ಉಪ್ಪಿನಂಗಡಿ, ಜೂ 10 (DaijiworldNews/HR): ವಾರದ ಹಿಂದೆ ನಡೆದ ರಸ್ತೆ ಅಪಘಾತದಲ್ಲಿ ಗಂಭೀರ ಗಾಯಗೊಂಡಿದ್ದ ಬೈಕ್ ಸವಾರ ಅನೀಸ್ (27) ಚಿಕಿತ್ಸೆ ಫಲಕಾರಿಯಾಗದೆ ನಿನ್ನೆ ತಡರಾತ್ರಿ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.
ರಾಷ್ಟ್ರೀಯ ಹೆದ್ದಾರಿ 75ರಲ್ಲಿ ಉಪ್ಪಿನಂಗಡಿ ಬಳಿಯ ಪಂಜಳ ಎಂಬಲ್ಲಿ ಟಿಪ್ಪರ್ ಮತ್ತು ಬೈಕ್ ನಡುವೆ ಅಪಘಾತ ಸಂಭವಿಸಿತ್ತು.
ಬೈಕ್ ನಲ್ಲಿದ್ದ ಅನೀಸ್ ಮತ್ತು ಅವರ ಮಾವ ಹಮೀದ್ ಎಂಬವರು ಗಾಯಗೊಂಡಿದ್ದು, ಗಂಭೀರ ಗಾಯಗೊಂಡು ಕೋಮಾಗೆ ಜಾರಿದ್ದ ಅನೀಸ್ ರನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೇ ಚಿಕಿತ್ಸೆ ಫಲಕಾರಿಯಾಗದೇ ನಿನ್ನೆ ರಾತ್ರಿ ಅನೀಸ್ ನಿಧನರಾದರು.
ಜೂ.2 ರಂದು ಮಹಮ್ಮದ್ ಅನೀಸ್ ಎಂಬವರು ನಂಬ್ರದ ಮೋಟಾರ್ ಸೈಕಲಿನಲ್ಲಿ ಹಮೀದ್ ರನ್ನು ಸಹಸವಾರರನ್ನಾಗಿ ಕುಳ್ಳಿರಿಸಿಕೊಂಡು ಮಂಗಳೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ-75 ರಲ್ಲಿ ನೀರಕಟ್ಟೆ ಕಡೆಯಿಂದ ಬಿ ಸಿ ರೋಡ್ ಕಡೆಗೆ ಚಲಾಯಿಸಿಕೊಂಡು ಹೋಗಿ, ಪುತ್ತೂರು ತಾಲೂಕು ಉಪ್ಪಿನಂಗಡಿ ಗ್ರಾಮದ ಪಂಜಳ ಎಂಬಲ್ಲಿ ಅಜಾಗರೂಕತೆ ಹಾಗೂ ನಿರ್ಲಕ್ಷ್ಯತನದಿಂದ ಬೇರೆ ಮೋಟಾರ್ ಸೈಕಲ್ ಸವಾರನಿಗೆ ನಮಸ್ಕರಿಸುತ್ತಾ ಹೆದ್ದಾರಿಯ ಪೂರ್ತಿ ರಾಂಗ್ ಸೈಡಿಗೆ ಚಲಾಯಿಸಿದ ಪರಿಣಾಮ, ಮಹಮ್ಮದ್ ಆಶಿಫ್ ರವರು ಚಾಲಕರಾಗಿ ಬಿ ಸಿ ರೋಡ್ ಕಡೆಯಿಂದ ನೀರಕಟ್ಟೆ ಕಡೆಗೆ ಚಲಾಯಿಸಿಕೊಂಡು ಹೋಗುತ್ತಿದ್ದ ಲಾರಿಯ ಮುಂಭಾಗದ ಬಲಬದಿಗೆ ಅಪಘಾತವಾಗಿ, ರಸ್ತೆಗೆ ಬಿದ್ದು ಮೋಟಾರ್ ಸೈಕಲ್ ಸವಾರ ಮಹಮ್ಮದ್ ಅನೀಸ್ ರವರಿಗೆ ಮುಖಕ್ಕೆ ಮತ್ತು ಕಾಲಿಗೆ ಗಾಯ, ಸಹಸವಾರ ಹಮೀದ್ ರವರಿಗೆ ಕಾಲಿಗೆ ಗಾಯವಾಗಿದ್ದು, ಚಿಕಿತ್ಸೆ ಬಗ್ಗೆ ಹಮೀದ್ ರನ್ನು ಪುತ್ತೂರು ಮಹಾವೀರ ಆಸ್ಪತ್ರೆಗೆ ದಾಖಲಿಸಿದ್ದು, ಸವಾರ ಮಹಮ್ಮದ್ ಅನೀಸ್ ರನ್ನು ಮಂಗಳೂರು ಆಸ್ಪತ್ರೆಯಲ್ಲಿ ಚಿಕಿತ್ಸೆಗಾಗಿ ದಾಖಲಿಸಿರುತ್ತಾರೆ.
ಗಾಯಗೊಂಡಿದ್ದ ಗಾಯಾಳು ಪುತ್ತೂರು ತಾಲೂಕು ವಳಾಲು, ಬಜತ್ತೂರು, ಬೆದ್ರೋಡಿ ವಿದ್ಯಾನಗರ ನಿವಾಸಿ ಮಹಮ್ಮದ್ ಅನೀಸ್ ಜೂ.9 ರಂದು ಮೃತಪಟ್ಟಿರುವುದರಿಂದ ಈ ಪ್ರಕರಣದ ಕಾನೂನಿನ ಕಲಂ ಅನ್ನು 279, 337, 304(ಎ) ಐಪಿಸಿ ಯಂತೆ ಪರಿವರ್ತಿಸಿಕೊಂಡು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.