ಕಾಸರಗೋಡು, ಜೂ 05 (DaijiowrldNews/HR): ಪೈವಳಿಕೆ ಕಳಾಯಿಯ ಪ್ರಭಾಕರ ನೋಂಡ (42) ಕೊಲೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಸಹೋದರ ಸೇರಿದಂತೆ ಮೂವರನ್ನು ಮಂಜೇಶ್ವರ ಠಾಣಾ ಪೊಲೀಸರು ಬಂಧಿಸಿದ್ದಾರೆ.
ಕೃತ್ಯದಲ್ಲಿ ಒಟ್ಟು ಆರು ಮಂದಿ ಶಾಮೀಲಾಗಿದ್ದು, ಮೂವರಿಗಾಗಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಸಹೋದರ ಜಯರಾಮ ನೋಂಡ(39), ಅಟ್ಟೆಗೋಳಿಯ ಖಾಲಿದ್ (42) ಮತ್ತು ಮೊಗ್ರಾಲ್ ಪುತ್ತೂರಿನ ಇಸ್ಮಾಯಿಲ್ (33) ನನ್ನು ಬಂಧಿಸಲಾಗಿದೆ.
ಪುತ್ತೂರಿನಲ್ಲಿ ತಲೆಮರೆಸಿಕೊಂಡಿದ್ದ ಜಯರಾಮ ನೋಂಡನನ್ನು ಬಂಧಿಸಿ ಮಂಜೇಶ್ವರ ಪೊಲೀಸರು ವಿಚಾರಣೆ ನಡೆಸಿದಾಗ ಕೊಲೆಗೆ ಇತರ ಐವರು ನೆರವು ನೀಡಿದ್ದಾಗಿ ಹೇಳಿಕೆ ನೀಡಿದ್ದು, ತನಿಖೆ ನಡೆಸಿದ ಪೊಲೀಸರು ಮೂವರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಶನಿವಾರ ಮುಂಜಾನೆ ಕೊಲೆ ನಡೆದಿತ್ತು. ಮನೆಯ ಶೆಡ್ ನಲ್ಲಿ ಮಲಗಿದ್ದ ಪ್ರಭಾಕರನನ್ನು ಸಹೋದರ ಜಯರಾಮ ಮತ್ತು ಇತರರು ಸೇರಿ ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆಗೈದಿದ್ದರು. ಮೂವರು ಕೃತ್ಯದಲ್ಲಿ ನೇರವಾಗಿ ಶಾಮೀಲಾಗಿದ್ದು, ಉಳಿದವರು ಹೊರಗಡೆ ಕಾವಲು ನಿಂತಿದ್ದರು ಎಂದು ತನಿಖೆ ಯಿಂದ ತಿಳಿದುಬಂದಿದೆ.
ಆಸ್ತಿ ವಿವಾದ ಕೊಲೆಗೆ ಕಾರಣ ಎಂದು ತನಿಖೆಯಿಂದ ಸ್ಪಷ್ಟಗೊಂಡಿದೆ. ಹಲವು ವರ್ಷಗಳಿಂದ ಇಬ್ಬರ ನಡುವೆ ಆಸ್ತಿ ವಿವಾದ ಉಂಟಾಗಿತ್ತು. ಇಬ್ಬರ ನಡುವೆ ಆಗಾಗ ಜಗಳ ನಡೆಯುತ್ತಿತ್ತು ಎನ್ನಲಾಗಿದೆ.
ಇಬ್ಬರು ಕೊಲೆ ಸೇರಿದಂತೆ ಹಲವು ಪ್ರಕರಣಗಳ ಆರೋಪಿಗಳಾಗಿದ್ದು , ಜಯರಾಮ ನೋಂಡಾ ಪೈವಳಿಕೆಯಲ್ಲಿ 10 ವರ್ಷದ ಹಿಂದೆ ನಡೆದ ಬಾಳಿಗೆ ಅಝೀಜ್ ಹಾಗೂ ಪ್ರಭಾಕರ ನೋಂಡ ಏಳು ವರ್ಷದ ಹಿಂದೆ ಕನ್ಯಾನದಲ್ಲಿ ಬಾಯಿಕಟ್ಟೆಯ ಆಸಿಫ್ ಕೊಲೆ ಪ್ರಕರಣದ ಆರೋಪಿಯಾಗಿದ್ದನು.