ಮಂಗಳೂರು,ಮಾ31(AZM):ನರೇಂದ್ರ ಮೋದಿಯವರು ದೇಶದ ಚೌಕಿದಾರ್ ಎಂದು ಹೇಳುತ್ತಿದ್ದು, ಇವರು ಬಡವರ ಚೌಕಿದಾರ್ ಅಲ್ಲ ಬದಲು ಬಂಡವಾಳ ಶಾಹಿಗಳ ಚೌಕಿದಾರ್ ಎಂದು ಮಾಜಿ ಸಚಿವ ರಮಾನಾಥ ರೈಯವರು ನರೇಂದ್ರ ಮೋದಿಯವರ ವಿರುದ್ಧ ಟೀಕಾ ಪ್ರಹಾರ ನಡೆಸಿದ್ದಾರೆ.
ಇಂದು ಮಂಗಳೂರಿನಲ್ಲಿ ಕಾಂಗ್ರೆಸ್ ಚುನಾವಣಾ ಪ್ರಚಾರ ಕಚೇರಿಯ ಉದ್ಘಾಟನಾ ಸಮಾರಂಭದಲ್ಲಿ ಈ ಕುರಿತು ಅವರು ಮಾತನಾಡಿದರು. ದೇಶದ ಬಡ ಜನರಿಗೆ ಚೌಕಿದಾರನ ಅಗತ್ಯವಿಲ್ಲ. ಮಂಗಳೂರಿನಲ್ಲಿ ಎಲ್ಲೂ ಬಡ ಜನರ ಮನೆಯಲ್ಲಿ ಚೌಕಿದಾರ್ ಇರುವುದಿಲ್ಲ. ಕೇವಲ ಬಂಡವಾಳ ಶಾಹಿ ಶ್ರೀಮಂತರ ಮನೆ ಮುಂದೆ ಇರುತ್ತಾರೆ ಎಂದು ಹೇಳಿದರು.
ಮಂ-ಬೆಂ. ರಾ.ಹೆದ್ದಾರಿ ಕಾಮಗಾರಿ ವಿಳಂಬವಾಗುತ್ತಿದೆ ಎನ್ನುವ ನಳಿನ್ ಕುಮಾರ್ ರವರ ಹೇಳಿಕೆಗೆ ಇದೇ ಸಂದರ್ಭದಲ್ಲಿ ರೈ ತಿರುಗೇಟು ನೀಡಿದ್ದಾರೆ. ರಾಜ್ಯ ಸರ್ಕಾರದ ವೈಫಲ್ಯದ ಕುರಿತು ನಳಿನ್ ಕುಮಾರ್ ಅವರು ಸಾಬೀತುಪಡಿಸಿದ್ದಲ್ಲಿ ತಾನು ರಾಜಕೀಯ ಜೀವನಕ್ಕೆ ನಿವೃತ್ತಿ ಪಡೆದುಕೊಳ್ಳುತ್ತೇನೆ ಎಂದು ಸವಾಲೆಸೆದರು.