ಮಂಗಳೂರು, ಜೂ 05 (DaijiowrldNews/HR): ಮಂಗಳೂರಿನ ಇಬ್ಬರು ಉದ್ಯಮಿಗಳಿಗೆ 1.15 ಕೋಟಿ ರೂ. ವಂಚಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧನ ಕ್ಕೊಳಗಾಗಿದ್ದ ಮುಂಬೈ ಉದ್ಯಮಿ ಕಳತ್ತೂರು ವಿಶ್ವನಾಥ್ ಶೆಟ್ಟಿಯವರಿಗೆ ನ್ಯಾಯಾಲಯ ಶರತ್ತು ಬದ್ಧ ಜಾಮೀನು ನೀಡಿದೆ.
ಹೆಸರಾಂತ ಕಟ್ಟಡ ನಿರ್ಮಾಣ ಸಂಸ್ಥೆ 'ರೋಹನ್ ಕಾರ್ಪೊರೇಷನ್' ಮುಖ್ಯಸ್ಥರಾದ ರೋಹನ್ ಮುಂತೇರೋ ಮತ್ತು ತೊಕ್ಕೊಟ್ಟುವಿನ 'ಹರ್ಷ ಫೈನಾನ್ಸ್'ನ ಮಾಲಕ ಹರೀಶ್ ರವರಿಗೆ ಕಳತ್ತೂರು ವಿಶ್ವನಾಥ್ ಶೆಟ್ಟಿ ಮತ್ತು ಮುಂಬೈನ ಕದಂ ಎಂಬವರು 300 ಕೋಟಿ ರೂ. ಸಾಲ ತೆಗೆಸಿ ಕೊಡುವ ಆಮಿಷ ಒಡ್ಡಿ 1.15 ಕೋಟಿ ರೂ. ಹಣವನ್ನು ವಂಚಿಸಿರುವ ಬಗ್ಗೆ ಮಂಗಳೂರಿನ ಸೆನ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು.
ಪ್ರಕರಣದ ಆರೋಪಿಗಳ ಪೈಕಿ ವಿಶ್ವನಾಥ್ ಶೆಟ್ಟಿ ಅವರನ್ನು ಒಂದು ವಾರದ ಹಿಂದೆ ಮಂಗಳೂರು ವಿಮಾನ ನಿಲ್ದಾಣದ ಹೊರವಲಯದಲ್ಲಿ ಬಂಧಿಸಲಾಗಿತ್ತು. ಪ್ರಕರಣದ ಪ್ರಮುಖ ಆರೋಪಿ ಕದಂನನ್ನು ಮುಂಬೈ ಕ್ರೈಂ ಬ್ರಾಂಚ್ ಪೊಲೀಸರ ಸಹಾಯ ಪಡೆದು ಬಂದಿಸಿ ಮಂಗಳೂರಿಗೆ ಕರೆತರಲಾಗಿದೆ.
ಆರೋಪಿಗಳ ಪೈಕಿ ವಿಶ್ವನಾಥ್ ಶೆಟ್ಟಿಗೆ ಮಂಗಳೂರಿನ ಸಿಜೆಎಂ ನ್ಯಾಯಾಲಯ ಜಾಮೀನು ನೀಡಿದೆ. ಯುವ ನ್ಯಾಯವಾದಿ ಎಲಿಜೆಬೆತ್ ನೀಲಿಯಾರ ಆರೋಪಿ ಪರವಾಗಿ ವಕಾಲತ್ತು ನಡೆಸಿದ್ದರು. ಈ ಪ್ರಕರಣದಲ್ಲಿ ತನ್ನ ಕಕ್ಷಿಗಾರ ವಿಶ್ವನಾಥ್ ಶೆಟ್ಟಿ ಅಮಾಯಕರಾಗಿದ್ದು ಅವರಿಗೆ ಜಾಮೀನು ನೀಡುವಂತೆ ನ್ಯಾಯಾಲಯಕ್ಕೆ ಎಲಿಜಬೆತ್ ಮನವಿ ಸಲ್ಲಿಸಿದ್ದರು.
ಇನ್ನೋರ್ವ ಆರೋಪಿ ಕದಂ ಪೊಲೀಸ್ ವಶದಲ್ಲಿದ್ದಾನೆ. ಪೋಲಿಸ್ ಮೂಲಗಳು ನೀಡಿದ ಮಾಹಿತಿಯ ಪ್ರಕಾರ ವಂಚಿಸಿದ ಹಣವನ್ನು ಪ್ರಕರಣದ ಮುಖ್ಯ ಆರೋಪಿ ಕದಂ ಹಿಂದಿರುಗಿಸಲು ಒಪ್ಪಿಕೊಂಡಿದ್ದಾನೆ. ಕದಂ ಬಂಧನವನ್ನು ಮಂಗಳೂರು ಪೊಲೀಸರು ಇನ್ನೂ ದೃಢಪಡಿಸಿಲ್ಲ. ಆದರೆ ಕದಂ ನನ್ನು ಮುಂಬೈ ಪೋಲಿಸರ ಸಹಾಯ ಪಡೆದು ಮಂಗಳೂರು ಪೊಲೀಸರು ವಶಕ್ಕೆ ತೆಗೆದುಕೊಂಡಿರುವ ಬಗ್ಗೆ ಅವರ ಕುಟುಂಬಕರು ಸ್ಥಳೀಯ ಪೊಲೀಸ್ ಠಾಣೆಗೆ ಮತ್ತು ನ್ಯಾಯಾಲಯಕ್ಕೆ ದೂರು ನೀಡಿದ್ದಾರೆ ಎಂದು ತಿಳಿದು ಬಂದಿದೆ.