ಬಂಟ್ವಾಳ, ಜೂ 03 (DaijiworldNews/MS): ರಾಜ್ಯದಲ್ಲಿ ಅಧಿಕಾರಕ್ಕೆ ಬಂದಿರುವ ಕಾಂಗ್ರೇಸ್ ಸರಕಾರ ಚುನಾವಣಾ ಪೂರ್ವದಲ್ಲಿ ನೀಡಿದ ಭರವಸೆಯನ್ನು ಅನುಷ್ಠಾನಕ್ಕೆ ತಂದು ನುಡಿದಂತೆ ನಡೆದಿದ್ದು, ಮುಖ್ಯ ಮಂತ್ರಿ ಹಾಗೂ ಉಪಮುಖ್ಯಮಂತ್ರಿ ಜೊತೆಗೆ ಸರಕಾರದ ಎಲ್ಲಾ ಸಚಿವರಿಗೂ ಅಭಿನಂದನೆ ಸಲ್ಲಿಸುವುದಾಗಿ ಕೇಂದ್ರದ ಮಾಜಿ ಸಚಿವ, ಹಿರಿಯ ಕಾಂಗ್ರೆಸ್ ನಾಯಕ ಬಿ.ಜನಾರ್ದನ ಪೂಜಾರಿ ಹೇಳಿದ್ದಾರೆ.
ಬಿ.ಸಿ.ರೋಡಿನ ಬಸ್ತಿಪಡ್ಪುವಿನಲ್ಲಿರುವ ತಮ್ಮ ನಿವಾಸದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಜನಪರವಾದ ಸರಕಾರದ ಚಿಂತನೆ ಹಾಗೂ ಪ್ರತಿಯೊಂದು ಭರವಸೆಗಳನ್ನು ನೀಡಿರುವ ಮುಖ್ಯ ಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರಿಗೆ ಅಭಿನಂದನೆ ಸಲ್ಲಿಸುತ್ತೇನೆ ಎಂದರು.ಜೊತೆಗೆ ಭ್ರಷ್ಟಾಚಾರ ರಹಿತವಾಗಿ ಉತ್ತಮವಾದ ಆಡಳಿತವನ್ನು ಕಾಂಗ್ರೆಸ್ ಪಕ್ಷ ರಾಜ್ಯದಲ್ಲಿ ನೀಡಲಿ ಎಂದು ಶುಭಹಾರೈಸಿದರು.
ಡಿಕೆಶಿ ಜೊತೆ ದೂರವಾಣಿ ಮಾತುಕತೆ
ಕೇಂದ್ರದ ಮಾಜಿ ಸಚಿವ ಬಿ.ಜನಾರ್ದನ ಪೂಜಾರಿ ಅವರು ತಮ್ಮ ನಿವಾಸದಿಂದ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರನ್ನು ಪೋನ್ ಮೂಲಕ ಸಂಪರ್ಕ ಮಾಡಲು ಪ್ರಯತ್ನಿಸಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅಧಿಕಾರಿಗಳ ಸಭೆಯೊಂದರಲ್ಲಿ ಭಾಗವಹಿಸಿದ್ದ ಕಾರಣ ಅವರ ಆಪ್ತಸಹಾಯಕರು ಪೋನ್ ರಿಸೀವ್ ಮಾಡಿ ಹತ್ತು ನಿಮಿಷದ ಬಳಿಕ ನಿಮನ್ನು ಸಂಪರ್ಕ ಮಾಡುತ್ತೇವೆ ಎಂದು ಭರವಸೆ ನೀಡಿದ್ದಾರೆ. ಬಳಿಕ ಉಪಮುಖ್ಯಮಂತ್ರಿ ಡಿ.ಕೆ.ಶಿ ಅವರ ಜೊತೆ ಪೋನ್ ಮೂಲಕ ಮಾತನಾಡಿದರು.ನಮಸ್ಕಾರ ದಿಂದ ಆರಂಭವಾದ ಇವರಿಬ್ಬರ ಮಾತು, ಬಳಿಕ ಪೂಜಾರಿ ಅವರ ಆರೋಗ್ಯವನ್ನು ಡಿ.ಕೆ.ಶಿ ವಿಚಾರಿಸಿದರು.ಬಳಿಕ ಪೂಜಾರಿ ಅವರು ಡಿ.ಕೆ.ಶಿ.ಅವರಿಗೆ ಅಭಿನಂದನೆ ಸಲ್ಲಿಸಿದರು. ನೀಡಿದ ಮಾತಿಗೆ ಬದ್ದವಾಗಿ ನಡೆದಿದ್ದೀರಿ.ನೀಡಿದ ಎಲ್ಲಾ ಭರವಸೆಯನ್ನು ರಾಜ್ಯದ ಜನತೆಗೆ ಒದಗಿಸುವ ಕಾರ್ಯಮಾಡಿದ್ದೀರಿ,ನಿಜಕ್ಕೂ ಶ್ಲಾಘನೀಯ ಕಾರ್ಯ ಎಂದು ಅಭಿನಂದನೆ ಸಲ್ಲಿಸಿದರು. ಗೋರ್ಕಣಾಥೇಶ್ವರ ದೇವರು ನಿಮ್ಮನ್ನು ಚೆನ್ನಾಗಿಟ್ಟಿರಲಿ,ಸರಕಾರವನ್ನು ಉತ್ತಮವಾಗಿ ನಡೆಸಲು ದೇವರ ಆಶ್ರೀರ್ವಾದವಿರಲಿ ಎಂದು ಹಾರೈಸಿದರು.
ಕೆಲ ಹೊತ್ತು ಮಾತುಕತೆ ನಡೆಸಿದ ಪೂಜಾರಿ ಡಿಕೆಶಿ ಕೊನೆಯಲ್ಲಿ ನಾನು ಮಂಗಳೂರಿಗೆ ಬಂದ ಸಮಯದಲ್ಲಿ ನಿಮ್ಮನ್ನು ಬೇಟಿಯಾಗುತ್ತೇನೆ ಎಂದು ಭರವಸೆ ನೀಡಿದರು.ಈ ಸಂದರ್ಭದಲ್ಲಿ ಕೆ.ಪಿ.ಸಿ.ಸಿ.ಪ್ರಮುಖರಾದ ತಾರನಾಥ ಕಳ್ಳಿಗೆ, ಕರುಣಾಕರ ಶೆಟ್ಟಿ ಉಪಸ್ಥಿತರಿದ್ದರು