ಕುಂದಾಪುರ, ಜೂ. 4 (DaijiworldNews/SM): ಇಲ್ಲಿನ ಖಾಸಗೀ ವಸತಿ ಶಾಲೆಯೊಂದರಲ್ಲಿ ಸೋಮವಾರ ಮುಂಜಾನೆ ವಿದ್ಯಾರ್ಥಿನಿಯೊಬ್ಬಳು ಮಹಡಿ ಮೇಲಿಂದ ಬಿದ್ದು ಸಾವನ್ನಪ್ಪಿದ್ದಾಳೆ. ಬೆಂಗಳೂರು ಮೂಲದ ತನ್ವಿ ಎಂಬ 9ನೇ ತರಗತಿ ವಿದ್ಯಾರ್ಥಿನಿ ದುರಂತ ಸಾವನ್ನಪ್ಪಿದವಳು.
ಘಟನೆಯ ವಿವರ - ಬೆಂಗಳೂರು ಮೂಲದ ತನ್ವಿ 9ನೇ ತರಗತಿಯಲ್ಲಿ ಓದುವುದಕ್ಕಾಗಿ ಆಕೆಯ ಪೋಷಕರು ಎಪ್ರಿಲ್ ತಿಂಗಳಿನಲ್ಲಿ ಕುಂದಾಪುರದ ಖಾಸಗಿ ಶಾಲೆಯಲ್ಲಿ ಪ್ರವೇಶ ಪಡೆದಿದ್ದರು. ವಸತಿ ಸಹಿತ ಶಾಲೆಯಾಗಿರುವುದರಿಂದ ಕಳೆದ ಎಪ್ರಿಲ್ನಿಂದ ಆಕೆ ಇಲ್ಲಿಯೇ ಇದ್ದಳು. ಪ್ರತಿದಿನ ಎಲ್ಲರಂತೆ ಚರುಕಾಗಿದ್ದ ತನ್ವಿ ಯೋಗಾಸನದ ಸಮವಸ್ತ್ರದಲ್ಲಿದ್ದವಳು ಸೋಮವಾರ ಬೆಳಿಗ್ಗೆ ಸುಮಾರು 5.45ಕ್ಕೆ ಶಾಲೆಯ ಎರಡನೇ ಮಹಡಿಯ ಕಿಟಕಿಯಿಂದ ಶಾಲಾ ಮೈದಾನಕ್ಕೆ ಬಿದ್ದಿದ್ದಾಳೆ. ಪರಿಣಾಮ ಆಕೆಯ ತಲೆ ನೆಲಕ್ಕೆ ಬಡಿದಿದ್ದು, ಗಂಭೀರ ಗಾಯಗೊಂಡು ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾಳೆ. ಘಟನೆ ಬೆಳಕಿಗೆ ಬರುತ್ತಿದ್ದಂತೆ ಶಾಲಾ ಆಡಳಿತ ಮಂಡಳಿಯು ಬಾಲಕಿಯ ಪೋಷಕರಿಗೆ ಮತ್ತು ಪೊಲೀಸರಿಗೆ ಮಾಹಿತಿ ನೀಡಿ ಕುಂದಾಪುರ ಸರ್ಕಾರಿ ಆಸ್ಪತ್ರೆಗೆ ಸಾಗಿಸಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ಶಾಲೆಯ ಮುಖ್ಯಸ್ಥರು, "ಬೆಳಿಗ್ಗೆ ಯೋಗಾಭ್ಯಾಸದ ಸಂದರ್ಭ ಬಾಲಕಿ ಎರಡನೇ ಮಹಡಿಯ ಕಿಟಕಿಯ ಬಳಿ ಕುಳಿತಿದ್ದವಳು ಆಕಸ್ಮಿಕವಾಗಿ ಕಾಲುಜಾರಿ ಬಿದ್ದಿದ್ದಾಳೆ. ಶಾಲೆಯಲ್ಲಿ ತುಂಬಾ ಚೆನ್ನಾಗಿ ಹೊಂದಿಕೊಂಡಿದ್ದವಳು ತನ್ವಿ. ದುರಂತ ಘಟನೆಯಿಂದ ಆಘಾತವಾಗಿದೆ. ತನ್ವಿ ಪೋಷಕರು ಆಗಮಿಸಿದ್ದು, ಮರಣೋತ್ತರ ಪರೀಕ್ಷೆ ನಡೆದ ಬಳಿಕ ಅವರಿಗೆ ಹಸ್ತಾಂತರಿಸಲಾಗುವುದು" ಎಂದಿದ್ದಾರೆ. ಕುಂದಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.