ಉಡುಪಿ, ಜೂ 11 (DaijiworldNews/HR): ರಾಜ್ಯದ ಮಹಿಳೆಯರಿಗೆ ಸರ್ಕಾರಿ ಬಸ್ ಗಳಲ್ಲಿ ಉಚಿತ ಪ್ರಯಾಣಕ್ಕಾಗಿ ಆರಂಭಿಸಿರುವ ರಾಜ್ಯ ಸರಕಾರದ ಶಕ್ತಿ ಯೋಜನೆಗೆ ಜಿಲ್ಲಾ ಉಸ್ತುವಾರಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರು ಉಡುಪಿಯ ಕೆಎಸ್ಆರ್ಟಿಸಿ ಡಾ. ವಿ.ಎಸ್. ಆಚಾರ್ಯ ಬಸ್ ನಿಲ್ದಾಣದಲ್ಲಿ ಚಾಲನೆ ನೀಡಿದ್ದಾರೆ.
ಈ ವೇಳೆ ಮಾತನಾಡಿದ ಅವರು, ಶಕ್ತಿ ಯೋಜನೆ ಮಹಿಳೆಯರ ಸ್ವಾವಲಂಬನೆಗೆ ಹೆಚ್ಚು ಅನುಕೂಲವಾಗಲಿದ್ದು, ವಿದ್ಯಾರ್ಥಿನಿಯರು ಸಹಿತವಾಗಿ ಮಹಿಳೆಯರು ಇದರ ಅನುಕೂಲ ಪಡೆಯಬಹುದು ಎಂದರು.
ಇನ್ನು ರಾಜ್ಯದಲ್ಲಿ 20,000 ಕ್ಕೂ ಅಧಿಕ ಸರ್ಕಾರಿ ಬಸ್ ಗಳಿದ್ದು ಅವುಗಳಲ್ಲಿ 18609 ಬಸ್ ಗಳಲ್ಲಿ ಶಕ್ತಿ ಯೋಜನೆಯಡಿ ಮಹಿಳೆಯರಿಗೆ ಉಚಿತ ಪ್ರಯಾಣಕ್ಕೆ ಅವಕಾಶ ದೊರೆಯಲಿದ್ದು, ರಾಜ್ಯದ ಒಟ್ಟು ಸರ್ಕಾರಿ ಬಸ್ಗಳಲ್ಲಿನ ಶೇ.95 ಬಸ್ ಗಳಲ್ಲಿ ಪ್ರತಿ ದಿನ 41.8 ಲಕ್ಷ ಮಹಿಳೆಯರು ತಮ್ಮ ಪ್ರತಿದಿನದ ದೈನಂದಿನ ದುಡಿಮೆ ಮತ್ತಿತರ ಕಾರ್ಯಗಳಿಗೆ ಬಸ್ಗಳಲ್ಲಿ ಸಂಚರಿಸಲಿದ್ದು, ಈ ಉಚಿತ ಪ್ರಯಾಣವು ಮಹಿಳೆಯರ ಸ್ವಾಭಿಮಾನ ಮತ್ತು ಸ್ವಾವಲಂಬಿ ಜೀವನಕ್ಕೆ ನೆರವಾಗಲಿದೆ. ಈ ಯೋಜನೆಯಿಂದ ಸರ್ಕಾರಕ್ಕೆ ವಾರ್ಷಿಕ 4051 ಕೋಟಿ ರೂ ವೆಚ್ಚವಾಗಲಿದ್ದು, ಮಹಿಳೆಯರು, ವಿದ್ಯಾರ್ಥಿನಿಯರು ಮತ್ತು ಲಿಂಗತ್ವ ಅಲ್ಪ ಸಂಖ್ಯಾತರು ಈ ಯೋಜನೆಯ ಲಾಭ ಪಡೆಯಲಿದ್ದಾರೆ ಎಂದಿದ್ದಾರೆ.
ರಾಜ್ಯ ಸರ್ಕಾರವು ಚುನಾವಣಾ ಅವಧಿಯಲ್ಲಿ ನೀಡಿದ ಉಳಿದ 4 ಗ್ಯಾರಂಟಿಗಳನ್ನು ಹಂತ ಹಂತವಾಗಿ ಈಡೇರಿಸಲಾಗುವುದು ಎಂದ ಸಚಿವರು, ಗೃಹಲಕ್ಷ್ಮೀ ಯೋಜನೆಗೆ ರಾಜ್ಯಾದ್ಯಂತ ಆಗಸ್ಟ್ 15 ರಂದು ಚಾಲನೆ ನೀಡಲಾಗುವುದು. ರಾಜ್ಯದ ಬಿಪಿಎಲ್ ಮತ್ತು ಎಪಿಎಲ್ ನ ಎಲ್ಲಾ ಮಹಿಳೆಯರು ಇದರ ಪ್ರಯೋಜನ ಪಡೆಯಬಹುದಾಗಿದ್ದು, ಈ ಕುರಿತ ಅರ್ಜಿ ನಮೂನೆಯನ್ನು ಇನ್ನು 2 ದಿನಗಳಲ್ಲಿ ಬಿಡುಗಡೆ ಮಾಡಲಾಗುವುದು. ಆನ್ಲೈನ್ ಮೂಲಕ ಅಥವಾ ಸಿಡಿಪಿಓ ಗಳ ಮೂಲಕ ಅಂಗನವಾಡಿ ಶಿಕ್ಷಕರ ಮೂಲಕ ಹಾಗೂ ಗ್ರಾಮ ಒನ್ ಮೂಲಕ ಸಹ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗುವುದು ಎಂದರು.
ಈ ಸಂಧರ್ಭದಲ್ಲಿ ಶಾಸಕ ಯಶ್ ಪಾಲ್ ಸುವರ್ಣ, ಎಂಎಲ್ ಸಿ ಮಂಜುನಾಥ ಭಂಡಾರಿ, ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಕ. ಜಯಪ್ರಕಾಶ್ ಹೆಗ್ಡೆ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಅಶೋಕ್ ಕುಮಾರ್ ಕೊಡವೂರು, ಸರಳಾ ಕಾಂಚನ್, ಜಿಲ್ಲಾಧಿಕಾರಿ ಕೂರ್ಮಾ ರಾವ್, ಜಿ.ಪಂ. ಸಿಇಒ ಪ್ರಸನ್ನ ಎಚ್., ಎಸ್ ಪಿ ಹಾಕೈ ಅಕ್ಷಯ್ ಮಚ್ಚೀಂದ್ರ ಮೊದಲಾದವರು ಉಪಸ್ಥಿತರಿದ್ದರು.