ಕಾಸರಗೋಡು, ಜೂ 09 (DaijiworldNews/HR): ಕೇಂದ್ರ ಮತ್ತು ರಾಜ್ಯ ಸರಕಾರಗಳ ಒಗ್ಗಟ್ಟಿನ ಪ್ರಯತ್ನದಿಂದ ಮೀನುಗಾರಿಕಾ ವಲಯಕ್ಕೆ ಇನ್ನಷ್ಟು ಉತ್ತೇಜನ ನೀಡಲಾಗುವುದು ಎಂದು ಕೇಂದ್ರ ಮೀನುಗಾರಿಕೆ, ಪಶುಸಂಗೋಪನೆ ಮತ್ತು ಹೈನುಗಾರಿಕೆ ಅಭಿವೃದ್ಧಿ ಸಚಿವ ಪರಶೋತ್ತಮ ರೂಪಾಲಾ ಹೇಳಿದರು.
ಕಾಸರಗೋಡು ಪುರಭವನದಲ್ಲಿ ಸಾಗರ ಪರಿಕ್ರಮ ಯಾತ್ರೆ 7ನೇ ಹಂತದ ಫಲಾನುಭವಿ ಸಂಗಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಮೀನುಗಾರಿಕೆ ಕ್ಷೇತ್ರಕ್ಕೆ ಸಂಬಂಧಿಸಿದ ಕೇರಳದ ಬೇಡಿಕೆಗಳು ಮತ್ತು ಪ್ರಸ್ತಾವನೆಗಳನ್ನು ಸಹಾನುಭೂತಿಯಿಂದ ಪರಿಗಣಿಸಲಾಗುವುದು ಎಂದು ಸಚಿವರು ಹೇಳಿದರು. ಮೀನುಗಾರಿಕಾ ಕ್ಷೇತ್ರದ ಸವಾಲುಗಳು, ಸಮಸ್ಯೆಗಳು ಮತ್ತು ಪರಿಹಾರಗಳ ಕುರಿತು ಚರ್ಚಿಸಲು ವಿವಿಧ ರಾಜ್ಯಗಳ ಮೀನುಗಾರಿಕೆ ಸಚಿವರೊಂದಿಗೆ ಮಹಾಬಲಿ ಪುರಂನಲ್ಲಿ ಎರಡು ದಿನಗಳ ಚರ್ಚೆ ನಡೆಸಲಾಗುವುದು ಎಂದು ಸಚಿವರು ಹೇಳಿದರು. ಮೂರು ದಿನಗಳಲ್ಲಿ ಕೇರಳದ ಮೀನುಗಾರಿಕಾ ಪ್ರದೇಶಗಳಿಗೆ ಭೇಟಿ ನೀಡಿ ಸಮಸ್ಯೆಗಳ ಬಗ್ಗೆ ತಿಳುವಳಿಕೆ ನೀಡಲಾಗುವುದು. ಅದರಂತೆ ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ಕ್ರಮಕೈಗೊಳ್ಳಲಾಗುವುದು ಎಂದು ಸಚಿವರು ತಿಳಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಕೇಂದ್ರ ರಾಜ್ಯ ಸಚಿವ ಡಾ. ಎಲ್ ಮುರುಗನ್ ಹೇಳಿದರು. ಕೇಂದ್ರ ಸರ್ಕಾರದ ಕನಸಿನ ಯೋಜನೆಯಾಗಿ ಎಲ್ಲ ಆಧುನಿಕ ಸೌಲಭ್ಯಗಳೊಂದಿಗೆ ಮಂಜೂರಾಗಿರುವ ಐದು ಬಂದರುಗಳಲ್ಲಿ ಒಂದು ಕೇರಳದ ಕೊಚ್ಚಿ ಒಳಗೊಂಡಿದೆ ಎಂದರು. ಭಾರತದ ಕರಾವಳಿ ವಲಯ ಪೂರ್ಣಗೊಳ್ಳಲು ಇನ್ನೂ 4000 ಕಿ.ಮೀ ಸಾಗಬೇಕಿದ್ದು, ಮೀನು ರಫ್ತಿನಲ್ಲಿ ಮುಂಚೂಣಿಗೆ ಬರಲು ಸಮುದ್ರದ ಮಕ್ಕಳೇ ಸಹಕಾರಿಯಾಗಿದ್ದು, ಅವರ ಹಿತವೇ ಮುಖ್ಯ ಎಂದರು.
ಸಾಗರ ಪರಿಕ್ರಮ ಯಾತ್ರೆಗೂ ಮುನ್ನ 47 ಕ್ಷೇತ್ರ ಗಳಲ್ಲಿ ಮೀನುಗಾರಿಕಾ ಇಲಾಖೆ ಕರಾವಳಿ ಜನರ ಸಮಸ್ಯೆಗಳ ಅಧ್ಯಯನಕ್ಕೆ ಕರಾವಳಿ ಸಭೆ ನಡೆಸಿದ್ದು, ಮೀನುಗಾರರು ಹಾಗೂ ಸಂಘಟನೆ ಪ್ರತಿನಿಧಿಗಳು ಸಮಸ್ಯೆಗಳ ಕುರಿತು ಚರ್ಚಿಸಿ ಪರಿಹಾರ ಕಂಡುಕೊಳ್ಳುತ್ತಿದ್ದಾರೆ ಎಂದು ಕೇರಳ ಮೀನುಗಾರಿಕಾ ಸಚಿವ ಸಜಿ ಚೆರಿಯನ್ ಹೇಳಿದರು.
ಪ್ರಧಾನ ಮಂತ್ರಿ ಮತ್ಸ್ಯ ಸಂಪತ್ ಯೋಜನೆಯಡಿ ಹದಿನಾರು ಲಕ್ಷಕ್ಕೂ ಅಧಿಕ ಮೊತ್ತವನ್ನು ವಿತರಿಸಲಾಗಿದೆ. ಈ ಸಂದರ್ಭದಲ್ಲಿ 14 ಜನರಿಗೆ ಕಿಸಾನ್ ಕ್ರೆಡಿಟ್ ಕಾರ್ಡ್ಗಳನ್ನು ವಿತರಿಸಲಾಯಿತು
ನಂತರ ಕೇಂದ್ರ ಮೀನುಗಾರಿಕೆ, ಪಶುಸಂಗೋಪನೆ ಮತ್ತು ಹೈನುಗಾರಿಕೆ ಅಭಿವೃದ್ಧಿ ಸಚಿವ ಪುಷೋತ್ತಮ್ ರೂಪಾಲಾ ಅವರು ಮೀನುಗಾರರು, ಕರಾವಳಿ ನಿವಾಸಿಗಳು ಮತ್ತು ಇತರ ಪಾಲುದಾರರೊಂದಿಗೆ ಸಂವಾದ ನಡೆಸಿದರು.
ಮೀನುಗಾರಿಕೆ, ಖಾತೆ ಸಚಿವ ಸಜಿ ಚೆರಿಯನ್ ಅಧ್ಯಕ್ಷತೆ ವಹಿಸಿದ್ದರು. ಕೇಂದ್ರ ದ ರಾಜ್ಯ ಸಚಿವ ಡಾ. ಎಲ್. ಮುರುಗನ್, ಸಂಸದ ರಾಜ್ ಮೋಹನ್ ಉಣ್ಣಿತ್ತಾನ್, ಶಾಸಕ ಎನ್. ಎ ನೆಲ್ಲಿಕುನ್ನು ಮುಖ್ಯ ಅತಿಥಿಗಳಾಗಿದ್ದರು. ಜಿಲ್ಲಾ ಪಂಚಾಯತ್ ಅಧ್ಯಕ್ಷ ಪಿ. ಬೇಬಿ ಬಾಲಕೃಷ್ಣನ್, ಜಿಲ್ಲಾಧಿಕಾರಿ ಕೆ. ಇಂಪಾಶೇಖರ್, ಎನ್ಎಫ್ಡಿಬಿ ಸದಸ್ಯ ರಾಧಾಕೃಷ್ಣನ್ ಉಪಸ್ಥಿತರಿದ್ದರು.
ರಾಜಕೀಯ ಪಕ್ಷದ ಮುಖಂಡ ರಾದ ರವೀಶ ತಂತ್ರಿ ಕುಂಟಾರ್, ಮೀನುಗಾರರ ಸಂಘದ ಪ್ರತಿನಿಧಿಗಳಾದ ವಿ.ವಿ.ರಮೇಶನ್, ಕೆ.ಕೆ.ಬಾಬು, ಎಂ.ಆರ್.ಶರತ್, ಮತ್ತಿತರರು ಮಾತನಾಡಿದರು. ಜನಪ್ರತಿನಿಧಿಗಳು, ರಾಜಕೀಯ, ಸಾಮಾಜಿಕ, ಸಾಂಸ್ಕೃತಿಕ ಮುಖಂಡರು ಸಮಾರಂಭದಲ್ಲಿ ಪಾಲ್ಗೊಂಡಿದ್ದರು.
ಇಲಾಖಾ ಮುಖ್ಯ ಕಾರ್ಯನಿರ್ವಾಹಕ ಡಾ. ಸಿ ಸುವರ್ಣ ಸ್ವಾಗತಿಸಿ, ಮೀನುಗಾರಿಕೆ ಪ್ರಾದೇಶಿಕ ನಿರ್ದೇಶಕ ಎನ್.ಎಸ್.ಶ್ರೀಲು ವಂದಿಸಿದರು.