ಮಂಗಳೂರು, ಜೂ 06 (DaijiworldNews/MS): ನೈತಿಕ ಪೊಲೀಸ್ ಗಿರಿ ತಡೆಗೆ ಮಂಗಳೂರು ನಗರದಲ್ಲಿ ಆ್ಯಂಟಿ ಕಮ್ಯುನಲ್ ವಿಂಗ್ ಆರಂಭಿಸಲು ಸೂಚನೆ ನೀಡಿದ್ದೇನೆ. ಸಮಾಜದಲ್ಲಿಅಶಾಂತಿ ಸೃಷ್ಠಿಸುವವರ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತದೆ. ಮಂಗಳೂರಿನಲ್ಲಿ ಶಾಂತಿ-ಸಾಮರಸ್ಯವನ್ನು ಕಟ್ಟಲು ವಿದ್ಯಾರ್ಥಿಗಳು ಯುವಕರು ನಮ್ಮ ಜೊತೆ ಕೈ ಜೋಡಿಸಿಬೇಕು ಎಂದು ಗೃಹ ಸಚಿವ ಡಾ. ಜಿ. ಪರಮೇಶ್ವರ್ ಹೇಳಿದರು.
ಮಂಗಳೂರಿನಲ್ಲಿ ಪಶ್ಚಿಮ ವಲಯದ ದ.ಕ., ಉಡುಪಿ, ಉ.ಕ., ಚಿಕ್ಕಮಗಳೂರು, ಉಡುಪಿ ಜಿಲ್ಲೆಗಳ ಪೊಲೀಸ್ ಅಧಿಕಾರಿಗಳ ಸಭೆಯ ಬಳಿಕ ಗೃಹ ಸಚಿವರು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.
ನಾನು ಮಂಗಳೂರಿನಲ್ಲಿ ಎದುರಿಸುತ್ತಿರುವ ಸವಾಲುಗಳು ಮತ್ತು ಸಮಸ್ಯೆಗಳನ್ನು ಪರಿಶೀಲಿಸಿದ್ದೇನೆ. ಈ ಹುದ್ದೆಯನ್ನು ಅಲಂಕರಿಸುವುದು ನನಗೆ ಹೊಸದಲ್ಲ. ಪ್ರಸ್ತುತ ಸಮಾಜದಲ್ಲಿ ಹೊಸ - ಹೊಸ ಸವಾಲುಗಳು ಹುಟ್ಟಿಕೊಂಡಿದ್ದು ಸಮಾಜದಲ್ಲಿ ಸಾಕಷ್ಟು ಬದಲಾವಣೆಗಳಾಗಿವೆ. ಪೊಲೀಸ್ ಇಲಾಖೆಗೂ ಹೊಸ ಸವಾಲುಗಳು ಎದುರಾಗಿವೆ.
ಮಂಗಳೂರಿನ ಜನರು ಒಳ್ಳೆಯವರು ಮತ್ತು ಕಷ್ಟಪಟ್ಟು ದುಡಿಯುವ ಜನರಾಗಿದ್ದಾರೆ. ಇದರ ಹೊರತಾಗಿ ಈ ಪ್ರದೇಶದಲ್ಲಿ ಶಾಂತಿ ಮತ್ತು ಕೋಮು ಸೌಹಾರ್ದತೆಯ ಕೊರತೆಯಿದೆ, ಭಯದ ವಾತಾವರಣ ನಿರ್ಮಾಣವಾಗಿದೆ ಎಂಬಂತಹ ಹಲವಾರು ಸಮಸ್ಯೆಗಳನ್ನುಕೇಳಿ ಬಂದಿದೆ ಎಂದು ತಿಳಿಸಿದರು.
ಪ್ರಣಾಳಿಕೆ ಸಮಿತಿ ಅಧ್ಯಕ್ಷನಾದ ಸಂದರ್ಭದಲ್ಲೂ ಇಪ್ಪತ್ತು ಸಂಸ್ಥೆಗಳ ಮುಖ್ಯಸ್ಥರನ್ನು ಭೇಟಿಯಾಗಿದ್ದೆ.ಆಗ ಇಲ್ಲಿ ಶಾಂತಿ ಕೊಡಿ ಎಂಬ ಮಾತೂ ಹೇಳಿದ್ದಾರೆ. ಜಿಲ್ಲೆಯಲ್ಲಿ ಭಯದ ವಾತಾವರಣ ನಿರ್ಮಾಣವಾಗಿದ್ದು, ಸರಕಾರ ಮತ್ತು ಪೊಲೀಸ್ ಇಲಾಖೆ ಇದನ್ನು ನಿಭಾಯಿಸಬೇಕು ಇಲ್ಲವಾದಲ್ಲಿ ಅಶಾಂತಿ ಇನ್ನೂ ಹೆಚ್ಚಾಗಲಿದೆ ಎಂದು ಹೇಳಿದರು.
ನೈತಿಕ ಪೊಲೀಸ್ ಗಿರಿ ಮಾಡುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಪೊಲೀಸ್ ಇಲಾಖೆಗೆ ಸೂಚಿಸಿದ್ದೇನೆ. ಇಂತಹ ಘಟನೆ ನಡೆದಾಗ ಪ್ರದೇಶ ಮತ್ತು ರಾಜ್ಯಕ್ಕೂ ಕೆಟ್ಟ ಹೆಸರು ಬರುತ್ತದೆ. ನಾವು ನೈತಿಕ ಪೊಲೀಸ್ಗಿರಿಯನ್ನು ಬಿಡುವುದಿಲ್ಲ ಮತ್ತು ಕ್ರಮ ಕೈಗೊಳ್ಳುತ್ತೇವೆ. ನೈತಿಕ ಪೊಲೀಸ್ಗಿರಿ ನಿಯಂತ್ರಣಕ್ಕೆ ಪೊಲೀಸ್ ಆಯುಕ್ತರ ನಿರ್ದೇಶನದಂತೆ ಅಧಿಕಾರಿಗಳನ್ನು ನೇಮಕಮಾಡುತ್ತೇವೆ. ಮೊದಲು ನಾವು ಮಂಗಳೂರು ಪೊಲೀಸ್ ಕಮಿಷನರೇಟ್ನಲ್ಲಿ ಪ್ರಾರಂಭಿಸುತ್ತೇವೆ, ಇದು ಯಶಸ್ವಿಯಾದರೆ ಮುಂದೆ ಬೇರೆ ಕಡೆ ಅಗತ್ಯ ಬಿದ್ದ ಸ್ಥಳಗಳಿಗೂ ವಿಸ್ತರಿಸುತ್ತೇವೆ ಎಂದು ಹೇಳಿದರು.
ಡ್ರಗ್ಸ್ ವಿರುದ್ದ ಕಠಿಣ ನಿಲುವು:
ಸಮಾಜಕ್ಕೆ ಸವಾಲಾಗಿರುವ ಡ್ರಗ್ ಮಾಫಿಯಾ ವಿರುದ್ಧವೂ ಕ್ರಮ ಕೈಗೊಳ್ಳುತ್ತೇವೆ.ಜನರಿಗೆ ಭಯ ಮುಕ್ತ ವಾತಾವರಣ ನಿರ್ಮಿಸಬೇಕಾಗಿದೆ. ಡ್ರಗ್ಸ್ ನಿಯಂತ್ರಣಕ್ಕೆ ಅಭಿಯಾನ ನಡೆಸಲು ಸೂಚಿಸಿದ್ದು, ಆ.15 ರೊಳಗೆ ಡ್ರಗ್ಸ್ ಚಟುವಟಿಕೆ ಹತ್ತಿಕ್ಕಲು ಗಡುವು ನೀಡಿದ್ದೇನೆ ಮಾದಕ ವಸ್ತುಗಳ ಹಾವಳಿ ತಡೆಗೆ ಮತ್ತು ಕ್ರಮ ಕೈಗೊಳ್ಳಲು ಮತ್ತು ಯಾವುದೇ ಮಾದಕ ವಸ್ತು ಲಭ್ಯವಾಗದಂತೆ ನೋಡಿಕೊಳ್ಳಲು ಪೊಲೀಸರಿಗೆ ಆಗಸ್ಟ್ 15 ಗಡುವು ನೀಡಲಾಗಿದ್ದು, ದಂಧೆಕೋರರು, ಗ್ರಾಹಕರ ವಿರುದ್ಧವೂ ಕ್ರಮ ಕೈಗೊಳ್ಳಲಾಗುವುದು. ಡ್ರಗ್ಸ್ ಹಾವಳಿ ತಡೆಯಲು ಪೊಲೀಸ್ ಇಲಾಖೆ ಅಗತ್ಯ ಕ್ರಮ ಕೈಗೊಳ್ಳುತ್ತದೆ ಎಂಬ ನಂಬಿಕೆ ನನಗಿದೆ ಎಂದು ಹೇಳಿದರು.
ಹತ್ಯೆಗೀಡಾದ ಕುಟುಂಬಕ್ಕೆ ಪರಿಹಾರ
ಹತ್ಯೆಗೀಡಾದ ದೀಪಕ್ ರಾವ್, ಫಾಜೀಲ್,ಜಲೀಲ್,ಮಸೂದ್ ಕುಟುಂಬಕ್ಕೆ ಸರ್ಕಾರದಿಂದ ಪರಿಹಾರ ನೀಡಲು ಬೇಕಾದ ವರದಿ ನೀಡಲು ಸೂಚಿಸಿದ್ದೇನೆ. ಆದಷ್ಟು ಶೀಘ್ರದಲ್ಲಿ ಸರ್ಕಾರ ಈ ಕುಟುಂಬಗಳಿಗೆ ಪರಿಹಾರ ನೀಡಲಿದೆ ಎಂದರು.
ಎಡಿಜಿಪಿ ಅಲೋಕ್ ಕುಮಾರ್, ಐಜಿಪಿ ಚಂದ್ರಗುಪ್ತ, ಎಎಸ್ಪಿ ರಿಷ್ಯಂತ್, ಪೊಲೀಸ್ ಕಮಿಷನರ್ ಕುಲದೀಪ್ ಜೈನ್, ಡಿಸಿಪಿ ಅಂಶುಕುಮಾರ್, ಚಿಕ್ಕಮಗಳೂರು ಎಸ್ಪಿ ಉಮಾ ಪ್ರಶಾಂತ್ ಉಪಸ್ಥಿತರಿದ್ದರು.