ಉಡುಪಿ, ಏ01(SS): ಪ್ರಧಾನಿ ನರೇಂದ್ರ ಮೋದಿ ಅವರು ನಮ್ಮ ದೇಶದ ಜನರಿಗೆ ಬೇಕಾಗಿ ನೂರಾರು ಜನಪರ ಯೋಜನೆಗಳನ್ನು ಕಾರ್ಯರೂಪಕ್ಕೆ ತಂದಿದ್ದಾರೆ. ಭಾರತದ ಅಭಿವೃದ್ಧಿಯ ವೇಗ ಹೆಚ್ಚಿಸುವ ಮೂಲಕ ಭಾರತವನ್ನು ವಿಶ್ವಗುರು ಮಾಡಲು ಪಣತೊಟ್ಟಿದ್ದಾರೆ ಎಂದು ಉಡುಪಿ - ಚಿಕ್ಕಮಗಳೂರು ಬಿಜೆಪಿ ಅಭ್ಯರ್ಥಿ ಶೋಭಾ ಕರಂದ್ಲಾಜೆ ಹೇಳಿದರು.
ಲೋಕಸಭಾ ಚುನಾವಣೆಯ ಹಿನ್ನಲೆಯಲ್ಲಿ ಉಡುಪಿ ಚಿಕ್ಕಮಗಳೂರು ಬಿಜೆಪಿ ಅಭ್ಯರ್ಥಿ ಶೋಭಾ ಕರಂದ್ಲಾಜೆ ಮತ್ತು ಶಾಸಕ ಕೆ.ರಘುಪತಿ ಭಟ್ ಅವರು ಬ್ರಹ್ಮಾವರ ತಾಲೂಕಿನ ಗ್ರಾಮಾಂತರ ವ್ಯಾಪ್ತಿಯಲ್ಲಿ ಕಾರ್ಯಕರ್ತರನ್ನು ಭೇಟಿ ನೀಡಿ ಚುನಾವಣಾ ಪ್ರಚಾರ ನಡೆಸಿದ್ದಾರೆ.
ಈ ಪ್ರಚಾರದ ವೇಳೆ ಮಾತನಾಡಿದ ಶಾಸಕ ಕೆ. ರಘುಪತಿ ಭಟ್, ನರೇಂದ್ರ ಮೋದಿ ಅವರನ್ನು ಮತ್ತೊಮ್ಮೆ ಪ್ರಧಾನಮಂತ್ರಿ ಮಾಡಲು ನಮ್ಮ ಜಿಲ್ಲೆಯ ಅಭ್ಯರ್ಥಿಯನ್ನು ನಾವು ಬಹುಮತದಿಂದ ಗೆಲ್ಲಿಸಬೇಕು. ನರೇಂದ್ರ ಮೋದಿಯವರ ಗೆಲುವಿಗೆ ನಾವೆಲ್ಲರೂ ಒಟ್ಟಾಗಿ ಶ್ರಮಿಸಬೇಕು ಎಂದು ಕರೆ ನೀಡಿದರು.
ಜಿಲ್ಲಾ ಪಂಚಾಯಿತಿ ಸದಸ್ಯ ಪ್ರತಾಪ್ ಹೆಗ್ಡೆ ಮಾರಾಳಿ, ಉಡುಪಿ ಗ್ರಾಮಾಂತರ ಮಹಿಳಾ ಮೋರ್ಚಾ ಅಧ್ಯಕ್ಷೆ ವೀಣಾ ನಾಯ್ಕ, ಉಡುಪಿ ತಾಲ್ಲೂಕು ಪಂಚಾಯಿತಿ ಅಧ್ಯಕ್ಷೆ ನಳಿನಿ ಪ್ರದೀಪ್ ರಾವ್, ಕೊಕ್ಕರ್ಣೆ ಶಕ್ತಿಕೇಂದ್ರ ಅಧ್ಯಕ್ಷ ವಸಂತ ಸೇರ್ವೆಗಾರ್, ಹರಿಮಕ್ಕಿ ರತ್ನಾಕರ್ ಶೆಟ್ಟಿ ಮಾಜಿ ಗ್ರಾಮಾಂತರ ಅಧ್ಯಕ್ಷ ರು ಪಕ್ಷ ದ ಪ್ರಮುಖರು ಮತ್ತು ಕಾರ್ಯಕರ್ತರು ಉಪಸ್ಥಿತರಿದ್ದರು.