ಮಂಗಳೂರು, ಜೂ 08 (DaijiworldNews/SM): ಮಳೆಯಿಲ್ಲದೆ ಕರಾವಳಿ ಜನ ಕಂಗಾಲಾಗಿದ್ದಾರೆ. ಎಲ್ಲೆಲ್ಲೂ ಬಿಸಿಲ ಬೇಗೆಯಿಂದಾಗಿ ಧರೆ ಕುದಿಯುತ್ತಿದೆ. ಇದರ ನೇರ ಪರಿಣಾಮ ನೀರಿನ ಅಭಾವ. ಕರಾವಳಿ ಜೀವ ನದಿಗಳೆಲ್ಲವೂ ಬರಿದಾಗಿದ್ದು, ನೀರಿಗಾಗಿ ಹಾಹಾಕಾರ ಜೋರಾಗಿದೆ. ಇದೀಗ ಜಿಲ್ಲೆಯ ಪುರಾಣ ಪ್ರಸಿದ್ಧ ತೀರ್ಥ ಕ್ಷೇತ್ರಕ್ಕೆ ಜಲ ಸಂಕಷ್ಟ ಎದುರಾಗಿದೆ. ಮಂಗಳೂರು ನಗರದ ಹಿರ ವಲಯದಲ್ಲಿರುವ ಕಟೀಲು ದುರ್ಗಾಪರಮೇಶ್ವರಿ ದೇವಸ್ಥಾನಕ್ಕೆ ನೀರಿನ ಅಭಾವ ಎದುರಾಗಿದೆ.
ಕ್ಷೇತ್ರಕ್ಕೆ ತಾಗಿಕೊಂಡೇ ನಿತ್ಯ ಹರಿದ್ವರ್ಣದಂತೆ ಹರಿಯುವ ನಂದಿನ ನದಿಯ ಒಡಲು ಬರಿದಾಗಿದೆ. ಮಳೆಯಾಗದ ಹಿನ್ನಲೆ ನಂದಿನಿ ನದಿ ಬತ್ತಿಹೋಗಿದೆ. ದಿನನಿತ್ಯ ಸಾವಿರಾರು ಭಕ್ತಾದಿಗಳು ಪವಿತ್ರ ಕ್ಷೇತ್ರಕ್ಕೆ ವಿವಿಧ ಹರಕೆಗಳನ್ನು ಹೊತ್ತುಕೊಂಡು ಬರುತ್ತಿದ್ದು, ಭಕ್ತರಿಗೆ ಅನ್ನ ಸಂತರ್ಪಣೆ ವ್ಯವಸ್ಥೆ ಇದೆ. ಅದರೆ, ಇದಕ್ಕೂ ನೀರಿನ ಕೊರತೆ ಎದುರಾಗಿದೆ. ಈ ನಡುವೆ ಶ್ರೀ ದುರ್ಗಾ ಪರಮೇಶ್ವರಿ ಶಾಲೆಗೂ ನೀರಿನ ಅಭಾವ ಎದುರಾದ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕಾ ಕ್ರಮ ಎಂಬಂತೆ ಅರ್ಧದಿನ ರಜೆ ಘೋಷಣೆ ಮಾಡಲಾಗಿದೆ.
ಕರಾವಳಿ ಭಾಗದಲ್ಲಿ ಕಟೀಲು ಕ್ಷೇತ್ರ ತನ್ನದೇ ಕಾರಣಿಕವನ್ನು ಹೊಂದಿದೆ. ಹಸಿದ ಹೊಟ್ಟೆಯಿಂದ ಬರುವ ಭಕ್ತಾಧಿಗಳಿಗೆ ಅನ್ನದಾನ ಸೇವೆ ನಿತ್ಯ ನಿರಂತವಾಗಿ ನಡೆಯುತ್ತಿದೆ. ಕ್ಷೇತ್ರದ ಬಾಗಿಲಲ್ಲೇ ನಂದಿನಿ ನದಿ ಹರಿಯುವ ಕಾರಣದಿಂದಾಗಿ ನೀರಿನ ಅಭಾವವೆಂಬುವುದು ಕ್ಷೇತ್ರಕ್ಕಿಲ್ಲ. ಸರಿಸುಮಾರು ೩೦ ವರ್ಷಗಳ ಬಳಿಕ ಕ್ಷೇತ್ರದಲ್ಲಿ ಜಲಕ್ಷಾಮದ ಸಂಕಷ್ಟ ಎದುರಾಗಿದ್ದು, ಕ್ಷೇತ್ರದಲ್ಲಿ ಮಿತವಾಗಿ ನೀರಿನ ಬಳಕೆಯಾಗುತ್ತಿದೆ. ಬೋರ್ ವೆಲ್, ಟ್ಯಾಂಕರ್ ಹಾಗೂ ಕ್ಷೇತ್ರದ ಭಕ್ತಾದಿಗಳ ನೆರವಿನಿಂದ ಅಗತ್ಯ ಬಳಕೆಗಾಗಿ ನೀರನ್ನು ಕ್ರೋಢಿಕರಿಸಲಾಗುತ್ತಿದೆ. ಕ್ಷೇತ್ರಕ್ಕೆ ಭೇಟಿ ನೀಡುವ ಭಕ್ತಾಧಿಗಳಿಗೆ ನೀರಿನ ಸಮಸ್ಯೆಯಾಗದಂತೆ ಕ್ರಮ ವಹಿಸಲಾಗಿದೆ.
ಮುಂಗಾರು ಮಳೆಯ ಆಗಮನದ ವಿಳಂಬದ ಪರಿಣಾಮ ಜನತೆ ಎದುರಿಸುತ್ತಿದ್ದು, ಕರಾವಳಿಯ ಶಾಲೆ ಕಾಲೇಜು, ಹೋಟೆಲ್ ಗಳಿಗೂ ನೀರಿನ ಸಮಸ್ಯೆಯಾಗಿದೆ. ಕಟೀಲು ಕ್ಷೇತ್ರದಲ್ಲೇ ನೀರಿನ ಅಭಾವ ತಲೆದೋರಿರುವುದರಿಂದ ವರುಣಾಗಮನಕ್ಕೆ ಭಕ್ತರು ದುರ್ಗಾ ಪರಮೇಶ್ವರಿಯ ಮೊರೆ ಹೋಗಿದ್ದಾರೆ.