ಮಂಗಳೂರು, ಏ01(SS): ಕೇಂದ್ರ ಸರಕಾರದ ಆದೇಶದಂತೆ ವಿಜಯ ಬ್ಯಾಂಕ್ ವಿಲೀನವಾಗುವ ದಿನವನ್ನು ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಕರಾಳ ದಿನವನ್ನಾಗಿ ಆಚರಿಸಲು ಕರೆ ನೀಡಿದೆ.
ಈ ಹಿಂದಿನಿಂದಲೂ ಕೇಂದ್ರ ಸರ್ಕಾರದ ಈ ನೀತಿಗೆ ಕರಾವಳಿಯಲ್ಲಿ ವ್ಯಾಪಕ ವಿರೋಧ ವ್ಯಕ್ತವಾಗಿತ್ತು. ವಿಜಯ ಬ್ಯಾಂಕ್ ವಿಲೀನ ಪ್ರಕ್ರಿಯೆಯನ್ನು ಕಾಂಗ್ರೆಸ್ ಪ್ರಬಲವಾಗಿ ವಿರೋಧಿಸಿ ಹಲವಾರು ಪ್ರತಿಭಟನೆಗಳನ್ನು ಕೂಡ ನಡೆಸಿದ್ದರು.
ಆದರೆ, ಕಡಲ ನಗರಿ ಮಂಗಳೂರಿನಲ್ಲಿ ಸ್ಥಾಪನೆಯಾದ ಪ್ರತಿಷ್ಠಿತ ಬ್ಯಾಂಕ್ಗಳಲ್ಲಿ ಒಂದಾದ ವಿಜಯ ಬ್ಯಾಂಕ್ ಹೆಸರು ಇನ್ನು ನೆನಪು ಮಾತ್ರ. ವಿಜಯ ಬ್ಯಾಂಕ್ ಬ್ಯಾಂಕ್ ಆಫ್ ಬರೋಡಾ ಜೊತೆ ವಿಲೀನವಾಗಲಿದೆ.
ಕರಾವಳಿಯಲ್ಲಿ ಸ್ಥಾಪನೆಯಾದ ಪ್ರತಿಷ್ಠಿತ ಬ್ಯಾಂಕ್ಗಳಲ್ಲಿ ಒಂದಾಗಿರುವ ವಿಜಯ ಬ್ಯಾಂಕ್, ಬ್ಯಾಂಕ್ ಬರೋಡಾ ಆಗಿ ನಾಮಕರಣಗೊಳ್ಳಲಿದೆ. ವಿಜಯ ಬ್ಯಾಂಕ್ ದೇನಾ ಬ್ಯಾಂಕ್ ಕೇಂದ್ರ ಸರಕಾರಿ ಸೌಮ್ಯದ ಬ್ಯಾಂಕ್ ಆಫ್ ಬರೋಡಾದಲ್ಲಿ ಶಾಶ್ವತವಾಗಿ ವಿಲೀನವಾಗಲಿದೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಹರೀಶ್ ಕುಮಾರ್, ವಿಜಯ ಬ್ಯಾಂಕ್ ವಿಲೀನ ಪ್ರಕ್ರಿಯೆ ವಿರೋಧಿಸಿ ಬಿಜೆಪಿ ಮತ್ತು ಕೇಂದ್ರ ಸರ್ಕಾರದ ವಿರುದ್ದ ವಾಗ್ದಾಳಿ ನಡೆಸಿದ್ದಾರೆ. ಇದರ ಬಗ್ಗೆ ದಕ್ಷಿಣ ಕನ್ನಡ ಸಂಸದರಾದ ನಳಿನ್ ಮಾತನಾಡುವುದಿಲ್ಲ. ಹೀಗಾಗಿ ಈ ನೀತಿಯ ವಿರುದ್ಧ ಕರಾಳ ದಿನ ಆಚರಿಸುತ್ತೇವೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.