ಬಂಟ್ವಾಳ, ಜೂ 11 (DaijiworldNews/HR): ವಿದ್ಯುತ್ ಶಾಕ್ ಹೊಡೆದು ರಾಷ್ಟ್ರೀಯ ಪಕ್ಷಿಯೊಂದು ಜೀವ ಕಳೆದುಕೊಂಡ ಘಟನೆ ಬಂಟ್ವಾಳದ ಸಜೀಪ ಎಂಬಲ್ಲಿ ನಡೆದಿದೆ.
ಸಜೀಪ ಮುನ್ನೂರು ಗ್ರಾಮದ ಶಾರದ ನಗರ ಎಂಬಲ್ಲಿ ಜೂನ್ 10 ರಂದು ಹೆಚ್.ಟಿ.ವಿದ್ಯುತ್ ಲೈನ್ ಸ್ಪರ್ಶಿಸಿ ನವಿಲು ಮೃತ ಪಟ್ಟಿದೆ.
ವಿದ್ಯುತ್ ಸ್ಪರ್ಶಿಸಿ ನವಿಲು ಮೃತಪಟ್ಟು ರಸ್ತೆಯ ಬದಿಯಲ್ಲಿ ಬಿದ್ದುಕೊಂಡಿರುವ ದೃಶ್ಯವನ್ನು ಕಂಡು ಸ್ಥಳೀಯರು ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದಾರೆ.
ಸ್ಥಳಕ್ಕೆ ಬೇಟಿ ನೀಡಿದ ಅರಣ್ಯ ಇಲಾಖೆಯ ಸಿಬ್ಬಂದಿಗಳು ಮೃತಪಟ್ಟ ನವಿಲನ್ನು ಸರಕಾರದ ಅದೇಶದಂತೆ ಮುಂದಿನ ಕ್ರಮಕ್ಕಾಗಿ ಸ್ಥಳದಿಂದ ವಗ್ಗದ ಅರಣ್ಯಪ್ರದೇಶಕ್ಕೆ ತೆಗೆದುಕೊಂಡು ಹೋಗಿದ್ದಾರೆ.
ಮಾಹಿತಿ ಸಿಕ್ಕಿದ ಕೆಲವೇ ಗಂಟೆಗಳಲ್ಲಿ ಅರಣ್ಯ ಇಲಾಖೆಯ ಸಿಬ್ಬಂದಿಗಳು ಸ್ಥಳಕ್ಕೆ ಬೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ವಿದ್ಯುತ್ ಶಾಕ್ ಹೊಡೆದು ಸಾವನ್ನಪ್ಪಿದ ಘಟನೆ ಬಗ್ಗೆ ಸ್ಪಷ್ಟವಾಗಿದೆ. ಸ್ಥಳೀಯ ವ್ಯಕ್ತಿಯೋರ್ವರು ನವಿಲು ವಿದ್ಯುತ್ ಶಾಕ್ ಹೊಡೆದು ಸಾವನ್ನಪ್ಪಿದನ್ನು ನೋಡಿರುವುದನ್ನು ತಿಳಿಸಿದ್ದಾರೆ. ಹಾಗಾಗಿ ಮೇಲ್ನೋಟಕ್ಕೆ ಇದು ಸತ್ಯವಾಗಿರುವುದರಿಂದ ಮೃತಪಟ್ಟ ನವಿಲನ್ನು ವಗ್ಗದ ಕಡೆಂಜಿಮಲೆ ಗುಡ್ಡದಲ್ಲಿ ಸರಕಾರದ ನಿಯಮದಂತೆ ತಂದು ಹಾಕಲಾಗಿದೆ ಎಂದು ಬಂಟ್ವಾಳ ವಲಯ ಅರಣ್ಯ ಅಧಿಕಾರಿ ರಾಜೇಶ್ ಬಳಿಗಾರ್ ತಿಳಿಸಿದ್ದಾರೆ.