ಮಂಗಳೂರು, ಜೂ 05 (DaijiowrldNews/HR): ಲೆಕ್ಸಾ ಲೈಟಿಂಗ್ಸ್ ಟೆಕ್ನಾಲಜೀಸ್ ಪ್ರೈವೇಟ್ ಲಿಮಿಟೆಡ್ ಮತ್ತು ಅಶೋಕನಗರ ಲಯನ್ಸ್ ಕ್ಲಬ್ ಆಶ್ರಯದಲ್ಲಿ ಡೈಜಿವರ್ಲ್ಡ್ ವಾಹಿನಿ ಪ್ರಸ್ತುತಪಡಿಸಿದ 'ಕಾಮಿಡಿ ರಾಜೆ 2' ತುಳು ಸ್ಟ್ಯಾಂಡ್-ಅಪ್ ಕಾಮಿಡಿ ಶೋನಲ್ಲಿ ಮನೀಶ್ ಶೆಟ್ಟಿ ಸಿದ್ದಕಟ್ಟೆ ವಿಜೇತರಾಗಿದ್ದಾರೆ.
ಮನೀಶ್ ಶೆಟ್ಟಿ ಸಿದ್ದಕಟ್ಟೆ ಗೆಲುವು ಸಾಧಿಸಿ 50,000 ರೂ. ನಗದು ಪಡೆದುಕೊಂಡಿದ್ದು, ಮಂಗಳೂರಿನ ತನುಷ್ ವಾಮಂಜೂರು ಪ್ರಥಮ ರನ್ನರ್ ಅಪ್, ಉಡುಪಿಯ ಶಶಿರಾಜ್ ಆಚಾರ್ ದ್ವಿತೀಯ ರನ್ನರ್ ಅಪ್ ಪ್ರಶಸ್ತಿ ಪಡೆದಿದ್ದು, ವಿನ್ಯಾಸ್ ವಾಮಂಜೂರು ಮತ್ತು ಪ್ರಮೋದ್ ಕೃಷ್ಣಾಪುರ ನಾಲ್ಕು ಮತ್ತು ಐದನೇ ಸ್ಥಾನ ಪಡೆದಿದ್ದಾರೆ.
ಲೆಕ್ಸಾ ಲೈಟಿಂಗ್ ಟೆಕ್ನಾಲಜೀಸ್ ಪ್ರೈ.ಲಿ.ನ ವ್ಯವಸ್ಥಾಪಕ ನಿರ್ದೇಶಕ ರೊನಾಲ್ಡ್ ಡಿಸೋಜಾ, ಅಶೋಕನಗರ, ಲಯನ್ಸ್ ಕ್ಲಬ್ ಅಧ್ಯಕ್ಷ ವಿಕ್ಟರ್ ಮೊರಾಸ್, ಡೈಜಿವರ್ಲ್ಡ್ನ ಸಂಸ್ಥಾಪಕ ವಾಲ್ಟರ್ ನಂದಳಿಕೆ, ಡೈಜಿವರ್ಲ್ಡ್ನ ಮಾರ್ಕೆಟಿಂಗ್ ಹೆಡ್ ಪ್ರವೀಣ್ ತೌರೊ, ಡೈಜಿವರ್ಲ್ಡ್ನ ಮಾನವ ಸಂಪನ್ಮೂಲ ನಿರ್ದೇಶಕ ರೊನಾಲ್ಡ್ ನಜರೆತ್, ಕಾಮಿಡಿ ರಾಜ್ 2 ಕಾರ್ಯಕ್ರಮದ ತೀರ್ಪುಗಾರರಾಗಿ ಅರ್ಪಿತ್ ಇಂದ್ರವದನ್, ವಿಶೇಷ ತೀರ್ಪುಗಾರ ವಿಸ್ಮಯ ವಿನಾಯಕ್ ಮತ್ತು ಕಾರ್ಯಕ್ರಮದ ನಿರೂಪಕ ಸಿಕೆ ಪ್ರಶಾಂತ್ ಉಪಸ್ಥಿತರಿದ್ದರು.
ಪ್ರಥಮ ಸ್ಥಾನ ಪಡೆದ ಮನೀಶ್ ಶೆಟ್ಟಿ ಮಾತನಾಡಿ,ಕಾಮಿಡಿ ರಾಜೆ 2 ಕಾರ್ಯಕ್ರಮಕ್ಕೆ ಆಯ್ಕೆಯಾದ ಬಳಿಕ ನನ್ನನ್ನು ಅನೇಕ ಮಂದಿ ಗುರುತಿಸುತ್ತಿದ್ದಾರೆ. ನನಗೆ ಅವಕಾಶ ನೀಡಿರುವ ಡೈಜಿವರ್ಲ್ಡ್ ವಾಹಿನಿಯ ಇಡೀ ತಂಡಕ್ಕೆ ಧನ್ಯವಾದಗಳು ಎಂದು ಹೇಳಿದ್ದಾರೆ.
ವಾಲ್ಟರ್ ನಂದಳಿಕೆ ಮಾತನಾಡಿ, ತುಳು ಮನರಂಜನಾ ಜಗತ್ತಿನಲ್ಲಿ ಸ್ಟ್ಯಾಂಡ್-ಅಪ್ ಕಾಮಿಡಿ ಕಾರ್ಯಕ್ರಮವು ಅತ್ಯಂತ ಜನಪ್ರಿಯ ಹಾಸ್ಯ ಕಾರ್ಯಕ್ರಮಗಳಲ್ಲಿ ಒಂದಾಗಿದ್ದು, ಈ ಕಾರ್ಯಕ್ರಮದಿಂದಾಗಿ ಹೊಸ ಪ್ರತಿಭೆಗಳೂ ಸಿಕ್ಕಿದ್ದಾರೆ. ಕರಾವಳಿ ಕರ್ನಾಟಕದಲ್ಲಿ ಸಾಕಷ್ಟು ಪ್ರತಿಭೆಗಳಿದ್ದಾರೆ. ಮುಂಬರುವ ದಿನಗಳಲ್ಲಿ ಹಲವಾರು ಮಹಿಳಾ ಪ್ರತಿಭೆಗಳು ಹೊರ ಬರಬೇಕು ಎಂದಿದ್ದಾರೆ.
ಸುಮಾರು 150 ಸ್ಪರ್ಧಿಗಳು ಆಡಿಷನ್ನಲ್ಲಿ ಭಾಗವಹಿಸಿದ್ದು, ಪ್ರದರ್ಶನದಲ್ಲಿ ಸಿಂಗಲ್ ರೌಂಡ್, ಡಬಲ್ ಧಮಾಕಾ ರೌಂಡ್, ತ್ರಿಕೋನ ರೌಂಡ್ ಮತ್ತು ಪ್ರಾಪ್ಸ್ ರೌಂಡ್ ಒಳಗೊಂಡ ನಾಲ್ಕು ಸುತ್ತುಗಳನ್ನು ನಡೆಸಲಾಗಿತ್ತು. ಇದರಲ್ಲಿ ಪರಿಪೂರ್ಣ ಕಾಮಿಡಿ ಟೈಮಿಂಗ್ ಹೊಂದಿರುವ 10 ಸದಸ್ಯರನ್ನು ಸೆಮಿ-ಫೈನಲ್ ಸುತ್ತಿಗೆ ಆಯ್ಕೆ ಮಾಡಲಾಯಿತು. ಸ್ಟ್ಯಾಂಡ್-ಅಪ್ ಕಾಮಿಡಿ ರಿಯಾಲಿಟಿ ಶೋ 'ಕಾಮಿಡಿ ರಾಜೆ 2' ನಲ್ಲಿ ಐದು ತಿಂಗಳ ಪ್ರದರ್ಶನದ ಬಳಿಕ ಐದು ಸ್ಪರ್ಧಿಗಳನ್ನು ಫೈನಲ್ಗೆ ಆಯ್ಕೆ ಮಾಡಲಾಯಿತು.
ಕಾರ್ಯಕ್ರಮದಲ್ಲಿ 'ಕಾಮಿಡಿ ರಾಜೇ 2' ತಾಂತ್ರಿಕ ತಂಡವನ್ನು ಗುರುತಿಸಿ ಗೌರವಿಸಲಾಯಿತು.
ವಿಜೆ ಮಧುರಾಜ್ ಕಾರ್ಯಕ್ರಮ ನಿರೂಪಿಸಿದರು.