ಕಾಸರಗೋಡು, ಜೂ 01 (DaijiworldNews/HR): ಮಂಜೇಶ್ವರ ಚುನಾವಣಾ ಭ್ರಷ್ಟಾಚಾರ ಪ್ರಕರಣದ ವಿಚಾರಣೆಯು ಜಿಲ್ಲಾ ಪ್ರಧಾನ ಸೆಷನ್ಸ್ ನ್ಯಾಯಾಲಯದಲ್ಲಿ ಆರಂಭವಾಗಿದ್ದು, ಬಿಜೆಪಿ ರಾಜ್ಯಾಧ್ಯಕ್ಷ ಕೆ. ಸುರೇಂದ್ರನ್ ಮತ್ತು ಇತರ ಆರೋಪಿಗಳಿಗೆ ಖುದ್ದು ಹಾಜರಾಗುವಂತೆ ಕೋರ್ಟ್ ನೋಟಿಸ್ ಜಾರಿ ಮಾಡಿದೆ.
ಕೆ. ಸುರೇಂದ್ರನ್
ಕೆ. ಸುರೇಂದ್ರನ್ ಅವರಲ್ಲದೆ ಯುವ ಮೋರ್ಚಾ ಮಾಜಿ ರಾಜ್ಯ ಕೋಶಾಧಿಕಾರಿ ಸುನೀಲ್ ನಾಯ್ಕ್, ಬಿಜೆಪಿ ಮಾಜಿ ಜಿಲ್ಲಾಧ್ಯಕ್ಷ ಕೆ. ಬಾಲಕೃಷ್ಣ ಶೆಟ್ಟಿ, ಬಿಜೆಪಿ ಮುಖಂಡರಾದ ಸುರೇಶ್ ನಾಯ್ಕ್, ಕೆ. ಮಣಿಕಂಠ ರೈ ಮತ್ತು ಲೋಕೇಶ್ ನೋಂಡಾ ಅವರಿಗೆ ನೋಟಿಸ್ ಕಳುಹಿಸಲಾಗಿದೆ.
ಕಳೆದ ತಿಂಗಳು ನ್ಯಾಯಾಲಯದ ಆದೇಶದ ಪ್ರಕಾರ ಸುರೇಂದ್ರನ್ ಮತ್ತು ಅವರ ಸಹ ಆರೋಪಿಗಳು ಹಾಜರಾಗಬೇಕಿತ್ತು, ಆದರೆ ಅವರ ವಕೀಲರು ನ್ಯಾಯಾಲಯವನ್ನು ತಲುಪಿದರು. ಖುದ್ದು ಹಾಜರಾಗುವಂತೆ ಕೋರ್ಟ್ ನೋಟಿಸ್ ಕಳುಹಿಸಿದೆ.
ಇನ್ನು ಮಂಜೇಶ್ವರ ಭ್ರಷ್ಟಾಚಾರ ಪ್ರಕರಣದ ವಿಚಾರಣೆಯನ್ನು ಜಿಲ್ಲಾ ನ್ಯಾಯಾಲಯವು ಆಗಸ್ಟ್ 5 ರಂದು ನಡೆಸಲಿದೆ. ಪ್ರಕರಣದ ತನಿಖೆಯನ್ನು ಪೂರ್ಣಗೊಳಿಸಿದ ನಂತರ ಅಪರಾಧ ವಿಭಾಗವು ಆರೋಪಿಗಳ ವಿರುದ್ಧ ಕಳೆದ ಜನವರಿಯಲ್ಲಿ ಜಿಲ್ಲಾ ಪ್ರಧಾನ ಸೆಷನ್ಸ್ ನ್ಯಾಯಾಲಯಕ್ಕೆ ಚಾರ್ಜ್ ಶೀಟ್ ಸಲ್ಲಿಸಿತ್ತು. ಸುರೇಂದ್ರನ್ ವಿರುದ್ಧ ಜಾಮೀನು ರಹಿತ ಸೆಕ್ಷನ್ಗಳನ್ನು ದಾಖಲಿಸಲಾಗಿದೆ.
ಕಳೆದ ವಿಧಾನಸಭಾ ಚುನಾವಣೆಯಲ್ಲಿ ಮಂಜೇಶ್ವರಂ ಕ್ಷೇತ್ರದ ಬಿಎಸ್ಪಿ ಅಭ್ಯರ್ಥಿ ಕೆ. ಸುಂದರ್ ಗೆ ಎರಡೂವರೆ ಲಕ್ಷ ರೂಪಾಯಿ ಹಾಗೂ ಸ್ಮಾರ್ಟ್ ಫೋನ್ ನೀಡಿ ನಾಮಪತ್ರ ಹಿಂಪಡೆಯುವಂತೆ ಬೆದರಿಸಿದ್ದಾರೆ ಎಂಬುದು ಪ್ರಕರಣ ದಾಖಲಿಸಲಾಗಿತ್ತು. ಕಳೆದ ಜೂನ್ನಲ್ಲಿ ಬಿಜೆಪಿ ನಾಯಕರ ವಿರುದ್ಧ ಪ್ರಕರಣ ದಾಖಲಾಗಿತ್ತು. ಮಂಜೇಶ್ವರದ ಲ್ಲಿ ಎಲ್ಡಿಎಫ್ ಅಭ್ಯರ್ಥಿಯಾಗಿದ್ದ ವಿ.ವಿ ರಮೇಶನ್ ನೀಡಿದ್ದ ದೂರಿನ ಮೇರೆಗೆ ಪೊಲೀಸರು ಆರಂಭದಲ್ಲಿ ಪ್ರಕರಣ ದಾಖಲಿಸಿದ್ದರು. ನಂತರ ಪ್ರಕರಣವನ್ನು ಕ್ರೈಂ ಬ್ರಾಂಚ್ಗೆ ಹಸ್ತಾಂತರಿಸಲಾಗಿತ್ತು. ಸುಂದರ ಸೇರಿದಂತೆ ಸಾಕ್ಷಿಗಳಹೇಳಿಕೆಯನ್ನು ನ್ಯಾಯಾಲಯ ದಾಖಲಿಸಿಕೊಂಡಿತ್ತು.