ ದೇವೇಂದ್ರ ಗುಡಿಗಾರ್ ಸ್ವಾಗತಿಸಿದರು. ಘಟಕದ ವ್ಯವಸ್ಥಾಪಕರಾದ ಶ್ರೀಶ ಭಟ್ ಪ್ರಸ್ತಾವನೆಗೈದರು.
ಸಹಾಯಕ ಸಂಚಾರ ಅಧೀಕ್ಷಕ ಗಣೇಶ ಪೈ ವಂದಿಸಿದರು. ಸಹಾಯಕ ವ್ಯವಸ್ಥಾಪಕ ರಮೇಶ್ ಶೆಟ್ಟಿ ಕಾರ್ಯಕ್ರಮ ನಿರ್ವಹಿಸಿದರು.