ಉಳ್ಳಾಲ, ಜೂ. 4 (DaijiworldNews/SM): ಸೋಮೇಶ್ವರ ಬೀಚಿನಲ್ಲಿ ಹಿಂದೂ ಸಹೋದರಿಯರಿಗೆ ಅನ್ಯಾಯವಾದಾಗ ಕಾರ್ಯಕರ್ತರು ಸಂಘರ್ಷದ ಮೂಲಕ ಉತ್ತರವನ್ನು ನೀಡಿದ್ದಾರೆಯೇ ಹೊರತು ಪಲಾಯನವಾದಿಗಳಾಗಿಲ್ಲ. ಉಳ್ಳಾಲ ಕ್ಷೇತ್ರದಲ್ಲಿರುವ ಹಿಂದೂ ವಿರೋಧಿ ಜನಪ್ರತಿನಿಧಿಯ ಕೈಗೊಂಬೆಯಂತೆ ಪೊಲೀಸ್ ಇಲಾಖೆ ವರ್ತಿಸಿದರೆ ಮುಂದಿನ ದಿನಗಳಲ್ಲಿ ಉತ್ತರವನ್ನು ಹಿಂದೂ ಸಮಾಜ ಕೊಡಲು ಸಿದ್ಧವಿದೆ ಎಂದು ಹಿಂದೂ ಮುಖಂಡ ಅರುಣ್ ಕುಮಾರ್ ಪುತ್ತಿಲ ಎಚ್ಚರಿಕೆಯನ್ನು ನೀಡಿದ್ದಾರೆ.
ಕಾಪಿಕಾಡು ಗಟ್ಟಿ ಸಮಾಜ ಭವನದಲ್ಲಿ ಹಿಂದೂ ಬಾಂಧವರು ಉಳ್ಳಾಲ ಇವರ ನೇತೃತ್ವದಲ್ಲಿ ಜರಗಿದ ಭಾರತ್ ಮಾತಾ ಪೂಜನಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ಕಾರ್ಯಕರ್ತರ ವಿರುದ್ಧ ಕೇಸು ಹಾಕಲಾಗಿದೆ. ಚಟುವಟಿಕೆಗಳಲ್ಲಿ ಭಾಗಿಯಾದವರಿಗೆ ರಕ್ಷಣೆ ನೀಡಲಾಗಿದೆ. ಕೈ ಬಳೆ ಹಾಕಿದ ಸಮಾಜ ನಮ್ಮದಲ್ಲ. ದ್ವೇಷದ ರಾಜಕಾರಣವನ್ನು ಮಾಡದೆ ಪ್ರೀತಿ ವಿಶ್ವಾಸದ ವಾತಾವರಣ ನಿರ್ಮಿಸುವುದು ಇಲ್ಲಿನ ಜನಪ್ರತಿನಿಧಿಯ ಕರ್ತವ್ಯ.ಪೊಲೀಸ್ ಇಲಾಖೆಯೊಳಗೂ ಹಿಂದೂಗಳಿದ್ದೀರಿ, ಜನಸ್ನೇಹಿ ಇಲಾಖೆಯ ಪೊಲೀಸರಿಗೆ ಗೌರವ ಕೊಡುವ ಹೃದಯ ಶ್ರೀಮಂತಿಕೆ ಇರುವ ಸಮಾಜವೆಂದರೆ ಹಿಂದೂ ಸಮಾಜವಾಗಿದೆ. ಅಸ್ಮಿತೆಯನ್ನು ಉಳಿಸುವ ಸಲುವಾಗಿ ಸರ್ವಸ್ವವನ್ನು ತ್ಯಾಗ ಮಾಡಿದ ಸಮಾಜ, ಹಿಂದೂ ಸಮಾಜ ಪಲಾಯನವಾದಿಯಲ್ಲ. ಸಾಮಾಜಿಕ ಬದ್ಧತೆಯೊಂದಿಗೆ ಬದುಕುವುದು ಸತ್ಯ. ಧರ್ಮದ ನಂಬಿಕೆಗಳ ವಿರುದ್ಧದ ಸಂಗತಿಗಳು ನಡೆದರೆ, ಆರಾಧನೆಗಳ ಅಪಮಾನಗಳು ನಡೆದಲ್ಲಿ ಸಾಮಾಜಿಕ ಬದ್ಧತೆಯ ಜೊತೆಗೆ ಹಿಂದುತ್ವವನ್ನು ಪ್ರತಿಪಾದಿಸುವುದು ಅನಿವಾರ್ಯ. ಸೋಮೇಶ್ವರದಲ್ಲಿ ಲವ್ ಜಿಹಾದ್ ಹೆಸರಿನಲ್ಲಿ ಘಟನೆ ನಡೆದಿದೆ. ಹಿಂದೂ ಕಾರ್ಯಕರ್ತರ ಕಣ್ಣೀರು ಕಂಡಿದ್ದೇವೆ. ಅಧಿಕಾರಕ್ಕೋಸ್ಕರ ಹಿಂದೂ ಸಮಾಜವನ್ನು ಯಾವ ರೀತಿ ಬಳಸಬಹುದು. ದೇವದುರ್ಲಭ ಕಾರ್ಯಕರ್ತರ ಮೇಲೆ ಕೇಸು, ಹಲ್ಲೆಯ ಮುಖಾಂತರ ಅಧಿಖಾರವನ್ನು ಕ್ಷೇತ್ರದಲ್ಲಿ ಸ್ಥಾಪಿಸಿರುವುದು ಕಂಡುಬಂದಿದೆ. ಮೋಜು ಮಸ್ತಿಗೆ ಹಿಂದೂ ಸಹೋದರಿಯರನ್ನು ಉಪಯೋಗಿಸುವ ಸಂದರ್ಭದಲ್ಲಿ ಕಾರ್ಯಕರ್ತರು ವಿರೋಧ ಮಾಡಿದ್ದಾರೆ. ವಿರೋಧಿಸುವುದು ನಮ್ಮ ಧರ್ಮ, ಸಹೋದರಿಯರ ಅತ್ಯಾಚಾರವನ್ನು ಸಹಿಸಲು ಸಾಧ್ಯವೇ ಇಲ್ಲ. ಕಾರ್ಯಕರ್ತರು ಅವರವರ ಕೆಲಸವನ್ನು ಮಾಡುವಂತಹ ಸಂದರ್ಭದಲ್ಲಿ ವಿರೋಧವನ್ನು ಮಾಡುವವರ ಮುಂದಿನ ದಿನಗಳಲ್ಲಿ ಎಚ್ಚರಿಕೆಯಿಂದ ಇರಬೇಕು. ಉಳ್ಳಾಲ ಮತ್ತು ಪುತ್ತೂರು ಎರಡು ಕ್ಷೇತ್ರಗಳಲ್ಲಿ ಕೂಡಾ ಹಿಂದುತ್ವದ ವಿರೋಧವಿರುವ ಜನಪ್ರತಿನಿಧಿಗಳು ಆಯ್ಕೆಯಾಗಿದ್ದು, ಪ್ರತಿ ಕಾರ್ಯಕರ್ತರೊಂದಿಗೆ ಸಂಪರ್ಕವಿಟ್ಟುಕೊಳ್ಳುತ್ತೇವೆ. ಉಳ್ಳಾಲದಲ್ಲಿ ಹಿಂದೂ ವಿರೋಧಿ ವಿಚಾರಗಳು ನಡೆದರೆ, ಹಲ್ಲೆಗಳು ನಡೆದರೆ ಮುಂದೆ ನಿಂತು ನ್ಯಾಯ ಒದಗಿಸುತ್ತೇವೆ. ಸವಾಲುಗಳು, ಸಂಘರ್ಷಗಳು, ಹೋರಾಟಗಳು, ಅಪಮಾನಗಳು ಎಲ್ಲವನ್ನೂ ಸ್ವೀಕಾರ ಮಾಡಿ ಎಂತಹ ಸಂದರ್ಭದಲ್ಲಿಯೂ ಹಿಂದುತ್ವವನ್ನು ಬಿಡುವುದಿಲ್ಲ ಅನ್ನುವ ನಿರ್ಧಾರದೊಂದಿಗೆ ಸಂಘಟಿತರಾಗಿದ್ದೇವೆ. ಆರ್ ಎಸ್ ಎಸ್ ಗೆ 100ರ ಸಂಭ್ರಮದ ಆಸುಪಾಸು, ಕೇಸರಿಯೇ ರಾಷ್ಟ್ರದ ಜೀವನವಾಗಬೇಕು. ಮನೆ ಮನೆಗಳಲ್ಲಿಯೂ ಕೇಸರಿ ಧ್ವಜ ಹಾರಾಡಬೇಕು ಅನ್ನುವ ಸಂಕಲ್ಪದ ಜೊತೆಗೆ ಉಳ್ಳಾಲದ ಜನ ಒಂದು ವೇದಿಕೆಯಡಿ ಸೇರಿದ್ದಾರೆ. ನಿಸ್ವಾರ್ಥ ಮನೋಭಾವದ ಮುಖಾಂತರ ಬದುಕನ್ನು ಸಮಾಜಕ್ಕೆ ಮುಡಿಪಾಗಿಟ್ಟ ಕಾರ್ಯಕರ್ತರಿರುವುದರಿಂದ ಜಿಲ್ಲೆಯಲ್ಲಿ ಹಿಂದುತ್ವ ಜೀವಂತವಾಗಿದೆ. ಅಧಿಕಾರಕ್ಕಾಗಿ ಹಲವು ಬದಲಾವಣೆಗಳಾಗಿರಬಹುದು. ಸ್ವಾರ್ಥದ ವ್ಯವಸ್ಥೆಯಿಂದ ಸವಾಲುಗಳನ್ನು ಸ್ವೀಕರಿಸಿದ್ದೇವೆ ಎಂದರು.
ಪುತ್ತಿಲ ಪರಿವಾರದ ಗೌರವ ಸಲಹೆಗಾರ ರಾಜಶೇಖರ್ ಮಾತನಾಡಿ, ಧರ್ಮಕ್ಕೆ ಸರಿಯಾದ ನಾಯಕತ್ವ ಇಲ್ಲದಾಗಿದೆ. ಕೆಲ ವ್ಯಕ್ತಿಗಳ ಲಾಭಕ್ಕಾಗಿ ನಡೆಯುವ ವಿಚಾರವಾಗುತ್ತಿದೆ. ಧರ್ಮ ಉಳಿಯಬೇಕಾದರೆ ಎಲ್ಲರೂ ಒಂದಾಗಬೇಕಿದೆ. ಹಿಂದೂ ಧರ್ಮದ ಒಗ್ಗಟ್ಟು ಗಟ್ಟಿಯಾಗದೆ ಇರುವುದರಿಂದ ದಬ್ಬಾಳಿಕೆ ನಡೆಯುತ್ತಿದೆ. ಧರ್ಮಕ್ಕಾಗಿ ಹೋರಾಡುವ ಯುವಕರು ಜೈಲುಪಾಲಾಗುತ್ತಿರುವುದು ಜಿಲ್ಲೆಯಾದ್ಯಂತ ನಡೆಯುತ್ತಿದೆ. ಜಾತಿ ಧರ್ಮ ಬೇಧ ಬಿಟ್ಟು ಒಗ್ಗಟ್ಟು ಆಗುವ ಕಾಲ ಬಂದಿದೆ. ಪುತ್ತೂರಿನಲ್ಲಿ ಹಿಂದೂ ಧರ್ಮಕ್ಕೆ ಶಕ್ತಿ ಬೇಕು ಅನ್ನುವ ಉದ್ದೇಶದಿಂದ 63,000 ಮತಗಳನ್ನು ಅರುಣ್ ಪುತ್ತಿಲ ಅವರಿಗೆ ನೀಡಿದ್ದಾರೆ. ಹಿಂದೂ ಧರ್ಮಕ್ಕಾಗಿ 30 ವರ್ಷಗಳ ಕಾಲ ಜೀವನ ಮುಡಿಪಾಗಿಸಿರುವ ಶ್ರೇಷ್ಟ ವ್ಯಕ್ತಿ ಎಂದರು.