ಬಂಟ್ವಾಳ, ಜೂ 07 (DaijiworldNews/SM): ವಾಹನದಲ್ಲಿ ಬಂದು ರಸ್ತೆ ಬದಿಯಲ್ಲಿ ತ್ಯಾಜ್ಯ ಎಸೆದವರಿಂದಲೇ, ತ್ಯಾಜ್ಯವನ್ನು ತೆರವುಗೊಳಿಸಿದ ಘಟನೆ ಕೊಳ್ನಾಡು ಗ್ರಾಮದಲ್ಲಿ ನಡೆದಿದೆ.
ಕೊಳ್ನಾಡು ಗ್ರಾಮದ ಕಳೆಂಜಿಮಲೆ ರಕ್ಷಿತಾರಣ್ಯ ಮೂಲಕ ಹಾದು ಹೋಗುವ ಕನ್ಯಾನ ಸಂಪರ್ಕ ರಸ್ತೆ ಕೆಲ ದಿನಗಳಿಂದ ನರಕ ಸದೃಶವಾಗಿತ್ತು. ಪ್ರತಿನಿತ್ಯ ಈ ರಸ್ತೆಯ ಇಕ್ಕೆಲಗಳಲ್ಲಿ ತ್ಯಾಜ್ಯ ಎಸೆಯಲಾಗುತ್ತಿತ್ತು. ಇದರಿಂದ ಕುಡ್ತಮುಗೇರು, ಮಂಕುಡೆ, ಕುದ್ರಿಯ, ಕುಳಾಲು ಪರಿಸರದ ಹಸುಗಳು, ಆಡುಗಳು, ನಾಯಿ-ಬೆಕ್ಕುಗಳೆಲ್ಲಾ ತ್ಯಾಜ್ಯ ತಿಂದು ಮಾರಕ ರೋಗಗಳಿಗೆ ತುತ್ತಾಗುವ ಆತಂಕ ಎದುರಾಗಿತ್ತು.
ತ್ಯಾಜ್ಯ ಎಸೆಯುವ ದುಷ್ಕರ್ಮಿಗಳ ಅಮಾನವೀಯ ಕ್ರಮದಿಂದ ಪ್ರಕೃತಿ ಪ್ರೇಮಿಗಳು ಆಕ್ರೋಶಗೊಂಡಿದ್ದಲ್ಲದೇ ದುಷ್ಕರ್ಮಿಗಳಿಗೆ ತಕ್ಕಪಾಠ ಕಲಿಸಲು ತಯಾರಾಗಿದ್ದರು. ಮಂಗಳವಾರ ಮುಸ್ಸಂಜೆ ಗೂಡ್ಸ್ ಟೆಂಪೋದಲ್ಲಿ ಬಂದ ಇಬ್ಬರು ದುರ್ನಾತ ಬರುತ್ತಿದ್ದ ತ್ಯಾಜ್ಯಗಳ ಮೂಟೆಗಳನ್ನು ರಸ್ತೆ ಬದಿ ಎಸೆದು ಪರಾರಿಯಾಗುತ್ತಿದ್ದುದನ್ನು ಸ್ಥಳೀಯರೊಬ್ಬರು ಮೊಬೈಲ್ ಮೂಲಕ ಚಿತ್ರೀಕರಿಸಿದ್ದರು.
ವೀಡಿಯೋ ಹರಿದಾಡುತ್ತಿದ್ದಂತೆ ತ್ಯಾಜ್ಯ ಎಸೆದ ದುಷ್ಕರ್ಮಿಗಳನ್ನು ಪತ್ತೆ ಹಚ್ಚಿದ ಸ್ಥಳೀಯ ಯುವಕರು ಅರಣ್ಯ ಇಲಾಖೆಗೂ ಮಾಹಿತಿ ನೀಡಿದರು. ಸ್ಥಳೀಯ ಯುವಕರು ತ್ಯಾಜ್ಯ ಎಸೆದವರನ್ನು ಸ್ಥಳಕ್ಕೆ ಕರೆಯಿಸಿ ಅವರಿಂದಲೇ ತ್ಯಾಜ್ಯಗಳ ಮೂಟೆಗಳನ್ನು ಪುನಹ ಟೆಂಪೋ ಗೆ ತುಂಬಿಸಿ ರಕ್ಷಿತಾರಣ್ಯ ಪರಿಸರವನ್ನು ಶುಚಿಗೊಳಿಸಿದ್ದಾರೆ. ಸ್ಥಳೀಯ ಯುವಕರ , ಕಾರ್ಯಾಚರಣೆಗೆ ಅರಣ್ಯ ಸಿಬ್ಬಂದಿಗಳು ಸಾಥ್ ನೀಡಿದ್ದು ಈ ವಿದ್ಯಮಾನ ಸಾರ್ವಜನಿಕರ ಪ್ರಶಂಸೆಗೆ ಪಾತ್ರವಾಗಿದೆ.