ಕುಂದಾಪುರ, ಜೂ 03 (DaijiworldNews/HR): ಭಾರತವನ್ನು ಪ್ರತಿನಿಧಿಸಿ ವಿಶ್ವದಲ್ಲಿ ಭಾರತವನ್ನು ಗೆಲ್ಲಿಸಿದ ಮಹಿಳಾ ಕುಸ್ತಿಪಟುಗಳ ಮೇಲೆ ನಡೆಸಲಾದ ಅತ್ಯಾಚಾರದಿಂದ ಭಾರತವನ್ನೇ ನಾಚಿಕೆಗೇಡಿಗೆ ದೂಡಿದೆ. ಆರೋಪಿ, ಬಿಜೆಪಿ ಸಂಸದ ಬ್ರಿಜ್ ಭೂಷಣ್ ಶರಣ್ ಸಿಂಗ್ ನನ್ನು ತಕ್ಷಣ ಬಂಧಿಸಿ ಶಿಕ್ಷೆ ವಿಧಿಸಬೇಕು ಎಂದು ರೈತಸಂಘದ ಮುಖಂಡ ಚಂದ್ರಶೇಖರ್ ವಿ ಆಗ್ರಹಿಸಿದರು.
ವಿವಿಧ ಸಂಘಟನೆಗಳಾದ ಸಂಯುಕ್ತ ಕಿಸಾನ್ ಮೋರ್ಛಾ, ಸಿಐಟಿಯು, ಕೆಪಿಆರೆಸ್, ಜೆಎಂಎಸ್ ಎಐಎಡಬ್ಲ್ಯೂಯು, ಡಿಹೆಚ್ಎಸ್, ಡಿವೈಎಫೈ, ಮೊದಲಾದ ಸಂಘಟನೆಗಳ ವತಿಯಿಂದ ನಡೆದ ಪ್ರತಿಭಟನಾ ಸಭೆಯಲ್ಲಿ ಮಾತನಾಡಿದ ಅವರು, "ಕೇಂದ್ರ ಸರ್ಕಾರ ಅಂದಿನಿಂದ ಇಂದಿನವರೆಗೂ ಮಹಿಳಾ ವಿರೋಧಿ ನೀತಿಯನ್ನು ಅನುಸರಿಸುತ್ತಾ ಬಂದಿದೆ. ಮನ್ ಕೀ ಬಾತ್ ಎನ್ನುವ ಪ್ರಧಾನಿ ನರೇಂದ್ರ ಮೋದಿ ಮಹಿಳಾ ಕುಸ್ತಿಪಟಗಳಿಗಾದ ಅನ್ಯಾಯದ ವಿರುದ್ಧ ತುಟಿ ಪಿಟಿಕ್ಕೆನ್ನುತ್ತಿಲ್ಲ. ಗೃಹ ಸಚಿವ ಅಮಿತ್ ಷಾ ಚಕಾರವೆತ್ತುತ್ತಿಲ್ಲ ಎಂದು ಹೇಳಿದ ಅವರು, ಸಂಸತ್ ಭವನದ ಉದ್ಘಾಟನೆ ಸಂದರ್ಭದಲ್ಲಿಯೂ ದೇಶದ ಪರಮೋಚ್ಚ ಮಹಿಳೆಯಾದ ರಾಷ್ಟ್ರಪತಿಯವರನ್ನು ಕಡೆಗಣಿಸಿದ್ದು ಕೇಂದ್ರದ ಮಹಿಳಾ ವಿರೋಧಿ ನೀತಿಗೆ ಹಿಡಿದ ಕನ್ನಡಿ" ಎಂದರು.
ಸುಪ್ರೀಂ ಕೋರ್ಟ್ ಮಧ್ಯಪ್ರವೇಶದ ಬಳಿಕ ಪೋಕ್ಸೋ ಪ್ರಕರಣ ದಾಖಳಿಸಿದ ಪೊಲೀಸರು ಇದುವರೆಗೆ ಆರೋಪಿಯನ್ನು ಬಂಧಿಸಿಲ್ಲ. ಆರೋಪಿಗೆ ಶಿಕ್ಷೆಯಾಗುವವರೆಗೆ ಕುಸ್ತಿಪಟುಗಳ ಪರವಾದ ಹೋರಾಟ ದೇಶಾದ್ಯಂತ ಮುಂದುವರೆಯಲಿದೆ ಎಂದು ಎಚ್ಚರಿಸಿದರು.
ರಮೇಶ್ ಗುಲ್ವಾಡಿ ಸ್ವಾಗತಿಸಿದರು. ಸುರೇಶ್ ಕಲ್ಲಾಗರ, ಹೆಚ್ ನರಸಿಂಹ, ಕೆ.ಶಂಕರ್, ಜನವಾದಿ ಮಹಿಳಾ ಸಂಘಟನೆಯ ಶೀಲಾವತಿ ನಾಡಾ, ಬಲ್ಕೀಸ್ ಬಾನು, ಡಿವೈಎಫ್ ಐ ರವಿ.ವಿ.ಎಂ, ರಾಜಾ ಬಿಟಿಆರ್, ಆಟೋ ಚಾಲಕರ ಸಂಘದ ರಮೇಶ್ ವಿ, ರಾಜು ದೇವಾಡಿಗ, ಕಾಂಗ್ರೆಸ್ ಬ್ಲಾಕ್ ಕಾರ್ಯದರ್ಶಿ ಆಶಾ ಕರ್ವಾಲೋ, ಗಣೇಶ್ ಕೆ ನೆಲ್ಲಿಬೆಟ್ಟು, ಧನು ಕುಂದಾಪುರ ಮೊದಲಾದವರು ಮತ್ತು ನೂರಾರು ಪ್ರತಿಭಟನಾಕಾರರು ಹಾಜರಿದ್ಧರು.